
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಿರುವ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ಆರಂಭಿಸುವಂತೆ ಸೂಚನೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಡೆಂಗ್ಯೂ ನಿಯಂತ್ರಣ ಕ್ರಮ ಜೊತೆಗೆ ಝೀಕಾ ವೈರಸ್ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಸ್ಥಳೀಯ ಪಾಲಿಕೆಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಈ ವೇಳೆ ಡೆಂಗ್ಯೂ ಹೆಚ್ಚಿರುವ ಪ್ರದೇಶಗಳನ್ನು ಪತ್ತೆ ಹಚ್ಚಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಡೆಂಗ್ಯೂ ಹೆಚ್ಚಿರುವ ಪ್ರದೇಶದಲ್ಲಿ ಯಾರಿಗೆ ಜ್ವರ ಕಂಡು ಬಂದರೂ ಕಡ್ಡಾಯವಾಗಿ ಡೆಂಗ್ಯೂ ಪರೀಕ್ಷೆಗೊಳಪಡಿಸಬೇಕು. ಆರಂಭದಲ್ಲಿಯೇ ಡೆಂಗ್ಯೂ ಪತ್ತೆ ಹಚ್ಚಿದರೆ ಗುಣಪಡಿಸಲು ಸಾಧ್ಯವಿದೆ. ಒಂದು ವೇಳೆ ವಿಳಂಬವಾದರೆ ಸಾವುಗಳು ಸಂಭವಿಸಲಿವೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸುವುದು ಆದ್ಯತೆಯಾಗಬೇಕು ಎಂದು ಹೇಳಿದರು.
ಡೆಂಗ್ಯೂ ಮತ್ತು ಝೀಕಾ ವೈರಸ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಬೇಕು. ಮನೆ ಮನೆಗೆ ಆಶಾ ಕಾರ್ಯಕರ್ತರ ಭೇಟಿ ನೀಡಬೇಕು. ವೈದ್ಯಕೀಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ವಿಜ್ಞಾನ ಶಿಕ್ಷಕರ ಮೂಲಕ ಮಕ್ಕಳಲ್ಲಿ ಡೆಂಗ್ಯೂ ಕುರಿತು ಅರಿವು ಮೂಡಿಸಬೇಕ. ಲಾರ್ವಾ ಉತ್ಪತ್ತಿಯಾಗುವುದು ಕಂಡು ಬಂದರೆ, ತಕ್ಷಣವೇ ಅದನ್ನು ನಾಶಪಡಿಸುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯವರು ವಾರಕ್ಕೊಮ್ಮೆ ಫೀಲ್ಡ್ ಗಿಳಿದು ಕೆಲಸ ಮಾಡಬೇಕು. ಡೆಂಘೀ ಪರೀಕ್ಷೆಗೆ ನಿಗದಿ ಮಾಡಿರುವ ದರವನ್ನು ಕಡ್ಡಾಯವಾಗಿ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇನ್ನು, ಈಡಿಸ್ ಸೊಳ್ಳೆಯಿಂದಲೇ ಝೀಕಾ ವೈರಸ್ ಕಂಡು ಬರಲಿದ್ದು, ನೆರೆ ರಾಜ್ಯ ಕೇರಳದಲ್ಲಿ ಝೀಕಾವೈರಸ್ ಕಂಡು ಬಂದಿರುವುದರಿಂದ ರಾಜ್ಯದಲ್ಲೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಶಿವಮೊಗ್ಗದಲ್ಲಿ ಒಂದು ಶಂಕಿತ ಝೀಕಾ ಕೇಸ್ ಪತ್ತೆಯಾಗಿದೆ. ಆದರೆ, ಇನ್ನೂ ಖಚಿತವಾಗಿಲ್ಲ. ಝೀಕಾ ಅಷ್ಟೇನು ಅಪಾಯಕಾರಿ ಅಲ್ಲದಿದ್ದರೂ ಎಚ್ಚರಿಕೆ ವಹಿಸಬೇಕು ಎಂದರು.
Advertisement