
ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಇದು ಪ್ರವಾಸಿಗರಲ್ಲಿ ಆತಂಕ ಹುಟ್ಟಿಸಿದೆ.
ಚಿರತೆಗಳು ವಿಜಯ ವಿಠ್ಠಲ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಕಂಡುಬರುತ್ತಿದ್ದು, ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.
ವಿಜಯ ವಿಠ್ಠಲ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅನೇಕ ಪ್ರವಾಸಿಗರ ಕಣ್ಣಿಗೆ ಚಿರತೆ ಬಿದ್ದಿದೆ. ಯಾವುದೇ ಅಹಿತಕರ ಘಟನೆ ನಡೆಯುವ ಮುನ್ನ ಅರಣ್ಯ ಇಲಾಖೆ ಚಿರತೆ ಹಿಡಿಯಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.
ಹಂಪಿ ಮಾರ್ಗದರ್ಶಕ ಹಾಗೂ ಸ್ಥಳೀಯ ನಿವಾಸಿ ವಿರೂಪಾಕ್ಷಿ ವಿ ಹಂಪಿ ಮಾತನಾಡಿ, ಇದೇ ಮೊದಲ ಬಾರಿಗೆ ಹೇಮಕೂಟ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ. ಸಂಜೆ ವೇಳೆಗೆ ಚಿರತೆ ಕಾಣಿಸಿಕೊಂಡಿದ್ದು ಸಾಕಷ್ಟು ಆಘಾತಕಾರಿಯಾಗಿದೆ. ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಕರಡಿ ಮತ್ತು ಚಿರತೆಗಳಂತಹ ಕಾಡು ಪ್ರಾಣಿಗಳ ಆವಾಸಸ್ಥಾನವಾಗಿದೆ. ಆದರೆ, ವಿರೂಪಾಕ್ಷ ದೇವಾಲಯದ ಬಳಿ ಚಿರತೆ ಕಾಣಿಸಿಕೊಂಡಿರುವುದು ಆಘಾತಕಾರಿ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಹೇಮಕೂಟ ಬೆಟ್ಟದ ಮೇಲೆ ಚಿರತೆ ಸುಮಾರು ಎರಡು ಗಂಟೆಗಳ ಕಾಲ ಕುಳಿತಿತ್ತು, ಈ ಬಗ್ಗೆ ಪ್ರವಾಸಿಗರು ಮಾಹಿತಿ ನೀಡಿದರೂ ಪೊಲೀಸ್ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತಲುಪಲು ಎರಡು ಗಂಟೆ ತೆಗೆದುಕೊಂಡರು, ನಂತರ ಶೋಧ ಕಾರ್ಯಾಚರಣೆ ನಡೆಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಹಂಪಿ ಹೊರವಲಯದಲ್ಲಿ ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿತ್ತು. ಇದೀಗ ವಿರೂಪಾಕ್ಷ ದೇವಾಲಯದ ಬಳಿಯೇ ಚಿರತೆ ಕಾಣಿಸಿಕೊಂಡಿದ್ದು, ಅಪಾಯ ಎದುರಾಗುವುದಕ್ಕೂ ಮುನ್ನ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Advertisement