
ಬೆಂಗಳೂರು: ಜೂನ್ 25 ರಿಂದ ನಾಪತ್ತೆಯಾಗಿದ್ದ ಮಡಿವಾಳ ಠಾಣೆಯ ಪೊಲೀಸ್ ಪೇದೆಯೊಬ್ಬರು ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ತೆರೆದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತ ಪೇದೆಯನ್ನು ಶಿವರಾಜ್ ಎಂದು ಗುರುತಿಸಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಶವ ಪತ್ತೆಯಾಗಿದೆ. ಕಾನ್‌ಸ್ಟೆಬಲ್ ನಾಪತ್ತೆಯಾದ ನಂತರ ಅವರ ಸಹೋದರ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತ ಪೇದೆ ಶಿವರಾಜ್ ಕುಟುಂಬ ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿತ್ತು.
ಶಿವರಾಜ್ 50 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಜೂನ್ 25ರಂದು ಕೆಲಸ ನಿಮಿತ್ತ ಮನೆಯಿಂದ ಹೊರಟಿದ್ದರು. ಸ್ವಲ್ಪ ಸಮಯದ ನಂತರ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡು ಬಂತು. ಮೃತ ಪೇದೆ ಶಿವರಾಜ್ ರಾಯಚೂರಿನ ದೇವದುರ್ಗ ಮೂಲದವರಾಗಿದ್ದು, 2020ನೇ ಬ್ಯಾಚ್‌ನ ಪೊಲೀಸ್ ಪೇದೆಯಾಗಿದ್ದರು.
ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಶಿವರಾಜ್ ಮನನೊಂದಿದ್ದರು ಎಂದು ತಿಳಿದು ಬಂದಿದೆ. ಸಂಬಂಧಿಯೊಬ್ಬರು ಈತನ ವಿರುದ್ಧ ದಾವಣಗೆರೆಯ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದರು. ಶಿವರಾಜ್ ವಿರುದ್ಧ ದೂರುದಾರರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದ ವಿಚಲಿತರಾದ ಅವರು ತಮ್ಮ ಜೀವನವನ್ನು ಅಂತ್ಯಗೊಳಿಸಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
Advertisement