
ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮತ್ತೊಂದೆಡೆ ಡೆಂಗ್ಯುವಿನಿಂದ ಸಂಭವಿಸುತ್ತಿರುವ ಸಾವು ಕೂಡ ಆತಂಕವನ್ನುಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂಗೆ ಬಲಿಯಾದವರ ಕುರಿತು ಡೆತ್ ಆಡಿಟ್ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಖಾಸಗಿ ಆಸ್ಪತ್ರೆಯವರು ಕೂಡ ಡೆಂಗ್ಯೂ ಡೆತ್ ಗಳು ಹಾಗೂ ಪ್ರಕರಣಗಳನ್ನ ನೋಟಿಫೈ ಮಾಡಬೇಕು. ಯಾವುದೇ ಖಾಸಗಿ ಆಸ್ಪತ್ರೆಗೆ ಬರುವ ಡೆಂಗ್ಯೂ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಜೊತೆಗೆ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು ಹಾಗೂ ಡೆತ್ ಮಾಹಿತಿಯನ್ನು ಹಂಚಿಕೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದ್ದು, ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಯವರು ಡೆಂಗ್ಯೂ ಮಾಹಿತಿಯನ್ನು ಮುಚ್ಚಿಡಬಾರದು ಎಂದು ಹೇಳಿದೆ.
ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯಾದ್ಯಂತ ಒಟ್ಟು 93,012 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 5,878 ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿ, 310 ಬೆಂಗಳೂರು ನಗರ ಮತ್ತು 467 ಬೆಂಗಳೂರು ಗ್ರಾಮಾಂತರದಲ್ಲಿ ಈ ವರ್ಷದ ಜನವರಿಯಿಂದ ವರದಿಯಾಗಿದೆ ಎಂದು ತಿಳಿದುಬಂದಿದೆ.
ಜೂನ್ 28 ರಂದು ಇಬ್ಬರು 24 ವರ್ಷದ ಪುರುಷ ಮತ್ತು 80 ವರ್ಷದ ಮಹಿಳೆ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಆದರೆ, ಡೆತ್ ಆಡಿಟ್ ವರದಿಯು ಅದನ್ನು ಇನ್ನೂ ಖಚಿತಪಡಿಸಿಲ್ಲ.
ಈ ನಡುವೆ ಆರೋಗ್ಯ ಇಲಾಖೆಯು ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳ ನಿಯಮಿತ ತಪಾಸಣೆ ನಡೆಸುತ್ತಿದ್ದು, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ನಗರ ಮತ್ತು ಗ್ರಾಮೀಣ ವ್ಯವಸ್ಥೆಗಳಲ್ಲಿ ನಿಯಮಿತವಾಗಿ ಫಾಗಿಂಗ್ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ (ವಿಬಿಡಿ) ನಿಯಂತ್ರಣ ಅಧಿಕಾರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಪಿಎಚ್‌ಸಿ) ವೈದ್ಯಾಧಿಕಾರಿಗಳು ಈ ಪ್ರಕ್ರಿಯೆಯನ್ನು ನಿಯಮಿತವಾಗಿ ಪರಿಶೀಲಿಸುತ್ತಿದ್ದಾರೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Advertisement