
ಬೆಂಗಳೂರು: ಪಂಚೆಯುಟ್ಟ ರೈತನಿಗೆ ಪ್ರವೇಶ ನಿರಾಕರಿಸುವ ಮೂಲಕ ವಿವಾದಕ್ಕೀಡಾಗಿದ್ದ ಬೆಂಗಳೂರಿನ ಪ್ರತಿಷ್ಠಿತ GT Mallಗೆ ತೆರಿಗೆ ಪಾವಕಿ ಬಾಕಿ ಹಿನ್ನಲೆಯಲ್ಲಿ ಬೀಗ ಜಡಿಯಲಾಗಿದೆ.
ಪಂಚೆ ಧರಿಸಿದ್ದಾರೆ ಬಂದಿದ್ದಾರೆ ಎನ್ನುವ ಕಾರಣಕ್ಕೇ ನಿನ್ನೆ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ನ (GT Mall) ಒಳಗೆ ಹಾವೇರಿ ಮೂಲದ ರೈತನನ್ನು ಬಿಟ್ಟಿರಲಿಲ್ಲ. ಇದು ವ್ಯಾಪಕ ಚರ್ಚೆಗೂ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಇಂದು ಸದನದಲ್ಲಿ ಕೂಡ ಚರ್ಚೆಯಾಗಿದೆ.
ಜಿಟಿ ಮಾಲ್ ಅನ್ನು ಬಂದ್ ಮಾಡುವಂತೆ ಒತ್ತಾಯಿಸಲಾಗಿತ್ತು. ಇದೀಗ ಮಾಲ್ ಗೆ ಅಧಿಕಾರಿಗಳು ಬಿಗ ಜಡಿದಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ವಲಯ ವಿಭಾಗವು 1.78 ಕೋಟಿ ರೂ. ತೆರಿಗೆ ಬಾಕಿ ಹಿನ್ನಲೆಯಲ್ಲಿ ಮಾಲ್ ಅನ್ನು ಸೀಲ್ ಮಾಡಿದೆ.
2023-2024ರ ಆಸ್ತಿ ತೆರಿಗೆಯನ್ನು ಪಾವತಿಸಲು ಮಾಲ್ ಅಧಿಕಾರಿಗಳು ವಿಫಲರಾಗಿದ್ದು, ಆದ್ದರಿಂದ ನಾವು ಸೀಲಿಂಗ್‌ನಂತಹ ಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಬಿಬಿಎಂಪಿ ದಕ್ಷಿಣ ವಲಯ ಆಯುಕ್ತ ವಿನೋತ್ ಪ್ರಿಯಾ ಹೇಳಿದ್ದಾರೆ. ಈ ಹಿಂದೆ ಸಾಕಷ್ಟು ಬಾರಿ ಮಾಲ್ ಅಧಿಕಾರಿಗಳಿಗೆ ತೆರಿಗೆ ಬಾಕಿ ಪಾವತಿಗೆ ಜ್ಞಾಪನೆ ನೋಟಿಸ್‌ಗಳನ್ನು ಸಹ ನೀಡಲಾಗಿತ್ತು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೂಡ ಮಾಲ್ ಅನ್ನು ಸೀಲ್ ಡೌನ್ ಮಾಡಲು ಸೂಚನೆ ನೀಡಿದ್ದಾರೆ. ಅದರಂತೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಕಲಾಪದಲ್ಲೂ ವ್ಯಾಪಕ ಆಕ್ರೋಶ
ಈ ಪ್ರಕರಣ ಕರ್ನಾಟಕ ವಿಧಾನಸಭೆ ಕಲಾಪದಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ರೈತನನ್ನು ಮಾಲ್ ಒಳಗಡೆ ಬಿಡದೆ ಅವಮಾನಿಸಲಾಗಿದೆ ಎಂದು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಒಕ್ಕೊರಲಿನಿಂದ ಧ್ವನಿ ಎತ್ತಿದರು. ಗುರುಮಿಠಕಲ್ ಕಾಂಗ್ರೆಸ್ ಶಾಸಕ ಶರಣಗೌಡ ಕಂದಕೂರ, ಶಾಸಕ ಲಕ್ಷ್ಮಣ ಸವದಿ ಮಾಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಕೂಡಲೆ ಮಾಲ್ಗೆ ಒಂದು ವಾರ ವಿದ್ಯುತ್ ಸರಬರಾಜು ಬಂದ್ ಮಾಡಿ ಎಂದು ಆಗ್ರಹಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಯುಟಿ ಖಾದರ್ ಸರ್ಕಾರ ಏನು ಕ್ರಮ ಕೈಗೊಳ್ಳುತ್ತೆ ಎಂದು ಸ್ಪಷ್ಟಪಡಿಸಿ ಎಂದು ಸಚಿವರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬೈರತಿ ಸುರೇಶ್, ಈಗಾಗಲೇ ಬಿಬಿಎಂಪಿ ಮುಖ್ಯ ಆಯುಕ್ತರ ಜೊತೆ ಚರ್ಚೆ ಮಾತಾಡಿದ್ದೇವೆ. 7 ದಿನ ಜಿ.ಟಿ.ಮಾಲ್ ಮುಚ್ಚಿಸಲಾಗುತ್ತದೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ ಎಂದಿದ್ದಾರೆ ಎಂದು ತಿಳಿಸಿದರು.
ಮತ್ತೊಮ್ಮೆ ಕ್ಷಮೆಯಾಚಿಸಿದ ಮಾಲ್ ಮಾಲೀಕ
ಜಿಟಿ ಮಾಲ್ ಮಾಲೀಕ ಆನಂದ್ ಪುತ್ರ ಪ್ರಶಾಂತ್ ಈ ಬಗ್ಗೆ ಮಾತನಾಡಿದ್ದು, ಆಗಬಾರದಂತಹ ಘಟನೆ ನಡೆದಿದೆ, ಹೊಸ ಸಿಬ್ಬಂದಿಯಿಂದ ತಪ್ಪಾಗಿದೆ. ರೈತ ಫಕೀರಪ್ಪರನ್ನು ಖುದ್ದಾಗಿ ಭೇಟಿಯಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಅಂತೆಯೇ ತಪ್ಪು ಮಾಡಿದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿದ್ದೇವೆ. ಈ ರೀತಿಯ ಕೆಲಸ ಆಗಬಾರದಿತ್ತು. ನಮ್ಮ ತಂದೆಯವರು ಕೂಡ ಮಾತಾಡಿ ಕ್ಷಮೆ ಕೇಳಿದ್ದಾರೆ. ಬಿಬಿಎಂಪಿಯಿಂದ ನೋಟಿಸ್ ಬಂದಿದೆ.
ಘಟನೆ ಬಗ್ಗೆ ಮಾಹಿತಿ ಕೊಡಿ ಅಂತಾ ನೋಟಿಸ್ ಕೊಟ್ಟಿದ್ದಾರೆ. 1 ಕೋಟಿ 70 ಲಕ್ಷ ರೂ. ಒಂದು ವರ್ಷದ ತೆರಿಗೆ ಬಾಕಿ ಇದೆ. ಆದರೆ ಪಾಲಿಕೆ ಘಟನೆ ಬಗ್ಗೆ ಮಾಹಿತಿ ಕೊಡಿ ಅಂತಾ ನೋಟಿಸ್ ಕೊಟ್ಟಿದೆ. ಅದರಂತೆ ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದೇವೆ.
Advertisement