ನಾಯಿ ಮಾಂಸ ರವಾನೆ ಆರೋಪ: ರೈಲ್ವೇ ನಿಲ್ದಾಣದಲ್ಲಿ ಹೈಡ್ರಾಮಾ; ಪುನೀತ್ ಕೆರೆಹಳ್ಳಿ-ಅಬ್ದುಲ್ ರಜಾಕ್ ವಾಕ್ಸಮರ, ಅಧಿಕಾರಿಗಳು ದೌಡು!
ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ಹಿಂದೂಪರ ಕಾರ್ಯಕರ್ತ-ಅಬ್ದುಲ್ ರಜಾಕ್ ನಡುವೆ ದೊಡ್ಡ ಹೈಡ್ರಾಮಾವೇ ನಡೆದಿದೆ.
ಪ್ರತಿನಿತ್ಯ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರುವ ರೈಲುಗಳಲ್ಲಿ ಅಕ್ರಮವಾಗಿ ಮಾಂಸ ಸರಬರಾಜು ಆಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು, ಇಂದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದು, ಜೈಪುರ ರೈಲು ಬಂದಾಕ್ಷಣ ದಾಳಿ ಮಾಡಿ ಮಾಂಸದ ಬಾಕ್ಸ್ಗಳನ್ನು ತಡೆಹಿಡಿದಿದ್ದಾರೆ.
ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜಾಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂದು ಆರೋಪಿಸಿ ಹಿಂದೂಪರ ಸಂಘಟನೆಯ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ದಾಳಿ ಮಾಡಿ ಮಟನ್ ಮಾಂಸವನ್ನು ಎತ್ತಿ ನೋಡಿದ್ದಾರೆ. ಇದರಲ್ಲಿ ನಾಯಿ ಮಾಂಸ ಇದೆ ಎಂದು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಅಬ್ದುಲ್ ರಜಾಕ್ ಮತ್ತು ಪುನೀತ್ ಕೆರೆಹಳ್ಳಿ ಮಧ್ಯೆ ವಾಗ್ವಾದ ನಡೆದಿದೆ.
ಅಬ್ದುಲ್ ರಜಾಕ್ ಗೆ ಸೇರಿದ ಮಾಂಸದ ಬಾಕ್ಸ್ ಗಳು!
ಜೈಪುರ-ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12975) ಸಂಜೆ 5.20 ರ ಹೊತ್ತಿಗೆ ಕೆಎಸ್‌ಆರ್ ನಿಲ್ದಾಣದ ಪ್ಲಾಟ್‌ಫಾರ್ಮ್ 5 ಅನ್ನು ತಲುಪಿತು. ಈ ರೈಲಿನಲ್ಲಿ ಬೆಂಗಳೂರಿಗೆ ಒಟ್ಟು 90 ಮಾಂಸದ ಬಾಕ್ಸ್‌ಗಳು ಪಾರ್ಸಲ್ ಬಂದಿವೆ. ಅದರಲ್ಲಿ ಒಟ್ಟು 4,500 ಕೆ.ಜಿ. ಮಾಂಸವಿದೆ. ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಅವರು ಕಡಿಮೆ ಬೆಲೆಗೆ ರಾಜಸ್ಥಾನದಿಂದ ಮಾಂಸ ತರಿಸಿಕೊಂಡು ಬೆಂಗಳೂರಿನಲ್ಲಿ ಹೆಚ್ಚಿನ ದರಕ್ಕೆ ಬೆಂಗಳೂರಿನ ಹಲವು ಹೋಟೆಲ್ಗಳಿಗೆ ಸರಬರಾಜು ಮಾಡುತ್ತಾರೆ ಎಂದು ತಿಳಿದುಬಂದಿದೆ.
ಮಟನ್-ಫಿಶ್ ಮಾಂಸದಲ್ಲಿ ನಾಯಿ ಮಾಂಸ ಮಿಶ್ರಣ: ಪುನೀತ್ ಕೆರೆಹಳ್ಳಿ ಆರೋಪ!
ಇನ್ನೂ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಷ್ಟ್ರ ರಕ್ಷಣಾ ಪಡೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ, ಜೈಪುರದಿಂದ ಫಿಶ್ ಮಾಂಸ ಅಂತ ಹೇಳಿ ಬೇರೆ ಮಾಂಸ ತಂದಿದ್ದಾರೆ. ಬೇರೆ ಮಾಂಸದ ಜೊತೆ ನಾಯಿ ಮಾಂಸವನ್ನೂ ತಂದಿದ್ದಾರೆ. ಇದು ರಸಲ್ ಮಾರ್ಕೆಟ್‌ಗೆ ಇದು ಹೋಗುತ್ತೆ. ಮೀನು ಎಂದು ಬೋರ್ಡ್ ಹಾಕಿಕೊಂಡು ಮಾಂಸ ಸಾಗಾಟ ಮಾಡ್ತಿದ್ದಾರೆ.
ಮೀನು ತಂದಿದ್ದರೇ ಮೀನು ಅಂತಾ ಬೋರ್ಡ್ ಇರಬೇಕಿತ್ತು. ಮಾಂಸ ತಂದು ಅದಕ್ಕೆ ಮೀನು ಎಂದು ಏಕೆ ಬೋರ್ಡ್ ಹಾಕಿದ್ದಾರೆ. ನಾಯಿ ಮಾಂಸವೇ ಇರಬೇಕು ಅನ್ನೋ ಅನುಮಾನವಿದೆ. ಬಿಬಿಎಂಪಿ ಅಧಿಕಾರಿಗಳು ಬರಬೇಕು. ಇಲ್ಲೇ ಮಾಂಸ ಸೀಜ್ ಮಾಡಬೇಕು. ಯಾವ ಮಾಂಸ ಅಂತಾ ಗೊತ್ತಾಗಬೇಕು. ಕನಿಷ್ಠ 4 ದಿನದ ಹಿಂದೆ ಕಟ್ ಮಾಡಿರುವ ಮಾಂಸವಿದು. ಇದನ್ನ ಐಸ್ ಬಾಕ್ಸ್‌ನಲ್ಲಿ ತಂದಿರುವುದಕ್ಕೆ ಅನುಮತಿ ಇದೆಯಾ? ಇದರ ಬಗ್ಗೆ ಅನುಮಾನ ಇದೆ ಎಂದು ಆರೋಪಿಸಿದರು.
ಅಬ್ದುಲ್ ರಜಾಕ್ ಹೇಳುವುದೇನು?
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬ್ದುಲ್ ರಜಾಕ್, ಪುನೀತ್ ಕೆರೆಹಳ್ಳಿ ರೋಲ್ ಕಾಲ್ ಮಾಡಲು ಬಂದಿದ್ದ. ರೋಲ್ಕಾಲ್ಗೆ ಅವಕಾಶ ಕೊಟ್ಟಿಲ್ಲ ಎಂದು ಕುರಿ ಮಾಂಸದ ಜತೆ ನಾಯಿ ಮಾಂಸ ಬೆರೆಸಿದ ಆರೋಪ ಮಾಡಿದ್ದಾನೆ. ಇದು ಅಕ್ರಮ ಬ್ಯುಸಿನೆಸ್ ಅಲ್ಲ. ನಮ್ಮ ಬಳಿ ಎಲ್ಲ ಸರ್ಟಿಫಿಕೇಟ್ ಇದೆ. ಎಲ್ಲ ಬಾಕ್ಸ್ಗಳಲ್ಲಿ ಕುರಿ ಮಾಂಸ ಮಾತ್ರವಿದೆ. ನಾವು 12 ವರ್ಷದಿಂದ ಈ ಬ್ಯುಸಿನೆಸ್ ಮಾಡುತ್ತಿದ್ದೇವೆ. ಅವರೇ ಬಾಕ್ಸ್ ತೆರೆದಿದ್ದಾರೆ, ಕುರಿ ಮಾಂಸ ನೋಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ದೌಡು
ಇನ್ನು ಜೈಪುರದಿಂದ ಬಂದ ಮಾಂಸದ ಬಗ್ಗೆ ವಾಗ್ದಾದ ನಡೆದಿರುವ ಮಧ್ಯ ವಿಷಯ ತಿಳಿದು ಸ್ಥಳಕ್ಕೆ ಬಿಬಿಎಂಪಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳು ದೌಡಾಯಿಸಿದ್ದರು. ಸ್ಥಳೀಯ ಪೊಲೀಸರೊಂದಿಗೆ ಸೇರಿ ಮಾಂಸದ ಬಾಕ್ಸ್ ಗಳನ್ನು ಓಪನ್ ಮಾಡಿ ಪರಿಶೀಲನೆ ಮಾಡಿದ್ದಾರೆ. ಗುಣಮಟ್ಡ ಹಾಗೂ ಮಾಂಸ ದೃಢೀಕರಣಕ್ಕಾಗಿ ಸ್ಯಾಂಪಲ್ ಪಡೆದುಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಬಿಬಿಎಂಪಿ ಆಹಾರ ಸುರಕ್ಷತೆ ಅಧಿಕಾರಿ ಸುಬ್ರಮಣ್ಯ, ನಾವು ಒಟ್ಟು ನಾಲ್ಕು ಬಾಕ್ಸ್ ಗಳಿಂದ ಸ್ಯಾಂಪಲ್ ಕಲೆಕ್ಟ್ ಮಾಡಿದ್ದೇವೆ. ವಿವಿಧ ಭಾಗಗಳಿಂದ ಮಾಂಸವನ್ನು ಸ್ಯಾಂಪಲ್ ಆಗಿ ಪಡೆದಿದ್ದೇವೆ. ಇದನ್ನು ಲ್ಯಾಬ್ ಗೆ ರವಾನಿಸಿ ಪರೀಕ್ಷಿಸಲಾಗುತ್ತೆ. ಇದರ ವರದಿ ಬರುವುದಕ್ಕೆ 14 ದಿನಗಳ ಕಾಲವಕಾಶ ಬೇಕು. ಮೇಲ್ನೋಟಕ್ಕೆ ನೋಡಿ ಇದು ಯಾವ ಮಾಂಸ ಎಂದು ಹೇಳಲಾಗುವುದಿಲ್ಲ.
ಈ ಮಾಂಸದ ಗುಣಮಟ್ಟ ಹಾಗೂ ಯಾವುದರ ಮಾಂಸ ಎಂಬ ದೃಢೀಕರಣ ಟೆಸ್ಟಿಂಗ್ ನಲ್ಲಿ ಗೊತ್ತಾಗುತ್ತೆ. ಒಂದು ವೇಳೆ ಇದು ದೂರುದಾರರ ದೂರಿನಂತೆ ನಾಯಿ ಮಾಂಸ ಆಗಿದ್ದರೆ ಮಾಲೀಕನ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಕುರಿ ಮಾಂಸವೇ ಆಗಿದ್ದರೆ ದೂರುದಾರನ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ