
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ (Gauri Lankesh Murder Case) ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಜಾಮೀನು ಮಂಜೂರು ಮಾಡಿದೆ.
ನ್ಯಾ.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆರೋಪಿಗಳಾದ ನವೀನ್ ಕುಮಾರ್, ಅಮಿತ್, ಎಚ್‌ಎಲ್ ಸುರೇಶ್ ಅವರಿಗೆ ಜಾಮೀನು ನೀಡಿದೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಅಮಿತ್ ದಿಗ್ವೇಕರ್ ಅಲಿಯಾಸ್ ಅಮಿತ್ ಅಲಿಯಾಸ್ ಪ್ರದೀಪ್ ಮಹಾಜನ್; ಏಳನೇ ಆರೋಪಿ ಸುರೇಶ್ ಎಚ್ ಎಲ್ ಅಲಿಯಾಸ್ ಟೀಚರ್ ಮತ್ತು 17ನೇ ಆರೋಪಿ ಕೆ ಟಿ ನವೀನ್ ಕುಮಾರ್ ಅಲಿಯಾಸ್ ನವೀನ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕಲಬುರ್ಗಿ ಪೀಠದಲ್ಲಿರುವ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಜಾಮೀನು ಮಂಜೂರು ವೇಳೆ ಕೋರ್ಟ್ ಹಲವು ಷರತ್ತು ವಿಧಿಸಿದ್ದು ಈ ಷರತ್ತು ಪೂರ್ಣಗೊಂಡ ಬಳಿಕ ಇಂದು ಸಂಜೆ ಅಥವಾ ನಾಳೆ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
ಹನ್ನೊಂದನೇ ಆರೋಪಿ ಮೋಹನ್ ನಾಯಕ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ತಮಗೂ ಜಾಮೀನು ಮಂಜೂರು ಮಾಡಬೇಕು ಎಂಬುದು ಎಲ್ಲಾ ಅರ್ಜಿದಾರರ ವಾದವಾಗಿತ್ತು. ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಪ್ರಾಸಿಕ್ಯೂಷನ್ “ಮೋಹನ್ ನಾಯಕ್ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನ ಬೇರೊಂದು ಪೀಠವು ತಿರಸ್ಕರಿಸಿದ್ದು, ಕೊಲೆ, ಪಿತೂರಿಯಂಥ ಗಂಭೀರ ಆರೋಪಗಳಿರುವಾಗ ಜಾಮೀನು ನೀಡಲಾಗದು ಎಂದಿದೆ.
ಇಡೀ ಪ್ರಕರಣದಲ್ಲಿ ಜಾಮೀನು ಪಡೆದಿರುವ ಏಕೈಕ ಮತ್ತು ಮೊದಲ ಆರೋಪಿ ಮೋಹನ್ ನಾಯಕ್ ಆಗಿದ್ದು, ಆತನ ಜಾಮೀನು ಆದೇಶವನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಅದು ವಿಚಾರಣೆಗೆ ಬಾಕಿಯಿದೆ" ಎಂದಿತ್ತು.
ಒಂದನೇ ಆರೋಪಿ ಅಮೋಲ್ ಕಾಳೆಯ ಸ್ವಯಂ ಹೇಳಿಕೆ ಆಧರಿಸಿ ಅಮಿತ್‌ನನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಹಣಕಾಸಿನ ನೆರವು ನೀಡಿದ ಆರೋಪ ಅಮಿತ್ ಮೇಲಿದೆ. 13ನೇ ಆರೋಪಿ ಸುಜಿತ್ (ಸುಜಿತ್ ಸಮನ್ವಯಕಾರನ ಪಾತ್ರ ವಹಿಸಿದ್ದಾನೆ) ಜೊತೆ ನವೀನ್ ಕುಮಾರ್ ಪಾರ್ಕ್‌ನಲ್ಲಿ ಮಾತನಾಡಿ ಸಂಚು ರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ. 15ನೇ ಆರೋಪಿ ವಿಕಾಸ್ ಪಾಟೀಲ್‌ಗೆ ಗೌರಿ ಲಂಕೇಶ್ ಅವರ ಮನೆಯ ವಿಳಾಸ ಪತ್ತೆ ಮಾಡಿಕೊಡಿಕೊಟ್ಟಿರುವ, ಶಸ್ತ್ರಾಸ್ತ್ರಗಳನ್ನು ಬಚ್ಚಿಡಲು ನೆರವಾಗಿರುವ ಆರೋಪ ಸುರೇಶ್ ಮೇಲಿದೆ.
ಏನಿದು ಪ್ರಕರಣ?
2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರು ಕೆಲಸ ಮುಗಿಸಿ ಮನೆಗೆ ಮರಳಿದ ವೇಳೆ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಕೊಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೂ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪವು ಗಣೇಶ್ ಮಿಸ್ಕಿನ್ ಮೇಲೆ ಇದೆ.
Advertisement