ಬೆಂಗಳೂರು: ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿರತೆ ಸಫಾರಿ ಆರಂಭ

ಇದು ದಕ್ಷಿಣ ಭಾರತದ ಪ್ರಥಮ ಮತ್ತು ದೇಶದಲ್ಲಿಯೇ ಅತಿ ದೊಡ್ಡ ಚಿರತೆ ಸಫಾರಿ ಆಗಿದೆ. ಪ್ರಸ್ತುತ 8 ಚಿರತೆಗಳನ್ನು ತೆರೆದ ವನ ಪ್ರದೇಶದಲ್ಲಿ ಸಫಾರಿಗೆ ಬಿಡಲಾಗಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನ
ಬನ್ನೇರುಘಟ್ಟ ಜೈವಿಕ ಉದ್ಯಾನವನ

ಬೆಂಗಳೂರು: ಹುಲಿ ಸಫಾರಿ, ಸಸ್ಯಾಹಾರಿ ಪ್ರಾಣಿಗಳ ಸಫಾರಿ, ಸಿಂಹ ಸಫಾರಿ, ಕರಡಿ ಸಫಾರಿ ಇರುವ ಬನ್ನೇರುಘಟ್ಟ ಉದ್ಯಾನದಲ್ಲಿ ನೂತನವಾಗಿ ನಿರ್ಮಿಸಿರುವ ಚಿರತೆ ಸಫಾರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಬುಧವಾರ ಚಾಲನೆ ನೀಡಿದರು.

ಇದು ದಕ್ಷಿಣ ಭಾರತದ ಪ್ರಥಮ ಮತ್ತು ದೇಶದಲ್ಲಿಯೇ ಅತಿ ದೊಡ್ಡ ಚಿರತೆ ಸಫಾರಿ ಆಗಿದೆ. ಪ್ರಸ್ತುತ 8 ಚಿರತೆಗಳನ್ನು ತೆರೆದ ವನ ಪ್ರದೇಶದಲ್ಲಿ ಸಫಾರಿಗೆ ಬಿಡಲಾಗಿದೆ. ಇದು ಈ ಉದ್ಯಾನದ ಮತ್ತೊಂದು ಆಕರ್ಷಣೆಯಾಗಿದ್ದು, ಪ್ರವಾಸಿಗರು ಮತ್ತು ಸಂದರ್ಶಕರನ್ನು ಸೆಳೆಯಲಿದೆ ಎಂಬ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಚಿರತೆ ಸಫಾರಿ ಪ್ರದೇಶವು ನೈಸರ್ಗಿಕ ಬಂಡೆಗಳಿಂದ ಹಾಗೂ ಅರೆ-ಎಲೆ ಉದುರುವ ಕಾಡುಗಳಿಂದ ಕೂಡಿದೆ. ಕೇಂದ್ರ ಮೃಗಾಲಯ ಪ್ರಾಧಿ ಕಾರದ ಮಾರ್ಗಸೂಚಿಗಳ ಪ್ರಕಾರ, 20 ಹೆಕ್ಟೇರ್ ಪ್ರದೇಶವನ್ನು ಗುರುತಿಸಿ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ. ಒಟ್ಟು 4.5 ಕೋಟಿ ರೂ. ವೆಚ್ಚದಲ್ಲಿ ಸುರಕ್ಷಿತ ವಿನ್ಯಾಸ ರೂಪಿಸಲಾಗಿದೆ. ಈ ಇಡೀ ಪ್ರದೇಶಕ್ಕೆ 4.5 ಮೀಟರ್ ಎತ್ತರದ ಲಂಬ ಚೈನ್ ಲಿಂಕ್ ಜಾಲರಿ ಅಳವಡಿಸಲಾಗಿದ್ದು, ಎಂಎಸ್ ಶೀಟ್ಗಳನ್ನು 1.5 ಮೀಟರ್ ಎತ್ತರವಿರುವ 30ಡಿಗ್ರಿ ಇಳಿಜಾರಿನ ಕೋನದಲ್ಲಿ ಹಾಕುವ ಮೂಲಕ ಚಿರತೆಗಳು ಹೊರಗೆ ಬಾರದಂತೆ ಎಚ್ಚರ ವಹಿಸಲಾಗಿದೆ.

ಬನ್ನೇರುಘಟ್ಟ ಸುತ್ತ ಮುತ್ತ ಬೆಟ್ಟಗುಡ್ಡಗಳಿದ್ದು, ಇದು ಚಿರತೆಗಳು ವಾಸಿಸಲು ಉತ್ತಮ ತಾಣವಾಗಿದೆ. ಹೀಗಾಗಿಯೇ ಇಲ್ಲಿ ಹೆಚ್ಚಿನ ಸಂಖ್ಯೆ ಚಿರತೆಗಳೂ ಇವೆ. ಈ ಪೈಕಿ ಹೊಲ, ಗದ್ದೆಗಳಲ್ಲಿ ಹೆಣ್ಣು ಚಿರತೆಗಳು ಮರಿ ಹಾಕಿ ಹೋಗುವ ಸಂದರ್ಭದಲ್ಲಿ ಅಂತಹ ಮರಿಗಳನ್ನು ತಂದು ಉದ್ಯಾನದಲ್ಲಿ ಪಾಲನೆ ಮಾಡಲಾಗುತ್ತದೆ. ಪ್ರಸ್ತುತ ಉದ್ಯಾನದಲ್ಲಿ 14 ಚಿರತೆಗಳಿವೆ ಎಂದು ಮಾಹಿತಿ ನೀಡಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನವನ
ಚಿರತೆಗಳ ಸಂಖ್ಯೆ ಹೆಚ್ಚಳ; ಜನನ ನಿಯಂತ್ರಣಕ್ಕೆ ಅರಣ್ಯ, ಬನ್ನೇರುಘಟ್ಟ ಉದ್ಯಾನವನದ ಅಧಿಕಾರಿಗಳ ಚಿಂತನೆ

ಇದೇ ವೇಳೆ ಬನ್ನೇರುಘಟ್ಟದಲ್ಲಿರುವ ವೇದಾ ಎಂಬ ಹೆಣ್ಣಾನೆ ಕಳೆದ ಜನವರಿ 26ರ ಗಣರಾಜ್ಯ ದಿನದಂದು ಗಂಡಾನೆ ಮರಿಗೆ ಜನ್ಮ ನೀಡಿದ್ದು, ಭಾರತ ಗಣತಂತ್ರದ ದಿನ ಹುಟ್ಟಿದ ಈ ಆನೆಗೆ ಸ್ವರಾಜ್ ಎಂದು ನಾಮಕರಣ ಮಾಡಲಾಯಿತು. ಈಶ್ವರ ಖಂಡ್ರೆ ಅವರು ಫಲಕ ಅನಾವರಣ ಮಾಡಿ ಆನೆಗೆ ಸ್ವರಾಜ್ ಎಂದು ಹೆಸರಿಟ್ಟರು.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 26 ಆನೆಗಳಿದ್ದು, ಇಲ್ಲಿ ವರ್ಷಕ್ಕೆ 2ರಿಂದ 3 ಮರಿಗಳ ಜನನವಾಗುತ್ತದೆ. ಈ ಆನೆ ಮರಿಗಳಿಗೆ ಹಾಲುಣಿಸುವ ಕೇಂದ್ರವನ್ನೂ ಇಂದು ಉದ್ಘಾಟಿಸಲಾಯಿತು. ಉದ್ಯಾನದಲ್ಲಿ ಜನಿಸುವ ಆನೆಮರಿಗಳ ಪೈಕಿ ಸುಮಾರು 3 ವರ್ಷದ ಮರಿಗಳನ್ನು ಹಾಲುಣಿಸಲು ತಾಯಿಯಿಂದ ಬೇರ್ಪಡಿಸಿ, ಮಾವುತರ ಜೊತೆ ಬಾಂಧವ್ಯ ಬೆಸೆಯಲು 10 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿರುವ ಹಾಲುಣಿಸುವ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ, ಅಲ್ಲಿ ಮಾವುತರು ಮತ್ತು ಕಾವಾಡಿಗಳು ಆನೆ ಮರಿಗಳಿಗೆ 24 ಗಂಟೆಯೂ ವಿಶೇಷ ಆರೈಕೆ ಮಾಡುತ್ತಾರೆ ಎಂದು ಸಚಿವರು ಹೇಳಿದರು.

ಬಳಿಕ ಚಿಣ್ಣರ ವನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಬನ್ನೇರುಘಟ್ಟ ಉದ್ಯಾನಕ್ಕೆ ಬರುವ ಸಂದರ್ಶಕರ ಪೈಕಿ, ಮಹಿಳೆಯರು, ಹಾಲುಣಿಸುವ ತಾಯಂದಿರೂ ಇರುತ್ತಾರೆ. ಹೀಗಾಗಿ ಶಿಶು ಆರೈಕೆ ಕೋಣೆಯನ್ನು ಸಹ ಇಲ್ಲಿ ನಿರ್ಮಿಸಲಾಗಿದ್ದು, ಪುಟ್ಟ ಶಿಶುಗಳು, ಅಂಬೆಗಾಲಿಡುವ ಕಂದಮ್ಮಗಳು ಮತ್ತು ಚಿಕ್ಕ ಮಕ್ಕಳ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಚಿಟ್ಟೆ ಉದ್ಯಾನದಲ್ಲಿ ಶಿಶು ಆರೈಕೆ ಕೊಠಡಿ ನಿರ್ಮಿಸಲಾಗಿದ್ದು, ಇದನ್ನು ಇಂದು ಉದ್ಘಾಟಿಸಲಾಗಿದೆ. ಮುಂದಿನ ವರ್ಷದ ಡಿಸೆಂರ್ಬ ಒಳಗೆ ಇನ್ನೂ ಎರಡು ಶಿಶು ಆರೈಕೆ ಕೊಠಡಿಗಳನ್ನು ಇಲ್ಲಿ ನಿರ್ಮಿಸಲಾಗುವುದು2015-16ರಲ್ಲಿ ಯೋಜನೆ ಆರಂಭಿಸಲಾಗಿದ್ದು, ಇದೂವರೆಗೆ ಒಂದು ಲಕ್ಷ ಮಕ್ಕಳು ಅರಣ್ಯಕ್ಕೆ ಭೇಟಿ ನೀಡಿದ್ದಾರೆ. ಈ ಕಾರ್ಯಕ್ರಮವು ಮಕ್ಕಳಿಗೆ ವನ್ಯಜೀವಿಗಳ ಬಗ್ಗೆ ಕಲಿಯಲು ಮತ್ತು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಬಳಿಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಮೃಗಾಲಯದ ಸುತ್ತ ಹರಡಿರುವ ಕಸ, ತ್ಯಾಜ್ಯ ಮತ್ತು ಪ್ಲಾಸ್ಟಿಕ್‌ಗಳ ರಾಶಿಯನ್ನು ಗಮನಿಸಿದ ಸಚಿವರು ಈ ಅವ್ಯವಸ್ಥೆಯನ್ನು ಸರಿಪಡಿಸಿ, ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನವನ
ಬನ್ನೇರುಘಟ್ಟ ಮೃಗಾಲಯಕ್ಕೆ ಬಂತು ಮತ್ತೊಂದು ಹೆಣ್ಣು ಜಿರಾಫೆ: 'ಗೌರಿ'ಗೆ ಜೊತೆಯಾದ ‘ಶಿವಾನಿ'!

ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರೊಂದಿಗಿನ ಮಾತುಕತೆ ಸಂದರ್ಭದಲ್ಲಿ, ಬಾಕಿ ಉಳಿದಿರುವ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರದ (ಸಿಎಂಪಿಎ) 1,000 ಕೋಟಿ ರೂ. ನಿಧಿಯನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. “ಮನುಷ್ಯ-ಪ್ರಾಣಿ ಸಂಘರ್ಷ ಕಡಿಮೆಗೊಳಿಸುವ ಕಾರ್ಯಕ್ರಮಗಳು, ಅರಣ್ಯೀಕರಣ ಮತ್ತು ಇತರ ಅರಣ್ಯ ಕಾಮಗಾರಿಗಳನ್ನು ಕೈಗೊಳ್ಳಲು 100 ಕೋಟಿ ರೂ. ಬೇಡಿಕೆ ಇರಿಸಲಾಗಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಹೇಳಿದರು.

ಸ್ಕೈವಾಕ್ ಗೆ ಭೂಮಿಪೂಜೆ

ಇದೇ ವೇಳೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸ್ಕೈವಾಕ್ ಮತ್ತು ಐದು ಪ್ರಾಣಿ ಆವರಣಗಳಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನ 1974 ರಿಂದ ಪ್ರವಾಸಿಗರಿಗೆ ವಿವಿಧ ಸೌಲಭ್ಯ ನೀಡಲಾಗುತ್ತಿದ್ದು, ಇದನ್ನು ಹೆಚ್ಚು ಆಕರ್ಷಣೀಯಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೃಗಾಲಯದಿಂದ ಚಿಟ್ಟೆ ಉದ್ಯಾನವನಕ್ಕೆ ಸಂಪರ್ಕವನ್ನು ಕಲ್ಪಿಸಲು ಸ್ಕೈ ವಾಕ್ ವಿನ್ಯಾಸಗೊಳಿಸಲಾಗಿದೆ ಈ ಸ್ಕೈವಾಕ್ ನಲ್ಲಿ ನಡಯುವ ಪ್ರವಾಸಿಗರಿಗೆ ಅರಣ್ಯ ದರ್ಶನವೂ ಆಗುತ್ತದೆ. ಹತ್ತಿರದಿಂದ ಪಕ್ಷಿಗಳನ್ನು ನೋಡಲು ಅವಕಾಶವೂ ಆಗುತ್ತದೆ.

ಎಮು ಮತ್ತು ರಿಯಾಗೆ 50 ಲಕ್ಷ ರೂ.ಗಳ ವೆಚ್ಚದಲ್ಲಿ ಹೊಸ ನೈಸರ್ಗಿಕ ಆವರಣ, 1.5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹಂಟಿಂಗ್ ಚೀತಾ ಆವರಣ, 1.5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹಮದ್ರಿಯಾಸ್ ಮತ್ತು ಆಲಿವ್ ಬಾಬೂನ್ ಆವರಣ ಮತ್ತು 1.5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಭಾರತೀಯ ಬೂದು ತೋಳ ಆವರಣವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನ
ಬೆಂಗಳೂರು: ಬನ್ನೇರುಘಟ್ಟದಲ್ಲಿ ತಿಂಗಳಾಂತ್ಯಕ್ಕೆ ಚಿರತೆ ಸಫಾರಿ ಆರಂಭ!

ಸಂದರ್ಶಕರಿಗೊಂದು ಸಸಿ

ರಾಜ್ಯದ ಮೃಗಾಲಯಗಳು ವನ್ಯಜೀವಿಗಳ ಪಾಲನೆಗೆ ಹೆಸರಾಗಿದ್ದು, ಇದು ಜ್ಞಾನಮಂದಿರವೂ ಆಗಬೇಕು. ಜೈವಿಕ ಉದ್ಯಾನಕ್ಕೆ ಬರುವ ಜನರು ವನ್ಯ ಜೀವಿಗಳನ್ನು ನೋಡಿ ಸಂತೋಷ ಪಡುತ್ತಾರೆ. ಜೊತೆಗೆ ಅವರಿಗೆ ಇಲ್ಲಿರುವ ಪ್ರತಿಯೊಂದು ಪ್ರಬೇಧದ ವೃಕ್ಷಗಳ ಬಗ್ಗೆ ತಿಳಿಸಿ ಜನರು ಕನಿಷ್ಠ 10 ಪ್ರಬೇಧದ ವೃಕ್ಷ ಗುರುತಿಸುವಂತೆ ಅವರಲ್ಲಿ ಅರಿವು ಮೂಡಿಸಬೇಕು ಎಂದು ಇದೇ ವೇಳೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಮೃಗಾಲಯಕ್ಕೆ ಬರುವ ಪ್ರತಿಯೊಬ್ಬರಿಗೂ ಪ್ರಾಣವಾಯು- ಆಮ್ಲಜನಕ ನೀಡುವ ವೃಕ್ಷಗಳ ಮಹತ್ವದ ಬಗ್ಗೆ ತಿಳಿಸಿ, ಅವರು ಮನೆಗೆ ತೆರಳುವಾಗ ಒಂದು ಸಸಿ ಖರೀದಿಸಿ ತೆಗೆದುಕೊಂಡು ಹೋಗಿ ತಮ್ಮ ಮನೆಯ ಮುಂದೆ ನೆಟ್ಟು, ಪೋಷಿಸುವಂತೆ ಪ್ರೇರೇಪಿಸಬೇಕು. ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡುವ ರೀತಿಯಲ್ಲೇ ಮೃಗಾಲಯಕ್ಕೆ ಬರುವ ಸಂದರ್ಶಕರಿಗೂ ರಿಯಾಯಿತಿ ದರದಲ್ಲಿ ಸಸಿಗಳನ್ನು ಪೂರೈಸಬೇಕು ಎಂದು ಸೂಚನೆ ನೀಡಿದರು.

ಸಚಿವರಿಗೆ ಘೇರಾವ್ ಹಾಕಿದ ಗ್ರಾಮಸ್ಥರು

ಈ ನಡುವೆ ಬನ್ನೇರುಘಟ್ಟ ಗ್ರಾ.ಪಂ, ರಾಗಿಹಳ್ಳಿ ಹಾಗೂ ಸುತ್ತಮುತ್ತಲಿನ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಸಚಿವರಿಗೆ ಘೇರಾವ್ ಹಾಕಿದ ಬೆಳವಣಿಗೆ ಕೂಡ ಬುಧವಾರ ಕಂಡು ಬಂದಿತು.

ಸಚಿವರು ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಪ್ರದೇಶ ಅರಣ್ಯ ಇಲಾಖೆ ನಿಯಂತ್ರಣದಲ್ಲಿದೆ. ಭೂಸ್ವಾಧೀನ ವಿಚಾರ ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ. ಸಮಸ್ಯೆ ಬಗೆಹರಿಸಿ ಜನರಿಂದ ಟೋಲ್ ಸಂಗ್ರಹಿಸಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಮಾಜಿ ಸಂಸದ ಡಿ.ಕೆ.ಸುರೇಶ್ ಅಧಿಕಾರದಲ್ಲಿ ಇದ್ದಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು ಎಂದರು.

ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಸಭೆ ನಡೆಸಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com