
ಹುಬ್ಬಳ್ಳಿ: ಸರ್ಕಾರಿ ಬಸ್ ಚಾಲಕನ ಅಪಘಾತಕ್ಕೆ ಎರಡು ಎತ್ತುಗಳು ಬಲಿಯಾಗಿದ್ದು, ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ಸಮೀಪ ಮಂಗಳವಾರ ನಡೆದಿದೆ.
ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆ ಬಸ್ ಸಂಚರಿಸುತ್ತಿತ್ತು. ಚಾಲಕ ಬಸ್ ಚಾಲನೆ ಮಾಡುತ್ತಿರುವಾಗ ಮತ್ತೊಬ್ಬರು ರೀಲ್ಸ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಮುಂದಿದ್ದ ಎತ್ತಿನಬಂಡಿಯನ್ನು ಗಮನಿಸದೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಎರಪಡು ಎತ್ತುಗಳು ಮೃತಪಟ್ಟಿವೆ. ಘಟನೆಯಲ್ಲಿ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗಾಯಗೊಂಡ ರೈತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ, ಚಾಲಕ ರಮೇಶ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡ ರೈತನನ್ನು ಮಂಜುನಾಥ್ ಎಂದು ಗುರ್ತಿಸಲಾಗಿದೆ. ಮಂಗಳವಾರ ಸಂಜೆ ಕೆರೆಸೂರು ಗ್ರಾಮದ ತಮ್ಮ ಕೃಷಿ ಜಮೀನಿನಿಂದ ಎತ್ತಿನಬಂಡಿಯಲ್ಲಿ ಮಂಜುನಾಥ್ ಅವರು ಮನೆಗೆ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿದೆ. ಕೆಲ ಪ್ರತ್ಯಕ್ಷದರ್ಶಿಗಳು ಚಾಲಕನ ವಿರುದ್ಧ ಕಿಡಿಕಾರಿದ್ದಾರೆ.
ಗಾಮಸ್ಥ ಹಾಗೂ ಮಂಜುನಾಥ್ ಅವರ ಸ್ನೇಹಿತ ರಾಯನಗೌಡ ಎಂಬುವವರು ಮಾತನಾಡಿ, ಘಟನೆ ಬಳಿಕ ಎತ್ತುಗಳು ಮೃತಪಟ್ಟಿವೆ. ಮಂಜುನಾಥ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನನ್ನ ಸ್ನೇಹಿತ ಬಡ ರೈತನಾಗಿದ್ದು, ದೈನಂದಿನ ದುಡಿಮೆಯೊಂದಿಗೆ ಜೀವನ ನಡೆಸುತ್ತಿದ್ದ. ಎರಡು ಎಕರೆ ಜಮೀನು ಆದಾಯ ನೀಡುತ್ತಿಲ್ಲ. ಸಾಲ ಪಡೆದು ಎರಡು ಎತ್ತು ಖರೀದಿ ಮಾಡಿ, ಹೊಲದಲ್ಲಿ ಉಳಿಮೆ ಮಾಡುತ್ತಿದ್ದ. ರೈತರಿಂದ ಸುಮಾರು ರೂ.1.5 ಲಕ್ಷ ಸಾಲ ಪಡೆದಿದ್ದ. ಸರ್ಕಾರ ಈತನಿಗೆ ಅಲ್ಪಾವಧಿಯ ಪರಿಹಾರ ನೀಡದೆ ನೆರವಿಗೆ ಮುಂದಾಗಬೇಕು. ಇಬ್ಬರು ಮಕ್ಕಳಿದ್ದು, ಕುಟುಂಬಕ್ಕೆ ಈತನೇ ಆಧಾರ ಎಂದು ಹೇಳಿದ್ದಾರೆ.
ಅಪಘಾತದ ಸಮಯದಲ್ಲಿ ಚಾಲಕನ ವರ್ತನೆಯ ವಿಡಿಯೋಗಳಿವೆ. ವಿಡಿಯೋ ಆಧಾರದ ಮೇಲೆ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್ ಅವರ ಸಂಬಂಧಿ ಆಗ್ರಹಿಸಿದ್ದಾರೆ.
Advertisement