
ಬೆಂಗಳೂರು: ಎಸ್ಪಿ, ಡಿಸಿಪಿ ಮತ್ತು ಐಜಿ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ವ್ಯಾಪ್ತಿಯ ಪ್ರತಿಯೊಂದು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಖಡಕ್ ಸೂಚನೆ ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ,ಪೊಲೀಸರು ರಿಯಲ್ ಎಸ್ಟೇಟ್ ಮಾಡುವವರೊಂದಿಗೆ ಯಾವ ಕಾರಣಕ್ಕೂ ಶಾಮೀಲಾಗಬಾರದು. ಇವರೇ ಸ್ವತ: ರಿಯಲ್ ಎಸ್ಟೇಟ್ ಮಾಡುವುದು ತಿಳಿದರೆ ಕಠಿಣ ಕ್ರಮ ಜರುಗಿಸಲಾಗುವುದು,ಎಸ್.ಪಿ, ಡಿಸಿಪಿ, ಐಜಿ, ಪೊಲೀಸ್ ಆಯುಕ್ತರು ಪ್ರತಿ ದಿನ ಒಂದು ಪೊಲೀಸ್ ಠಾಣೆಗೆ ಭೇಟಿ ನೀಡಲೇ ಬೇಕು. ಸ್ಥಳೀಯ ಜನರನ್ನು ಭೇಟಿ ಮಾಡಿ ಇಲ್ಲಿನ ಸಮಸ್ಯೆಗಳೇನು ಎಂದು ಅರಿಯಬೇಕು ಎಂದರು.
ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಯದೆ ಯಾವ ಅಪರಾಧಗಳು ನಡೆಯಲು ಸಾಧ್ಯವಿಲ್ಲ.ಮಾದಕ ವಸ್ತು, ಕಳ್ಳತನ, ದರೋಡೆ, ಜೂಜು, ಮಟ್ಕಾ ಮುಂತಾದವು ಗೊತ್ತಿಲ್ಲದೆ ನಡೆಯಲು ಸಾಧ್ಯವಿಲ್ಲ. ಕೆಲವೆಡೆ ಪೋಲಿಸಿನವರು ಇಂಥವರ ಜೊತೆ ಶಾಮೀಲಾಗುತ್ತಾರೆ. ಅವರು ಮನಸ್ಸು ಮಾಡಿದರೆ ಬಹುತೇಕ ಅಪರಾಧಗಳನ್ನು ತಡೆಯಲು ಸಾಧ್ಯ. ಇವರೆಲ್ಲರೂ ಜಾಗೃತರಾಗಲು ಪೊಲೀಸ್ ಅಧಿಕಾರಿಗಳು ಮೇಲಿಂದ ಮೇಲೆ ಭೇಟಿ ನೀಡಬೇಕು. ಕನಿಷ್ಠ ಒಂದು ತಿಂಗಳಲ್ಲಿ ಮೂರು ಠಾಣೆಗಳಿಗೆ ಭೇಟಿ ನೀಡಿ ಜನಸಂಪರ್ಕ ಮಾಡಿದರೆ ವಿಷಯ ತಿಳಿಯುತ್ತದೆ ಇದನ್ನು ಕಟ್ಟುನಿಟ್ಟಾಗಿ ಮಾಡಲು ಸೂಚಿಸಲಾಗಿದೆ ಎಂದರು.
ಎಸ್ಪಿ ಮತ್ತು ಐಜಿ ಮಟ್ಟದ ಅಧಿಕಾರಿಗಳು ನಿಯಮಿತವಾಗಿ ಪ್ರತಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ ಇದನ್ನು ತಪ್ಪಿಸಬಹುದು. ನಾಳೆಯಿಂದಲೇ ಎಸ್‌ಪಿ, ಐಜಿ ಠಾಣೆಗಳಿಗೆ ಭೇಟಿ ನೀಡಬೇಕು, ಭೇಟಿ ನೀಡಿದ ಅರ್ಧ ಗಂಟೆಯಲ್ಲಿ ಶಾಸ್ತ್ರ ಮುಗಿಸಬಾರದು, ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು ಎಂದರು.
ಸುಳ್ಳು ಸುದ್ದಿ ಹರಡದಂತೆ ಎಚ್ಚರಿಕೆ: ನಕಲಿ ಸುದ್ದಿಗಳು ಸಮಾಜಕ್ಕೆ ಕಂಟಕವಾಗಿದೆ.ಇವುಗಳು ವಿಪರೀತವಾಗಿ ಹೆಚ್ಚುತ್ತಿವೆ. ಇವುಗಳನ್ನು ತಡೆಯಲು ನಾವು ಫ್ಯಾಕ್ಟ್ ಚೆಕ್ ಘಟಕಗಳನ್ನು ಮಾಡಿದ್ದೇವೆ. ಆದರೂ ನಕಲಿ ಸುದ್ದಿಗಳು ಹೆಚ್ಚಾಗುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಯಾವುದೇ ಮುಲಾಜಿಲ್ಲದೆ ದೂರು ದಾಖಲಿಸಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಹಿರಿಯ ಪೊಲೀಸ್ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದರೆ ಕೆಳಹಂತದ ಅಧಿಕಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಪೊಲೀಸರಿಗೆ ದೂರದೃಷ್ಟಿಯಿರಬೇಕು: ಪೊಲೀಸರ ಮಧ್ಯೆ ಸಮನ್ವಯದ ಕೊರತೆಯಿದೆ. ಪೊಲೀಸರಿಗೆ ದೂರದೃಷ್ಟಿ ಇರಬೇಕು. ಒಂದು ಮಾಹಿತಿ ಬಂದರೆ ಅದರ ಬಗ್ಗೆ ಫಾಲೋ ಆಫ್ ಕ್ರಮ ವಹಿಸಬೇಕು. ಹುಬ್ಬಳ್ಳಿಯಲ್ಲಿ ನೇಹಾ ಕೊಲೆಯ ನಂತರ ಆದ ಮತ್ತೊಂದು ಕೊಲೆ ಪ್ರಕರಣದಲ್ಲಿ ಆರೋಪಿ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸೂರು ನೀಡಿದಾಗಲೇ ಕ್ರಮಕೈಗೊಂಡಿದ್ದಾರೆ ಕೊಲೆ ತಡೆಯಲು ಸಾಧ್ಯವಾಗುತ್ತಿತ್ತು ಎಂದು ಉದಾಹರಣೆಗಳನ್ನು ನೀಡಿ ಸೂಚನೆ ನೀಡಲಾಗಿದೆ. ಎಲ್ಲಾ ಪೋಲೀಸರು ಶಿಸ್ತು ಕಾಪಾಡಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.
ಮಾದಕವಸ್ತುಗಳ ದಂಧೆ ನಿಯಂತ್ರಣಕ್ಕೆ ಕ್ರಮ: ಮಾದಕವಸ್ತುಗಳ ದಂಧೆ ಮೈಸೂರು, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ ಬೆಳಗಾವಿ ಮುಂತಾದೆಡೆ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಈ ವ್ಯವಹಾರದಲ್ಲಿ ಭಾಗಿಯಾಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇ-ಬೀಟ್ ಎಂದರೇನು ಎಂದು ಬಹಳ ಪೊಲೀಸರಿಗೆ ತಿಳಿದಿಲ್ಲ. ಜನಸಂದಣಿ ಇರುವಲ್ಲಿ ಹಾಗೂ ನಿರ್ಜನ ಪ್ರದೇಶದಲ್ಲಿ ಇ - ಬೀಟ್ ಹೆಚ್ಚು ಮಾಡಲಾಗುವುದು. ಪೊಲೀಸರ ಹಾಜರಿ ಸಮವಸ್ತ್ರದಲ್ಲಿರಬೇಕು. ಆಗ ಜನರಲ್ಲಿ ಭಯ ಮೂಡುತ್ತದೆ. ಇದರಿಂದ ಅಪರಾಧಗಳನ್ನು ನಿಲ್ಲಿಸಲು ಸಾಧ್ಯವಾಗುತ್ತದೆ ಎಂದರು.
ಪೊಲೀಸರು ಕಾನೂನು ವ್ಯವಸ್ಥೆಯನ್ನು ಸುಧಾರಿಸಬೇಕು: ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಜೀರೋ ಟ್ರಾಫಿಲ್ ವ್ಯವಸ್ಥೆ ಮಾಡಬಾರದು ಎಂದು ಸೂಚಿಸಲಾಗಿದೆ. ಕಾನ್ಸ್ ಟೇಬಲ್ ಗಳ ಜೊತೆಗೆ ಉನ್ನತ ಅಧಿಕಾರಿಗಳು ಕೂಡ ಸಂಚಾರ ನಿಯಂತ್ರಣ ಮಾಡಲು ಸೂಚಿಸಲಾಗಿದೆ. ಪೊಲೀಸರು ಕಾನೂನು ವ್ಯವಸ್ಥೆಯನ್ನು ಸುಧಾರಿಸಬೇಕು ಎಂಬುದು ನಮ್ಮ ಉದ್ದೇಶ, ಇದಕ್ಕೆ ಪೋಲಿಸರು ಸಹಕರಿಸುತ್ತಾರೆ ಎಂಬ ನಂಬಿಕೆ, ವಿಶ್ವಾಸ ಇದೆ. ಪೋಲೀಸರು ಮನಸ್ಸು ಮಾಡಿದರೆ ಅಪರಾಧಗಳನ್ನು ತಡೆಗಟ್ಟುವುದು ಅಸಾಧ್ಯವೇನಲ್ಲ. ಇಂಟೆಲಿಜೆನ್ಸ್ ಬಲಬಡಿಸಲೂ ಕೂಡ ಎಲ್ಲಾ ಪ್ರಯತ್ನ ಮಾಡಲಾಗುವುದು, ನಮ್ಮ ಎಲ್ಲಾ ಕಾರ್ಯಗಳೂ ಕೂಡ ಪಾರದರ್ಶಕವಾಗಿರಬೇಕು ಎಂದು ಸೂಚಿಸಲಾಗಿದೆ. ಉದ್ದೇಶಪೂರ್ವಕವಾಗಿ ಕರ್ತವ್ಯಲೋಪ ಮಾಡಿದರೆ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು ಎಂದರು.
ಹೊಸ ಕಾನೂನು ಕುರಿತು ಪ್ರತಿಕ್ರಿಯಿಸಿದ ಸಿಎಂ, ಈಗಾಗಲೇ ತರಬೇತಿ ನೀಡಲಾಗಿದೆ ಹಾಗೂ ಕೈಪಿಡಿಯನ್ನು ಪ್ರಕಟಿಸಲಾಗಿದೆ. ಹೊಸ ಕಾಯ್ದೆಯಲ್ಲಿ ಸಿ.ಆರ್.ಪಿ.ಸಿಯಲ್ಲಿ ಬದಲಾವಣೆಯಾಗಿದೆ. ಎವಿಡಿಯನ್ಸ್, ಸಿ.ಆರ್.ಪಿ.ಸಿ ಕೇಂದ್ರ ಸರ್ಕಾರದ ಕಾಯ್ದೆಯಾಗಿದ್ದು 1860 ನಲ್ಲಿ ರೂಪಿಸಲಾಗಿದೆ. ವಿರೋಧಪಕ್ಷದವರು ಪ್ರಕರಣಗಳನ್ನು ಸಿಬಿಐ ಗೆ ವಹಿಸಲು ಒತ್ತಾಯಿಸುತ್ತಾರೆ. ಆದರೆ ಅಲ್ಲಿರುವವರೂ ನಮ್ಮ ಪೊಲೀಸರೇ. ಸಿಬಿಐ, ಸಿಐಡಿ ಕೂಡ ತನಿಖಾ ಸಂಸ್ಥೆಗಳೇ ಎಂದರು.
Advertisement