Sexual harassment: ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರ ಬಂಧನ

ವಿಜಯನಗರ ಮತ್ತು ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾದ 2 ಪ್ರತ್ಯೇಕ ಘಟನೆಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಜಯನಗರ ಮತ್ತು ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾದ 2 ಪ್ರತ್ಯೇಕ ಘಟನೆಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೊದಲ ಪ್ರಕರಣದಲ್ಲಿ, ಡಿಸೆಂಬರ್ 30, 2023 ರಂದು ಹೋಟೆಲ್‌ನಲ್ಲಿ ಮಹಿಳಾ ಗ್ರಾಹಕಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಗೃಹಬಳಕೆಯ ಗ್ಯಾಸ್ ಡೆಲಿವರಿ ಏಜೆಂಟ್‌ನನ್ನು ವಿಜಯನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ಘಟನೆಯ ಸಿಸಿಟಿವಿ ಮತ್ತು ವಿಡಿಯೊ ದೃಶ್ಯಾವಳಿಗಳು ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿತ್ತು. ಸಂತ್ರಸ್ತೆ ಕ್ಯಾಶ್ ಕೌಂಟರ್ ಬಳಿ ಇದ್ದಾಗ ಅವರನ್ನು ಮುಟ್ಟುವಂತೆ ಸ್ನೇಹಿತರು ಸವಾಲು ಎಸೆದರು ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಸಂತ್ರಸ್ತೆ ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದರು. ಪೊಲೀಸರು ಹೋಟೆಲ್ ಮ್ಯಾನೇಜರ್ ನಿಂದ ದೂರನ್ನು ಸ್ವೀಕರಿಸಿ ಕಾರ್ಯಾಚರಣೆ ನಡೆಸಿದ್ದರು.

ಬಂಧಿತ ಆರೋಪಿಯನ್ನು ಆರ್‌ಪಿಸಿ ಲೇಔಟ್‌ನ ಹಂಪಿ ನಗರದ ನಿವಾಸಿ ಚಂದನ್ ಎಂದು ಗುರುತಿಸಲಾಗಿದ್ದು, ಹೊಟೇಲ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿ ಮಹಿಳೆಯ ಬಳಿ ಬಂದು ಹಿಂಬದಿಯಿಂದ ಆಕೆಯನ್ನು ಸ್ಪರ್ಶಿಸುತ್ತಿರುವುದು ಕಂಡುಬಂದಿದೆ. ಕಿರುಕುಳದ ನಂತರ ಅವರ ಸ್ನೇಹಿತರು ಶಿಳ್ಳೆ ಹೊಡೆದಿದ್ದಾರೆ ಎಂದು ವರದಿಯಾಗಿದೆ. ಘಟನೆ ಬಳಿಕ ಸಂತ್ರಸ್ತೆ ಆರೋಪಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ಜನರು ಜಮಾಯಿಸಲು ಆರಂಭಿಸಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದರು. ಇದೀಗ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಎರಡನೇ ಪ್ರಕರಣದಲ್ಲಿ, ಜನವರಿ 5 ರಂದು ರಾತ್ರಿ 8.40 ರ ಸುಮಾರಿಗೆ ರಿಂಗ್ ರಸ್ತೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ 35 ವರ್ಷದ ಸುನೀಲ್ ಕುಮಾರ್ ಶರ್ಮಾ ಎಂಬಾತನನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ತನ್ನ ಕಾರಿನಲ್ಲಿ ತನ್ನ ಸ್ನೇಹಿತರಿಗಾಗಿ ಪಾರ್ಕ್ ಎದುರಿನ ಪಾರ್ಕಿಂಗ್ ಜಾಗದಲ್ಲಿ ಕಾಯುತ್ತಿದ್ದಾಗ ಆರೋಪಿಗಳು ವಾಹನದ ಬಳಿ ಬಂದು ಆಕೆಯನ್ನು ದಿಟ್ಟಿಸಿ ಅಸಭ್ಯ ಸನ್ಹೆಗಳನ್ನು ಮಾಡಲು ಪ್ರಾರಂಭಿಸಿದರು. ಈ ವೇಳೆ ಸಂತ್ರಸ್ತೆ ಕಾರಿನ ಬಾಗಿಲುಗಳನ್ನು ಲಾಕ್ ಮಾಡಿ ಸ್ಥಳದಿಂದ ಹೋಗಲು ಪ್ರಯತ್ನಿಸಿದರು. ಆದರೆ ಆಕೆಯ ಕಾರಿನ ಹಿಂದೆ ಇನ್ನೊಂದು ಕಾರು ನಿಂತಿದ್ದರಿಂದ ಆಕೆ ಹೋಗಲಾಗಲಿಲ್ಲ. ಈ ವೇಳೆ ದುಷ್ಕರ್ಮಿ ಆಕೆಯನ್ನೇ ದಿಟ್ಟಿಸುತ್ತಲೇ ಕಾರನ್ನು ಸುತ್ತತೊಡಗಿದ. ಸಂತ್ರಸ್ತೆ ನಂತರ ಸ್ಟೀರಿಂಗ್ ಕೆಳಗೆ ಅಡಗಿಕೊಂಡು ತನ್ನ ಸ್ನೇಹಿತರಿಗೆ ಕರೆ ಮಾಡಿದ್ದಾಳೆ. ಆದರೆ ಅಷ್ಟರೊಳಗೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.

ಈ ಘಟನೆ ಕುರಿತು ಸಂತ್ರಸ್ಥ ಮಹಿಳೆ ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದರು. ಪೋಸ್ಟ್ ನಲ್ಲಿ ನಗರ ಪೊಲೀಸರಿಗೆ ಟ್ಯಾಗ್ ಕೂಡ ಮಾಡಿದ್ದರು. ಆಕೆ ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದ ಮಹದೇವಪುರ ಪೊಲೀಸರು ಸಂತ್ರಸ್ತೆಯನ್ನು ಸಂಪರ್ಕಿಸಿ ಆಕೆಯಿಂದ ಹೆಚ್ಚಿನ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com