
ಮಡಿಕೇರಿ: 'ಲೈಂಗಿಕ ಹಗರಣ'ಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಎಂಟು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಗಳು 'Locanto App' ಮೂಲಕ ಲೈಂಗಿಕ ಸೇವೆ ನೀಡುವುದಾಗಿ ಆನ್‌ಲೈನ್‌ನಲ್ಲಿ ಜನರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದರು. ಗ್ರಾಹಕರು 'ಕುಶಾಲನಗರ ಟಾಪ್ ಮಾಡೆಲ್ ಸೆಕ್ಸಿ ಆಂಟೀಸ್ ಸರ್ವೀಸ್' ವೆಬ್‌ಸೈಟ್‌ಗೆ ಲಾಗಿನ್ ಮಾಡಬೇಕಾಗಿತ್ತು, ಅಲ್ಲಿ ಅವರಿಗೆ ಆನ್‌ಲೈನ್‌ನಲ್ಲಿ 'ವೇಶ್ಯಾವಾಟಿಕೆ ಸೇವೆಗೆ' ಬುಕ್ ಮಾಡಲು ಆಯ್ಕೆಗಳನ್ನು ಒದಗಿಸಲಾಗುತಿತ್ತು ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಕುಶಾಲನಗರದ ಸಂತ್ರಸ್ತರೊಬ್ಬರು ವಂಚನೆಗೆ ಬಲಿಯಾದ ನಂತರ ಘಟನೆ ಬೆಳಕಿಗೆ ಬಂದಿದೆ. ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಒಂದು ಗಂಟೆಗೆ 1,500 ರೂ. ಮತ್ತು ರಾತ್ರಿಗೆ 4,000 ರೂಪಾಯಿ ನೀಡಿ ಲೈಂಗಿಕ ಸೇವೆಗೆ ಬುಕ್ ಮಾಡಬಹುದು ಎಂದು ಆರೋಪಿಯೊಬ್ಬರು ವಿವರಿಸಿದ್ದರು. ಅದೇ ರೀತಿ ಸಂತ್ರಸ್ತ ವ್ಯಕ್ತಿ ಆನ್ ಲೈನ್ ನಲ್ಲಿ 1,500 ರೂ. ಪಾವತಿಸಿದ್ದರೂ ಸೇವೆಗಾಗಿ ಕುಶಾಲನಗರದ ಕಾಳೇಘಾಟ್ ಲಾಡ್ಜ್ ಬಳಿ ಬರುವಂತೆ ತಿಳಿಸಿದ್ದರು. ಅದರಂತೆ ಅವರು ಆ ಸ್ಥಳಕ್ಕೆ ತೆರಳಿದಾಗ ಹೆಚ್ಚಿನ ಹಣ ನೀಡುವಂತೆ ಬೇಡಿಕೆ ಇಡಲಾಗಿದೆ. ಸಂತ್ರಸ್ತ ವ್ಯಕ್ತಿ ಹೋಟೆಲ್ ಮ್ಯಾನೇಜರ್ ಬಳಿ ವಿಚಾರ ತಿಳಿಸಿದಾಗ ಅವರು ಅಂತಹ ಯಾವುದೇ ಸೇವೆ ಇಲ್ಲ ಎಂದಿದ್ದಾರೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ತನಿಖೆಯ ನಂತರ ಹಾಸನ ಜಿಲ್ಲೆಯ ಮಂಜುನಾಥ್ (29) ಸಂದೀಪ್ ಕುಮಾರ್ (25) ರಾಕೇಶ್ (24), ಜಯಲಕ್ಷ್ಮಿ (29), ಸಹನಾ (19), ಪಲ್ಲವಿ (30), ಅಭಿಷೇಕ್ (24) ಮತ್ತು ಅಪ್ರಾಪ್ತ ಬಾಲಕಿ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಿ, ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 66 (ಸಿ), 66 (ಡಿ), 419, 420 ಮತ್ತು 468 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಜೂನ್ 29 ರಂದು ದೂರು ದಾಖಲಿಸಲಾಗಿದೆ. ಆರೋಪಿಗಳು ಇದೇ ರೀತಿಯ ಘಟನೆಗಳಲ್ಲಿ ರಾಜ್ಯದಾದ್ಯಂತ ಹಲವರನ್ನು ವಂಚಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಸಂತ್ರಸ್ತರಿಂದ 3 ಲಕ್ಷ ರೂ.ಗೂ ಹೆಚ್ಚು ವಂಚಿಸಿದ್ದಾರೆ. ಎಸ್ಪಿ ಕೆ ರಾಮರಾಜನ್ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಡಿವೈಎಸ್ಪಿ ಗಂಗಾಧರಪ್ಪ ಮತ್ತು ಇತರ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
Advertisement