ದೇಗುಲಕ್ಕೆ ಹೋಗುತ್ತಿದ್ದ ಮಹಿಳೆಗೆ ಪುಂಡರ ಕಾಟ; ಪೋಸ್ಟ್ ಮಾಡಿ ಅಳಲು ತೋಡಿಕೊಂಡ ಸಂತ್ರಸ್ಥೆ!

ಕುಟುಂಬ ಸಮೇತರಾಗಿ ಮಲೆ ಮಹದೇಶ್ವರ ದೇಗುಲಕ್ಕೆ ಹೋಗುತ್ತಿದ್ದ ಮಹಿಳೆಗೆ ಪುಂಡರು ಕಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
bikers booked for abusing woman
ಮಹಿಳೆಗೆ ಕಾಟಕೊಟ್ಟ ಪುಂಡರು

ಬೆಂಗಳೂರು: ಕುಟುಂಬ ಸಮೇತರಾಗಿ ಮಲೆ ಮಹದೇಶ್ವರ ದೇಗುಲಕ್ಕೆ ಹೋಗುತ್ತಿದ್ದ ಮಹಿಳೆಗೆ ಪುಂಡರು ಕಾಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ನಾಗರಭಾವಿಯಲ್ಲಿ ಈ ಘಟನೆ ನಡೆದಿದ್ದು, ನೀತು ಬಳೇಗಾರ್ ಎಂಬ ಮಹಿಳೆ ತಮಗಾದ ಕರಾಳ ಅನುಭವವನ್ನು ಟ್ವೀಟ್ ಮಾಡಿದ್ದಾರೆ. ಕಾರಿನಲ್ಲಿ ಹೋಗುತ್ತಿದ್ದಾಗ ತಮ್ಮ ಕಾರನ್ನು ಹಿಂಬಾಲಿಸಿದ ಇಬ್ಬರು ಪುಂಡರು ವೀಲಿಂಗ್ ಮಾಡಿ ತಮಗೆ ಅಡಚಣೆ ಮಾಡಿದರು ಎಂದು ಪೋಸ್ಟ್ ನಲ್ಲಿ ದೂರಿದ್ದಾರೆ.

ನಾಗರಭಾವಿ ಔಟರ್ ರಿಂಗ್ ರೋಡ್ ಬಳಿ ನಿನ್ನೆ ರಾತ್ರಿ 11.40ರ ಸುಮಾರಿಗೆ ನೀತು ಬಳೆಗಾರ್ ಕುಟುಂಬಸ್ಥರ ಜೊತೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕೆಲ ಪುಂಡರು ನಂಬರ್ ಪ್ಲೇಟ್ ಇಲ್ಲದ ಡ್ಯೂಕ್ ಬೈಕ್ ನಲ್ಲಿ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ.

ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಮಹಿಳೆಯನ್ನ ನಿಂದಿಸಿದ್ದಾರೆ. ಸದ್ಯ ನೀತು ಅವರು ಈ ಘಟನೆ ಸಂಬಂಧ ಪುಂಡರ ಫೋಟೋ ಸಮೇತ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸಾಮಾನ್ಯ ಜನರಿಗೆ ಸೇಫ್ಟಿ ಇಲ್ಲ. ದಯಮಾಡಿ ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ನೀತು ಅವರು ಎಕ್ಸ್ ಖಾತೆ ಮೂಲಕ ದೂರು ನೀಡಿ ಮನವಿ ಮಾಡಿದ್ದಾರೆ.

ಅಲ್ಲದೆ ಇತ್ತೀಚಿನ ದಿನಗಳಲ್ಲಿ ಈ ರಸ್ತೆಯಲ್ಲಿ ವಾಹನಗಳ ಹಿಂಭಾಗದಲ್ಲಿ ನಂಬರ್ ಪ್ಲೇಟ್ ಇಲ್ಲದೆ ವೀಲಿಂಗ್ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಪ್ರಶ್ನಿಸಿದವರನ್ನು ಗೂಂಡಾಗಳಂತೆ ಹೆದರಿಸಿ ಅಶ್ಲೀಲವಾಗಿ ಬೈಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಸಾಮಾನ್ಯ ಜನರಿಗೆ ಸುರಕ್ಷತೆ ಇಲ್ಲ, ಈ ರೀತಿಯ ವ್ಯಕ್ತಿಗಳಿಂದ ಸಾಮಾನ್ಯ ಜನರನ್ನು ರಕ್ಷಿಸಲು ಈ ರಸ್ತೆಗಳಲ್ಲಿ ಪೊಲೀಸರಿಲ್ಲ ಎಂದು ನೀತು ದೂರಿದ್ದಾರೆ.

ದೂರು ದಾಖಲಿಸಲಾಗಿದೆ ಎಂದ ಪೊಲೀಸರು

ಇನ್ನು ಮಹಿಳೆ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಇಲಾಖೆ ನಿಮ್ಮ ದೂರನ್ನು ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ರವಾನಿಸಲಾಗಿದೆ. ಶೀಘ್ರ ಅಧಿಕಾರಿಗಳನ್ನು ನಿಮ್ಮನ್ನು ಸಂಪರ್ಕಿಸಿ ಮಾಹಿತಿ ಪಡೆಯಲಿದ್ದಾರೆ. ತುರ್ತು ಸಂದರ್ಭಗಳಲ್ಲಿ 112ಗೆ ಕರೆ ಮಾಡಿ ಎಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com