ಅಕ್ರಮ ಆಸ್ತಿ ಗಳಿಕೆ ಪ್ರಕರಣ: 10 ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ 10 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 40 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು. ಸ್ಥಿರ ಮತ್ತು ಚರ ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ 10 ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ 40 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು. ಸ್ಥಿರ ಮತ್ತು ಚರ ಆಸ್ತಿಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಅನಿಲ್ ರಾಥೋಡ್ ನೇತೃತ್ವದಲ್ಲಿ ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ 40 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.

ಬಳ್ಳಾರಿಯ ವಿಎಸ್​ಕೆ ವಿಶ್ವವಿದ್ಯಾಲಯದ ನಂದಿಹಳ್ಳಿಯ ಪಿಜಿ‌ ಸೆಂಟರ್​ನ ನಿರ್ದೇಶಕ ಪ್ರೊ.ರವಿ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನೆಹರು ಕಾಲೊನಿಯ ಅಪಾರ್ಟ್​ಮೆಂಟ್​ನಲ್ಲಿರುವ ಮನೆಯಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ಕಡತಗಳ ಪರಿಶೀಲನೆ ನಡೆಯುತ್ತಿದೆ.

ಮಂಡ್ಯದ ಲೋಕೋಪಯೋಗಿ ಇಲಾಖೆಯ ಇಇ ಹರ್ಷ ಅವರ ಕಚೇರಿ ಹಾಗೂ ಮನೆ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರದ ಮನೆ, ಮಂಡ್ಯ ಜಿಲ್ಲೆಯ ಸಂಬಂಧಿಕರ ಮನೆಗಳು, ಮಂಡ್ಯ ಕಚೇರಿ, ಕಲ್ಲಹಳ್ಳಿಯ ಮಾವ ಹಾಗೂ ನಾಗಮಂಗಲದ ತೋಟದ ಮನೆಗಳಲ್ಲಿ ಕಡತಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದ ಹಿನ್ನೆಲೆಯಲ್ಲಿ ಹಾಸನದ ಆಹಾರ ನಿರೀಕ್ಷಕ ಜಗನ್ನಾಥ್ ಅವರ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದು, ಕಚೇರಿ ಹಾಗೂ ನಿವಾಸದಲ್ಲಿ ಶೋಧ ನಡೆಸುತ್ತಿದ್ದಾರೆ. ಜಗನ್ನಾಥ್ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕಿರಣ್ ಅವರ ನಿವಾಸ ಮತ್ತು ಕಚೇರಿ ಮೇಲೂ ದಾಳಿಯಾಗಿದೆ. ಲೋಕಾಯುಕ್ತ ಎಸ್ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ತಿರುಮಲೇಶ್, ಇನ್ಸ್​ಪೆಕ್ಟರ್​ಗಳಾದ ಬಾಲು ಮತ್ತು ಶಿಲ್ಪಾ ನೇತೃತ್ವದ ಶೋಧ ನಡೆಯುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ನೇತ್ರಾವತಿ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. 13 ವರ್ಷಗಳಿಂದ ಅಧಿಕ ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ಕಡೂರು ಪಟ್ಟಣದಲ್ಲಿರುವ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ವೇಳೆ ರೂ. 5 ಲಕ್ಷ ನಗದು, 900 ಗ್ರಾಂ ಚಿನ್ನ ಮತ್ತು ಬೆಳ್ಳಿ ಆಭರಣಗಳು ದೊರೆತಿವೆ ಎಂದು ತಿಳಿದುಬಂದಿದೆ.

ಮುಡಾ ಎಂಜಿನಿಯರ್ ಯಜ್ಞೇಂದ್ರ ಅವರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಮೈಸೂರಿನ ಜೆ.ಪಿ.ನಗರದ ಮನೆ, ವಿಜಯನಗರದ ಅಪಾರ್ಟ್ ಮೆಂಟ್, ಕೆ.ಆರ್.ನಗರ ತಾಲೂಕಿನ ನಗರ್ಲೆ ಗ್ರಾಮದ ಯಜ್ಞೇಂದ್ರ ಅವರ ಸಹೋದರನ ಮನೆಗಳಲ್ಲೂ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ತುಮಕೂರಿನ ಶಿರಾ ಗೇಟ್ ಬಳಿ ಇರುವ ಕೆಆರ್ ಡಿಎಲ್ ಎಂಜಿನಿಯರ್ ಹನುಮಂತರಾಯಪ್ಪ ಅವರ ಮನೆ ಮೇಲೆ ಲೋಕಾ ಅಧಿಕಾರಿಗಳು ನಡೆಸಿ, ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.

ಮಂಗಳೂರಿನ ಮೆಸ್ಕಾಂ ಇಂಜಿನಿಯರ್ ಶಾಂತಕುಮಾರ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅತ್ತಾವರ ವಿಭಾಗದ ಮೆಸ್ಕಾಂ ಇಇ ಶಾಂತಕುಮಾರ್ ಅವರ ದೇರೆಬೈಲ್ ಕೊಂಚಾಡಿ ಹಾಗೂ ಕೊಂಚಾಡಿಯ ಶಿವಪ್ರಸಾದ್ ಗೋಲ್ಡ್ ಅಪಾರ್ಟ್​ಮೆಂಟ್​‌ನಲ್ಲಿರುವ ಮನೆ ಹಾಗೂ ಬೆಂಗಳೂರು ನಿವಾಸದಲ್ಲಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. ಕಳೆದ ಐದಾರು ವರ್ಷಗಳಿಂದ ಮಂಗಳೂರಿನಲ್ಲಿ ಶಾಂತಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ವರ್ಗಾವಣೆಗೊಂಡು ಸ್ಥಳ ನಿರೀಕ್ಷಣೆಯಲ್ಲಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ರವಿಕುಮಾರ್ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೊಳ್ಳೇಗಾಲ ತಾಲೂಕಿನ ಆಲಹಳ್ಳಿ ಗ್ರಾಮದಲ್ಲಿರುವ ಹಾಗೂ ಮೈಸೂರಿನಲ್ಲಿ ರವಿಕುಮಾರ್ ಮನೆ, ಅವರ ಬಾಮೈದುನನ ಮನೆ ಹಾಗೂ ಆಲಗಳ್ಳಿಯಲ್ಲಿರುವ ತಂದೆ ಮನೆಯಲ್ಲಿ ಏಕಕಾಲಕ್ಕೆ ಲೋಕಾ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ರವಿಕುಮಾರ್ ಮೊದಲು ಚಾಮರಾಜನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಟಿ.ನರಸೀಪುರ, ನಂತರ ಹುಣಸೂರಿಗೆ ವರ್ಗಾವಣೆಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com