ಮಹದಾಯಿ ಯೋಜನೆಗೆ ಮತ್ತೆ ಗೋವಾ ಸರ್ಕಾರ ಕ್ಯಾತೆ: ಜಲಾನಯನ ಪ್ರದೇಶಕ್ಕೆ ಕೇಂದ್ರದ ತಂಡ ಭೇಟಿ

ಇಂದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿಯ ಮಹದಾಯಿ ಜಲನಯನ ಪ್ರದೇಶಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಲಿದೆ.
ಮಹದಾಯಿ ನದಿಯ ಚಿತ್ರ
ಮಹದಾಯಿ ನದಿಯ ಚಿತ್ರ
Updated on

ಬೆಳಗಾವಿ: ಮಹದಾಯಿ ಯೋಜನೆಗೆ ಗೋವಾ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ. ಕೇಂದ್ರ ಸರ್ಕಾರದ ಮೇಲೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಒತ್ತಡ ಹಾಕಿದ್ದು, ಈ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ‘ಮಹದಾಯಿ ಪ್ರವಾಹ’ ತಂಡ ರಚಿಸಿದೆ.

ಈ ಬಗ್ಗೆ ಗೋವಾ ಸಿಎಂ ಪ್ರಮೋದ್ ಅವರು ಪ್ರತಿಕ್ರಿಯೆ ನೀಡಿದ್ದು, ಗೋವಾ ಸರ್ಕಾರದ ಒತ್ತಡದಿಂದ ಮಹದಾಯಿ ಪ್ರವಾಹ ತಂಡ ಕಣಕುಂಬಿಗೆ ಭೇಟಿ ಕೊಡುತ್ತಿದೆ ಎಂದು ಹೇಳಿದ್ದಾರೆ.

ಇಂದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿಯ ಮಹದಾಯಿ ಜಲನಯನ ಪ್ರದೇಶಕ್ಕೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಲಿದೆ. ಸದ್ಯದ ವಸ್ತು ಸ್ಥಿತಿ, ನೀರು ಹರಿದು ಎಲ್ಲಿಗೆ ಹೋಗುತ್ತಿದೆ ಎಂದು ಪರಿಶೀಲನೆ ನಡೆಸಲಿದೆ. ಪ್ರವಾಹ್ ತಂಡದ ಮುಂದೆ ಕರ್ನಾಟಕ ಸರ್ಕಾರ ಸತ್ಯವನ್ನು ಬಹಿರಂಗಪಡಿಸುವುದರಿಂದ ಗೋವಾಗೆ ಈ ತಪಾಸಣೆ ನಿರ್ಣಾಯಕವಾಗಿದೆ. ಇದು ಮಹದಾಯಿ ಕುರಿತ ನಮ್ಮ ನಿರಂತರ ಹೋರಾಟಕ್ಕೆ ಮತ್ತಷ್ಟು ಶಕ್ತಿ ನೀಡಲಿದೆ. ಇದು ನಮ್ಮ ಪ್ರಕರಣವನ್ನು ಬಲಪಡಿಸುತ್ತದೆ ಮತ್ತು ನಮ್ಮ ನಿಲುವನ್ನು ಸಮರ್ಥಿಸುತ್ತದೆ ಎಂದು ತಿಳಿಸಿದ್ದಾರೆ.

ಯೋಜನೆ ಮಂಜೂರಾತಿಗಾಗಿ ಕರ್ನಾಟಕವು ಪ್ರಧಾನಿ ಮೋದಿಯವರನ್ನು ಸಂಪರ್ಕಿಸಲಿ. ಗೋವಾಕ್ಕೆ ಮಹದಾಯಿ ನದಿಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವ ಮೂಲಕ ನಾವು (ಗೋವಾ) ಈಗಾಗಲೇ ಪ್ರಧಾನಿಯವರ ಮುಂದೆ ವಿವರವಾದ ಮಾಹಿತಿ ನೀಡಿದ್ದೇವೆ.

ಆಗಸ್ಟ್‌ನಲ್ಲಿ ಈ ವಿಷಯವನ್ನು ಪಟ್ಟಿ ಮಾಡಲಾಗಿರುವುದರಿಂದ ನಮ್ಮ ಸರ್ಕಾರ ನದಿ ನೀರಿನ ಕುರಿತು ಇರುವ ಸತ್ಯಗಳನ್ನು ಪುರಾವೆಯೊಂದಿಗೆ ಸುಪ್ರೀಂ ಕೋರ್ಟ್‌ನ ಮುಂದೆ ಪ್ರಸ್ತುತ ಪಡಿಸಲಿದೆ ಎಂದು ಹೇಳಿದ್ದಾರೆ.

ಮಹದಾಯಿ ನದಿಯ ಚಿತ್ರ
ಗೋವಾ ಸರ್ಕಾರದ ಒತ್ತಾಯದ ಮೇರೆಗೆ 'ಪ್ರವಾಹ್​' ಪ್ರಾಧಿಕಾರದಿಂದ ಮಹಾದಾಯಿ ಜಲಾನಯನ ಪ್ರದೇಶಗಳ ಪರಿಶೀಲನೆ

ಏತನ್ಮಧ್ಯೆ ಮಹಾದಾಯಿ ಜಲ ವಿವಾದ ನ್ಯಾಯಮಂಡಳಿ (MWDT) ಈಗಾಗಲೇ ತನ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸುಪ್ರೀಂಕೋರ್ಟ್ ಕೂಡ ಆದೇಶ ಹೊರಡಿಸಿದೆ. ಆದರೂ, ಪ್ರವಾಹ್ ತಂಡದ ಪರಿಶೀಲನೆಯ ಅಗತ್ಯವೇನಿದೆ ಎಂದು ಬೆಳಗಾವಿಯ ಹಲವಾರು ಸಂಘಟನೆಗಳು ಪ್ರಶ್ನೆ ಮಾಡುತ್ತಿವೆ.

ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಮಾತನಾಡಿ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಮಹದಾಯಿ ಯೋಜನೆಯಡಿ ರಾಜ್ಯ ಸರ್ಕಾರವು ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದೆ ಎಂಬ ಭಾವನೆಯಿಂದ ಗೋವಾ ಸರ್ಕಾರವು ಗಡಿಯಲ್ಲಿನ ಯೋಜನಾ ಸ್ಥಳಗಳಿಗೆ ಭೇಟಿ ನೀಡಲು ಪ್ರವಾಹ್ ತಂಡವನ್ನು ರವಾನಿಸುತ್ತಿದೆ ಎಂದು ಹೇಳಿದ್ದಾರೆ.

ಕಳಸಾ-ಬಂಡೂರಿ ಯೋಜನೆಯನ್ನು ಮುಂದುವರಿಸಲು ಕರ್ನಾಟಕ ಸರ್ಕಾರ ಪರಿಸರ ಮತ್ತು ವನ್ಯಜೀವಿಗಳ ಅನುಮತಿಗಾಗಿ ಕಾಯುತ್ತಿದೆ ಎನ್ನಲಾಗಿದೆ. ಅದು ನಿಜವೇ ಆಗಿದ್ದರೆ, ರಾಜ್ಯ ಸರ್ಕಾರವು ಪ್ರವಾಹ್ ತಂಡದ ಭೇಟಿಯನ್ನು ತಡೆಯಬೇಕಿತ್ತು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಜುಲೈ 8 ರಂದು ಬೆಂಗಳೂರಿನಲ್ಲಿ ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಸಭೆ ನಡೆಸುತ್ತಿದ್ದು, ಈ ವೇಳೆ ಪ್ರವಾಹ್ ತಂಡದ ಗಮನಕ್ಕೆ ಸರ್ಕಾರದ ಕ್ರಮದ ಬಗ್ಗೆ ಗಮನಕ್ಕೆ ತರಬೇಕು ಎಂದಿದ್ದಾರೆ.

ಈ ನಡುವೆ ಮಹದಾಯಿ ಯೋಜನೆ ಜಾರಿಯಾಗದಂತೆ ಗೋವಾ ಸರ್ಕಾರ ಕೇಂದ್ರದ ವಿವಿಧ ಇಲಾಖೆಗಳ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದೆ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿವೆ.

ಕಳೆದ ಆರು ವರ್ಷಗಳಿಂದ, ಮಹಾದಾಯಿ ಜಲ ವಿವಾದ ನ್ಯಾಯಮಂಡಳಿ ಕರ್ನಾಟಕ 13 tmcft ನೀರನ್ನು ನೀಡಿದ್ದರೂ ಕೂಡ ಗೋವಾ ಸರ್ಕಾರ ಯೋಜನೆಗೆ ಆಕ್ಷೇಪಿಸುತ್ತಿದೆ ಎಂದು ಸಂಘಟನೆಗಳು ಹೇಳಿವೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com