
ಬೆಂಗಳೂರು: ನಗರದ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಬಿಬಿಎಂಪಿ, ಸಾರಿಗೆ ಇಲಾಖೆ ಜೊತೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಡಾ. ಜಿ ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಎಸ್. ಆರ್ ವಿಶ್ವನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ವಿದೇಶದಲ್ಲೂ ಪ್ರಸ್ತಾಪವಾಗುತ್ತದೆ. ವಿದೇಶಿ ಪತ್ರಿಕೆಗಳಲ್ಲೂ ವರದಿಯಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಗುವಂತಹ ಟ್ರಾಫಿಕ್ ಸಮಸ್ಯೆ ಬೇರೆ ಎಲ್ಲೂ ಆಗುವುದಿಲ್ಲ. ಮೂಲ ಸೌಲಭ್ಯವಿಲ್ಲ, ನಿಯಂತ್ರಣ ವ್ಯವಸ್ಥೆ ಇಲ್ಲ, ರಸ್ತೆಯ ಎರಡೂ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಾರೆ. ರಸ್ತೆಯಲ್ಲಿ ಸಂಚರಿಸಲು ತೊಂದರೆಯಾಗುತ್ತದೆ. ಬಿಬಿಎಂಪಿ ಮತ್ತು ಸಾರಿಗೆ ಇಲಾಖೆ ಸಹಕಾರ ಅಗತ್ಯವಿದೆ. ಮನೆ ನಿರ್ಮಾಣಕ್ಕೆ ಅನುಮತಿ ನೀಡುವಾಗ ಪಾರ್ಕಿಂಗ್ ಸ್ಥಳಾವಕಾಶ ಒದಗಿಸುವ ಷರತ್ತು ವಿಧಿಸಬೇಕು, ಕೆಲವೊಂದು ನಿಯಮವನ್ನು ರೂಪಿಸಬೇಕಾಗುತ್ತದೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ 1194 ಪ್ರಮುಖ ರಸ್ತೆಗಳನ್ನು ನೋ ಪಾರ್ಕಿಂಗ್ ರಸ್ತೆಗಳೆಂದು ಗುರುತಿಸಲಾಗಿದೆ. ನಿತ್ಯ 50 ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಠಾಣಾ ಸರಹದ್ದುಗಳನ್ನು ವಿವಿಧ ಸೆಕ್ಟರ್ಗಳಾಗಿ ವಿಂಗಡಿಸಿ, ಸಂಬಂಧಪಟ್ಟ ಸೆಕ್ಟರ್ ಅಧಿಕಾರಿಗಳು ಪಬ್ಲಿಕ್ ಅಡ್ರೆಸ್ ಸಿಸ್ಟಮ್‍ನಲ್ಲಿ ಸಂದೇಶ ನೀಡುವ ಮೂಲಕ ಪಾರ್ಕಿಂಗ್ ಇಲ್ಲದ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡದಂತೆ ಸೂಚಿಸಲಾಗುತ್ತಿದೆ.
ನೋ ಪಾರ್ಕಿಂಗ್ ಸ್ಥಳಗಳಲ್ಲೇ ಪಾರ್ಕಿಂಗ್ ಮಾಡುವಾಗ ಕಾನೂನು ರೀತಿ ಪ್ರಕರಣ ದಾಖಲಿಸಿ, ವ್ಹೀಲ್ ಕ್ಲಾಂಪ್‍ಗಳನ್ನು ಅಳವಡಿಸಿ ಪಾರ್ಕಿಂಗ್ ಮಾಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
2022ನೇ ಸಾಲಿನ ಜುಲೈನಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು ಜೂನ್ ಅಂತ್ಯದವರೆಗೆ 2250 ಪ್ರಕರಣಗಳನ್ನು ದಾಖಲಿಸಲಾಗಿದೆ. ಬೆಂಗಳೂರು ನಗರದಲ್ಲಿ ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ 2022ರಲ್ಲಿ 12,07,651 ಪ್ರಕರಣ ದಾಖಲಿಸಿ 20.84 ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ. 2023ರಲ್ಲಿ 11,30,885 ಪ್ರಕರಣ ದಾಖಲಿಸಿ 37 ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಪ್ರಸಕ್ತ ಸಾಲಿನ ಜೂನ್ ಅಂತ್ಯದವರೆಗೆ 5,21,326 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ನೋ ಪಾರ್ಕಿಂಗ್ ಸ್ಥಳದಲ್ಲಿನ ವಾಹನಗಳನ್ನು ಟೋಯಿಂಗ್ ಮಾಡುವಂತೆ ಮಾಡಿದ ಶಾಸಕ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ ಶಾಸಕ ವಿಶ್ವನಾಥ್, ನೋ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದ ವಾಹನಗಳನ್ನು ಟೋಯಿಂಗ್ ಮಾಡುವುದನ್ನು ನಿಲ್ಲಿಸಿದ್ದೀರಿ. ನಮ್ಮ ಯಲಹಂಕ ಕ್ಷೇತ್ರದಲ್ಲಾದರೂ ಟೋಯಿಂಗ್ ಮಾಡಿ. ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ, ಬೆಂಗಳೂರಿಗೆ ವಿಶೇಷ ಪಾರ್ಕಿಂಗ್ ಪಾಲಿಸಿ ಎಂಬ ನೀತಿಯನ್ನು ಜಾರಿ ಮಾಡಬೇಕು ಎಂದರು. ಇದಕ್ಕೆ ದನಿಗೂಡಿಸಿದ ಶಾಸಕ ಎಸ್ ಸುರೇಶ್‍ಕುಮಾರ್, ರಸ್ತೆಯಲ್ಲೇ ಪಾರ್ಕಿಂಗ್ ಮಾಡುವುದರಿಂದ ಎರಡು ಮೂರು ತಿಂಗಳು ಅಲ್ಲೇ ಇರುತ್ತವೆ. ಸಂಚಾರಕ್ಕೆ ತೊಂದರೆಯಾಗುತ್ತದೆ. ಪಾರ್ಕಿಂಗ್ ಪಾಲಿಸಿಯ ಅಗತ್ಯವಿದೆ ಎಂದು ಸಲಹೆ ನೀಡಿದರು.
Advertisement