
ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದ ಪ್ರಕರಣದಲ್ಲಿ ಸಿಲುಕಿ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಇಂದು ದಿಢೀರ್ ವಿಧಾನಸೌಧದಲ್ಲಿ ಕಾಣಿಸಿಕೊಂಡಿದ್ದಾರೆ.
ಇಂದಿನಿಂದ ಚಳಿಗಾಲ ಅಧಿವೇಶನ ಆರಂಭವಾಗಿದ್ದು, ಅಧಿವೇಶನದಲ್ಲಿ ಪಾಲ್ಗೊಳ್ಳಲು ದದ್ದಲ್ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಈ ವೇಳೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ದದ್ದಲ್ ಅವರು, ನನಗೆ ಎಸ್‌ಐಟಿ ನೋಟಿಸ್ ನೀಡಿಲ್ಲ, ಇಡಿಯಿಂದಲೂ ನೋಟಿಸ್ ಬಂದಿಲ್ಲ. ನಾನು ಅಧಿವೇಶನಕ್ಕೆ ಹೋಗುತ್ತಿದ್ದೇನೆ. ಹೆಚ್ಚೇನೂ ಹೇಳುವುದಿಲ್ಲ ಎಂದು ಹೇಳಿ ತೆರಳಿದರು.
ವಿಧಾನಸೌಧಕ್ಕೆ ಆಗಮಿಸಿದ ದದ್ದಲ್ ಈಗ ಸಿಎಂ ಸಿದ್ದರಾಮಯ್ಯ ಅವರನ್ನು ಆಡಳಿತ ಪಕ್ಷದ ಕೊಠಡಿಯಲ್ಲಿ ಭೇಟಿ ಮಾಡಿ ಚರ್ಚಿಸುತ್ತಿದ್ದಾರೆ.
ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ದದ್ದಲ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕಲಾಪ ನಡೆಯುವಾಗ ಶಾಸಕರನ್ನು ಬಂಧಿಸಬೇಕಾದರೆ ಸ್ಫೀಕರ್ ಅನುಮತಿ ಕಡ್ಡಾಯ. ಅಧಿವೇಶನ ನಡೆಯುವಾಗ ಬಂಧನಕ್ಕೆ ಸ್ಪೀಕರ್ ಅನುಮತಿ ನೀಡದೇ ಇದ್ದರೆ ಬಂಧನ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇಡಿಯ ಮುಂದಿನ ನಡೆ ಕುತೂಹಲ ಮೂಡಿಸಿದೆ.
Advertisement