ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ: 29ನೇ ಮಹಡಿಯಿಂದ ಜಿಗಿದು 12 ವರ್ಷದ ಬಾಲಕಿ ಆತ್ಮಹತ್ಯೆ

ಅಪಾರ್ಟ್‌ಮೆಂಟ್‌ವೊಂದರ 29ನೇ ಮಹಡಿಯ ಬಾಲ್ಕನಿಯಿಂದ ಜಿಗಿದು 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಪಾರ್ಟ್‌ಮೆಂಟ್‌ವೊಂದರ 29ನೇ ಮಹಡಿಯ ಬಾಲ್ಕನಿಯಿಂದ ಜಿಗಿದು 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯ ಬೇಗೂರು ರಸ್ತೆಯಲ್ಲಿ ನಡೆದಿದೆ.

ಪೋಷಕರ ಏಕೈಕ ಮಗುವಾಗಿದ್ದ 12 ವರ್ಷದ ಬಾಲಕಿ ಖಿನ್ನತೆಗೆ ಒಳಗಾಗಿದ್ದಳು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಡೆತ್ ನೋಟ್ ಪತ್ತೆಯಾಗಿಲ್ಲ. ಪೊಲೀಸರ ಪ್ರಕಾರ, ನಿನ್ನೆ ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ಅಪಾರ್ಟ್‌ಮೆಂಟ್ ಸಂಕೀರ್ಣದ ಸೆಕ್ಯುರಿಟಿ ಗಾರ್ಡ್‌ಗೆ ಶಬ್ದ ಕೇಳಿ ಕಾರಿಡಾರ್‌ಗೆ ಓಡಿ ಬಂದಾಗ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. 

ಮೃತ ಬಾಲಕಿ ತಂದೆ ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಬೇಗೂರು ರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್‌ನ 29ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಬಾಡಿಗೆಗೆ ನೆಲೆಸಿದ್ದಾರೆ. ದಂಪತಿಗೆ ಒಬ್ಬಳೇ ಮಗಳಿದ್ದು, ಬನ್ನೇರುಘಟ್ಟ ರಸ್ತೆಯ ಖಾಸಗಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ನಿನ್ನೆ ಮುಂಜಾನೆ 4.30ಕ್ಕೆ ಬಾಲಕಿ ಎದ್ದು ಮನೆಯ ಹಾಲ್‌ಗೆ ಬಂದಿದ್ದಳು. ಆಗ ತಾಯಿ ಇಷ್ಟು ಬೇಗ ಏಕೆ ಎದ್ದೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಬಾಲಕಿ ತಾಯಿಗೆ ಸರಿಯಾಗಿ ಉತ್ತರ ನೀಡಲಿಲ್ಲ. ಬಳಿಕ ಮತ್ತೆ ಮಲಗುವುದಾಗಿ ರೂಮ್‌ಗೆ ಹೋಗಿದ್ದಾಳೆ. ಬಳಿಕ ತಾಯಿ ಅಡುಗೆ ಮನೆ ಕಡೆಗೆ ತೆರಳಿದ್ದಾರೆ.

ನಿನ್ನೆ ಮುಂಜಾನೆ 5 ಗಂಟೆ ಸುಮಾರಿಗೆ ಸೆಕ್ಯೂರಿಟಿ ಗಾರ್ಡ್‌ ಜೋರಾದ ಶಬ್ಧ ಕೇಳಿ ಹೋಗಿ ನೋಡಿದಾಗ ಬಾಲಕಿ ಮೇಲಿಂದ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ. ತಕ್ಷಣ ಆತ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಅಧ್ಯಕ್ಷರು ಹಾಗೂ ಅಪಾರ್ಟ್‌ಮೆಂಟ್‌ ನಿವಾಸಿಗಳು ಬಂದು ನೋಡಿದಾಗ ಬಾಲಕಿಯ ಗುರುತು ಸಿಕ್ಕಿದೆ. ಬಳಿಕ ಆಕೆಯ ಪೋಷಕರಿಗೆ ವಿಷಯ ತಿಳಿಸಿದ್ದಾರೆ.

ಇದು ಆತ್ಮಹತ್ಯೆ. ನಮಗೆ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ, ಬಾಲಕಿ ಖಿನ್ನತೆಗೆ ಒಳಗಾಗಿದ್ದಳು ಎಂದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆ ವರದಿ ಸಿಗಬೇಕಿದ್ದು, ಹೆಚ್ಚಿನ ವಿವರಗಳನ್ನು ನಾವು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ಬಾಲಕಿಯ ತಂದೆ, ಸಾಫ್ಟ್‌ವೇರ್ ಇಂಜಿನಿಯರ್, ಆರು ತಿಂಗಳ ಹಿಂದೆ ಕೆಲಸ ತೊರೆದು ಷೇರು ವ್ಯಾಪಾರದಲ್ಲಿ ತೊಡಗಿದ್ದರು. ಆಕೆಯ ತಾಯಿ ಗೃಹಿಣಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com