ಬೆಂಗಳೂರಿನಲ್ಲಿ ಸ್ಕೈಡೆಕ್‌ಗೆ ವಿರೋಧ ಪಕ್ಷದ ಶಾಸಕರಿಂದಲೂ ಒಪ್ಪಿಗೆ, ಎಲ್ಲೇ ಮೆಟ್ರೋ ಮಾಡಿದ್ರೂ 'ಡಬಲ್ ಡೆಕ್ಕರ್': DCM DK Shivakumar

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೆಂಗಳೂರಿನಲ್ಲಿ 250 ಮೀ. ಎತ್ತರದ ಸ್ಕೈಡೆಕ್ ನಿರ್ಮಿಸಲು ಮುಂದಾಗಿದ್ದು, ವಿರೋಧ ಪಕ್ಷಗಳ ನಾಯಕರು, ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
DK Shivakumar-R Ashok
ಡಿಕೆ ಶಿವಕುಮಾರ್-ಆರ್ ಅಶೋಕ್
Updated on

ಬೆಂಗಳೂರು: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೆಂಗಳೂರಿನಲ್ಲಿ 250 ಮೀ. ಎತ್ತರದ ಸ್ಕೈಡೆಕ್ ನಿರ್ಮಿಸಲು ಮುಂದಾಗಿದ್ದು, ವಿರೋಧ ಪಕ್ಷಗಳ ನಾಯಕರು, ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ಶಾಸಕರ ಸಭೆ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ಶನಿವಾರ ಮಾಹಿತಿ ನೀಡಿದರು.

250 ಮೀಟರ್ ಎತ್ತರದ ಈ ಸ್ಕೈಡೆಕ್ ಗಾಗಿ 25 ಎಕರೆ ಜಾಗ ಅಗತ್ಯವಿದೆ. ಕೊಮ್ಮಘಟ್ಟ ಹಾಗೂ ಬೆಂಗಳೂರು ವಿವಿ ಬಳಿಯ ಜಾಗವನ್ನು ನೋಡಿದ್ದೆವು. ಬೆಂಗಳೂರು ಬೆಳೆಯುತ್ತಿರುವಾಗ ಬೆಂಗಳೂರು ವಿವಿಯ ಬಳಿ 25 ಎಕರೆ ಭೂಮಿ ವ್ಯರ್ಥ ಮಾಡುವುದು ಬೇಡ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದು ಶಾಸಕರು ಅಭಿಪ್ರಾಯಪಟ್ಟರು.

ಹೀಗಾಗಿ ಈಗ ನೈಸ್ ರಸ್ತೆಯ ಬಳಿ ಸ್ಕೈಡೆಕ್ ಮಾಡಲು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲಾ ಶಾಸಕರು ಒಪ್ಪಿದ್ದಾರೆ. ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

DK Shivakumar-R Ashok
ರಾಮನಗರ ಜಿಲ್ಲೆ ಮರು ನಾಮಕರಣದಿಂದ ಅಭಿವೃದ್ಧಿಗೆ 'ಬ್ರಾಂಡ್ ಬೆಂಗಳೂರು' ಬಳಕೆ- ಡಿಕೆ ಶಿವಕುಮಾರ್

ಈ ಜಾಗ ನೈಸ್ ಸಂಸ್ಥೆ ಬಳಿ ಇದ್ದು, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಕ್ಕೆ ನೈಸ್ ಸಂಸ್ಥೆ 200 ಎಕರೆ ಭೂಮಿ ವಾಪಸ್ ನೀಡಬೇಕಿದೆ ಎಂದು ಅಶೋಕ್ ಅವರು ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ನೈಸ್ ಸಂಸ್ಥೆ ಬಳಿ ಚರ್ಚೆ ಮಾಡುತ್ತೇವೆ. ಈ ಯೋಜನೆಗಾಗಿ 10 ಜಾಗ ಹುಡುಕಲಾಗಿತ್ತು. ಆದರೆ ವಾಯುಸೇನೆ, ವಿಮಾನಯಾನ ಸಚಿವಾಲಯದವರು 20 ಕಿ.ಮೀ ವ್ಯಾಪ್ತಿಯಲ್ಲಿ ಈ ಯೋಜನೆ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದರು. ಹೀಗಾಗಿ ನೈಸ್ ರಸ್ತೆ ಬಳಿ ಮಾಡುವ ತೀರ್ಮಾನ ಮಾಡಲಾಗಿದೆ.

ಸ್ಕೈಡೆಕ್ ಅನ್ನು ನಗರದ ಹೊರ ಭಾಗಕ್ಕೆ ತೆಗೆದುಕೊಂದು ಹೋದರೆ ಅದರ ಉದ್ದೇಶ ಈಡೇರುವುದೇ ಎಂದು ಮಾಧ್ಯಮಗಳು ಕೇಳಿದಾಗ, ಎಲ್ಲಾ ರೀತಿಯ ಲೆಕ್ಕಾಚಾರವನ್ನು ನಾವು ಹಾಕಿಯೇ ಈ ತೀರ್ಮಾನ ಮಾಡಿದ್ದೇವೆ. ನೈಸ್ ರಸ್ತೆ ಬಳಿ ಮಾಡುವುದರಿಂದ ಪ್ರವಾಸಿಗರು ಮೈಸೂರು, ಕೊಡಗು ಭಾಗಕ್ಕೆ ತೆರಳಲು ಮುಕ್ತವಾದ ಸಂಚಾರ ಮಾರ್ಗವಿರುತ್ತದೆ ಎಂದರು.

ಅಲ್ಲದೆ ನೈಸ್ ರಸ್ತೆ ಅಗಲೀಕರಣಕ್ಕೂ ಅವಕಾಶ ಇರುವುದರಿಂದ ಇದು ಸೂಕ್ತ ಜಾಗ ಎಂದು ಅಶೋಕ್ ಅವರು ಸಲಹೆ ನೀಡಿದ್ದಾರೆ. ಅವರ ಸಲಹೆಯಲ್ಲೂ ಅರ್ಥವಿದೆ. ಪೆರಿಫೆರಲ್ ರಿಂಗ್ ರಸ್ತೆ ಮಾಡಿದಾಗ ಎಲ್ಲಾ ಭಾಗಗಳಿಂದಲೂ ಇಲ್ಲಿಗೆ ಸಂಪರ್ಕ ಸಾಧಿಸಬಹುದು. ಇವರ ಸಲಹೆಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಕೆಂಗೇರಿಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೂ ಮೆಟ್ರೋ ಸಂಪರ್ಕ ಮಾಡಬೇಕಿದೆ.

ಇದಕ್ಕೆ ಆರ್ಥಿಕ ಹೊರೆ ಇದ್ದು, ಈ ಭಾಗದಲ್ಲಿ ಅಭಿವೃದ್ಧಿ ಕಡಿಮೆ ಇರುವ ಕಾರಣ ಭೂಮಿ ವಶಕ್ಕೆ ಪಡೆಯಲು ಕಡಿಮೆ ವೆಚ್ಚವಾಗಲಿದೆ ಎಂದು ಈ ಸಲಹೆ ನೀಡಲಾಗಿದೆ. ಆರ್ಥಿಕವಾಗಿ ಎಲ್ಲಿ ನಮಗೆ ಅನುಕೂಲವಾಗುತ್ತದೆ ಎಂದು ಪರಿಶೀಲಿಸಲಾಗುವುದು. ಇದನ್ನು ಸರ್ಕಾರದಿಂದಲೇ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಮೊದಲು ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ವರೆಗೆ 18.5 ಕಿ.ಮೀ ಉದ್ದದ ಟನಲ್ ರಸ್ತೆ ಮಾಡಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಟೆಂಡರ್ ಕರೆಯಲಾಗುವುದು. ಈ ರಸ್ತೆ ನಿರ್ಮಾಣದ ವೇಳೆ ಕೆಲವು ಜಾಗಗಳನ್ನು ವಶಕ್ಕೆ ಪಡೆಯಬೇಕಾಗುತ್ತದೆ. ಈ ಎಲ್ಲಾ ವಿಚಾರವಾಗಿ ಶಾಸಕರ ಮುಂದೆ ಪ್ರಸ್ತಾಪ ಮಾಡಿದ್ದು, ಶಾಸಕರು ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಬೆಂಗಳೂರಿನ ಪೂರ್ವದಿಂದ ಪಶ್ಚಿಮಕ್ಕೆ ಒಂದು ಮಾರ್ಗ ಸಿದ್ಧ ಮಾಡಲಾಗಿದ್ದು, ಮುಂದಿನ ಹಂತಗಳಲ್ಲಿ ತೆಗೆದುಕೊಳ್ಳಲಾಗುವುದು.

ಮುಂದಿನ ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುವ ಮೆಟ್ರೋ ಮಾರ್ಗಗಳನ್ನು ಡಬಲ್ ಡೆಕ್ಕರ್ ಮೇಲ್ಸೆತುವೆ ಮಾಡಲಾಗುವುದು. ಪಾಲಿಕೆ ಹಾಗೂ ಮೆಟ್ರೋ ಎರಡೂ ಇಲಾಖೆಗಳು ಇದರ ವೆಚ್ಚವನ್ನು ಭರಿಸಲಿವೆ. ಟನಲ್ ರಸ್ತೆ ಜತೆಗೆ 17-18 ಕಡೆಗಳಲ್ಲಿ ಜಾಗ ಹುಡುಕಿದ್ದು ಸದ್ಯಕ್ಕೆ 100 ಕಿ.ಮೀ ನಷ್ಟು ಸಿಗ್ನಲ್ ಮುಕ್ತ ಕಾರಿಡಾರ್ ಮೇಲ್ಸೆತುವೆ ಮಾಡಲು ಮುಂದಾಗಿದ್ದು, ಇದಕ್ಕಾಗಿ 12 ಸಾವಿರ ಕೋಟಿಯಷ್ಟು ವೆಚ್ಚ ತಗುಲಲಿದೆ. ಇದಕ್ಕಾಗಿ ಟೆಂಡರ್ ಕರೆಯಲು ಸಿದ್ಧತೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣ

ಭವಿಷ್ಯದಲ್ಲಿ ಎಲ್ಲಾ ಮೆಟ್ರೋ ಮಾರ್ಗಗಳನ್ನು ಡಬಲ್ ಡೆಕ್ಕರ್ ಫ್ಲೈಓವರ್‌ಗಳಾಗಿ ಪರಿವರ್ತಿಸಲಾಗುವುದು. 100 ಕಿ.ಮೀ ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಿಸಲು ನಮಗೆ ಸುಮಾರು 12,000 ಕೋಟಿ ರೂಪಾಯಿ ಬೇಕಾಗುತ್ತದೆ. ನಾವು ಟೆಂಡರ್ ಕರೆಯಲು ಸಿದ್ಧತೆ ನಡೆಸಿದ್ದೇವೆ ಎಂದರು.

DK Shivakumar-R Ashok
ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಗೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ

ಎಲ್ಲೇ ಮೆಟ್ರೋ ಮಾಡಿದ್ರೂ ಡಬಲ್ ಡೆಕ್ಕರ್​ ಮಾಡಲು ತಿರ್ಮಾನ

ಬ್ರ್ಯಾಂಡ್ ಬೆಂಗಳೂರು ನಿರ್ವಹಣೆ ಹಾಗೂ ಕಾಮಗಾರಿ ಸಂಬಂಧ ಅಧಿಕಾರಿಗಳೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್​​ ಸಭೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಮೆಟ್ರೋ-ಫ್ಲೈಓವರ್ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಮೆಟ್ರೋ ಮಾಡಿದರೂ ಕೂಡ ಡಬಲ್ ಡೆಕ್ಕರ್ ಮೆಟ್ರೋ ಮಾಡುವ ಪ್ಲ್ಯಾನ್ ಮಾಡಲಾಗಿದೆ. ರಸ್ತೆ ಮಧ್ಯೆ ಗಾಡಿ ನಿಲ್ಲಿಸೋಕೆ ಅವಕಾಶ ಇಲ್ಲ. 17 ರಿಂದ 18 ಕಡೆ ಜಾಗ ಗುರುತು ಮಾಡಿದ್ದೇವೆ. ಸಿಗ್ನಲ್ ಫ್ರೀ ಕಾರಿಡಾರ್​ಗೆ 12000 ಕೋಟಿ ಮೀಸಲಿಟ್ಟಿದೆ.

ನಗರದ ಹೊರಗೆ ಕಸ ವಿಲೇವಾರಿ

ಇನ್ನು ಕಸ ವಿಲೇವಾರಿಗೆ ಬೆಂಗಳೂರಿನ ಹೊರಭಾಗದ 15-20 ಕಿ.ಮೀ ದೂರ ವ್ಯಾಪ್ತಿಯಲ್ಲಿ ನಾಲ್ಕು ಕಡೆಗಳಲ್ಲಿ ಜಾಗ ಗುರುತಿಸಿ ಅಲ್ಲಿ ಕಸ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ. ಸರ್ಕಾರಿ ಜಾಗ ಇದ್ದಲ್ಲಿ ಅದನ್ನು ಬಳಸಲಾಗುವುದು. ಇಲ್ಲವಾದರೆ ಖಾಸಗಿ ಜಮೀನುಗಳನ್ನು ಆಯುಕ್ತರು ಖರೀದಿ ಮಾಡಲಿದ್ದಾರೆ. ಕೇಂದ್ರ ಪರಿಸರ ಇಲಾಖೆ ನಿಯಮಾನುಸಾರ ಇದನ್ನು ಮಾಡಲಾಗುವುದು.

ಸಂಚಾರಿ ದಟ್ಟಣೆ ವಿಚಾರವಾಗಿ ಹಳೇ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿರುವುದರ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಆಯ್ಕೆ ನೀಡಲಾಗಿದ್ದು, ಇಂತಹ ಗಾಡಿಗಳನ್ನು ಅವರು ತೆಗೆದುಕೊಂಡು ಯಾರ್ಡ್ ಗಳಿಗೆ ಹಾಕಿ ಹರಾಜು ಮಾಡಲು ಅವಕಾಶ ನೀಡಲಾಗಿದೆ” ಎಂದು ಮಾಹಿತಿ ನೀಡಿದರು. ಆಗಸ್ಟ್ 20ರ ವೇಳೆಗೆ ಕಾವೇರಿ 5ನೇ ಹಂತಕ್ಕೆ ಚಾಲನೆ: ಕಾವೇರಿ 5ನೇ ಹಂತದ ನೀರು ಪೂರೈಕೆ ಯೋಜನೆ ಪ್ರಯೋಗ ಹಂತದಲ್ಲಿದೆ. ಆಗಸ್ಟ್ 15ರಂದು ಇದಕ್ಕೆ ಚಾಲನೆ ನೀಡಲು ತೀರ್ಮಾನಿಸಿದ್ದೆ. ಆದರೆ ಅಧಿಕಾರಿಗಳು ಇನ್ನು ಐದಾರು ದಿನ ಸಮಯಾವಕಾಶ ಕೇಳುತ್ತಿದ್ದು, ಆಗಸ್ಟ್ 20ರ ವೇಳೆಗೆ ನೀರು ನೀಡಲಾಗುವುದು ಎಂದರು.

DK Shivakumar-R Ashok
ರಾಮನಗರ ಇನ್ಮುಂದೆ ಬೆಂಗಳೂರು ದಕ್ಷಿಣ ಜಿಲ್ಲೆ: ಹೆಸರು ಬದಲಾವಣೆಗೆ ಸಂಪುಟ ಸಭೆ ಅಸ್ತು

ವಿಶೇಷ ಅನುದಾನಕ್ಕೆ ಬೇಡಿಕೆ

ಇದೆಲ್ಲದರ ಜತೆಗೆ ಬೆಂಗಳೂರಿನ ಶಾಸಕರು ವಿಶೇಷ ಅನುದಾನಗಳನ್ನು ಕೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಚಿವರ ಜತೆ ಚರ್ಚೆ ಮಾಡಿ ಎಷ್ಟು ಅನುದಾನ ನೀಡಲು ಸಾಧ್ಯವೋ ಅದನ್ನು ನೀಡುತ್ತೇವೆ. ಇಂದಿನ ಸಭೆಯಲ್ಲಿ ಎಲ್ಲರೂ ಉತ್ತಮವಾದ ಸಲಹೆಗಳನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬಹಳ ಅನುಭವದ ಶಾಸಕರಿದ್ದು, ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಲು ಬಿಚ್ಚುಮನಸ್ಸಿನಿಂದ ಸಲಹೆ ನೀಡಿದ್ದಾರೆ. ನಗರದಿಂದ ಹೊರಗಿರುವ 15-20 ಕಿ.ಮೀ ದೂರದ ನಾಲ್ಕು ಕಡೆ ಕಸ ವಿಲೇವಾರಿ ಮಾಡಲು ನಿರ್ಧರಿಸಲಾಗಿದ್ದು, ಎಲ್ಲೆಲ್ಲಿ ಸರ್ಕಾರಿ ಜಮೀನುಗಳು ಲಭ್ಯವೋ ಅಲ್ಲೆಲ್ಲಾ ಬಳಸುತ್ತೇವೆ, ಇಲ್ಲವಾದಲ್ಲಿ ಖಾಸಗಿ ಜಮೀನುಗಳನ್ನು ಖರೀದಿಸಲಾಗುವುದು ಎಂದರು.

ಬ್ರ್ಯಾಂಡ್ ಬೆಂಗಳೂರು ವಿಚಾರವಾಗಿ ಚರ್ಚೆಯಾಗಿದೆ. ಇನ್ನು ಗ್ರೇಟರ್ ಬೆಂಗಳೂರು ವಿಧೇಯಕ ವಿಚಾರವಾಗಿ ಎಲ್ಲಾ ಪಕ್ಷದ ಶಾಸಕರು ಸದನ ಸಮಿತಿ ರಚನೆಗೆ ಮನವಿ ಮಾಡಿದ ಕಾರಣ ಸಮಿತಿ ರಚನೆಗೆ ನಿರ್ಧರಿಸಿದ್ದೇವೆ. ವಿರೋಧ ಪಕ್ಷದ ನಾಯಕರು ಅವರ ಪಕ್ಷದ ಶಾಸಕರ ಹೆಸರನ್ನು ಎಷ್ಟು ಬೇಗ ನೀಡುತ್ತಾರೋ ಅಷ್ಟು ಬೇಗ ಸಮಿತಿ ರಚನೆ ಮಾಡಲಾಗುವುದು. ಬೆಂಗಳೂರು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಕಾಮಗಾರಿ ನಡೆಸಲು ವಿಶೇಷ ಅನುದಾನ ಕೋರಿದ್ದಾರೆ. ಈ ಕುರಿತು (ವಿಶೇಷ ಅನುದಾನ) ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಸಾಧ್ಯವಾದಷ್ಟು ಬಿಡುಗಡೆ ಮಾಡುತ್ತೇವೆ, ಶಾಸಕರು ಹಲವು ಸಲಹೆಗಳನ್ನು ನೀಡಿದ್ದು, ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.

ರಾಜಕೀಯ ಬೇಡ

''ರಾಜಕೀಯವನ್ನು ಬೂತ್‌ ಮಟ್ಟದಲ್ಲಿ ಮಾಡೋಣ. ಈಗ ಎಲ್ಲ ಪಕ್ಷದ ನಾಯಕರು ಸೇರಿ ಬೆಂಗಳೂರನ್ನು ಕಟ್ಟೋಣ. ಬೆಂಗಳೂರಿನ ಭವಿಷ್ಯದ ಹಿತ ಕಾಯಲು ಅಗತ್ಯವಾದ ಎಲ್ಲ ಕ್ರಮಗಳನ್ನು ಗ್ರೇಟರ್‌ ಬೆಂಗಳೂರಿನಡಿ ಕೈಗೊಳ್ಳಲಾಗುತ್ತಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವಿಚಾರವಾಗಿ ಗಾಬರಿಯಾಗುವುದು ಬೇಡ. ವಿಧೇಯಕದ ಸಂಪೂರ್ಣ ಮಾಹಿತಿ ಶಾಸಕರ ಕೈಯಲ್ಲಿದೆ. ಪ್ರತಿ ಪದವನ್ನೂ ಪರಿಶೀಲಿಸಿ, ಚರ್ಚೆ ಮಾಡಿ, ನಿಮ್ಮ ಸಲಹೆ ಸೂಚನೆ ನೀಡಿದರೆ, ಅದನ್ನೂ ಪರಿಗಣಿಸುತ್ತೇವೆ,'' ಎಂದರು.

ಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ, ಸಚಿವ ಜಮೀರ್‌ ಅಹ್ಮದ್‌ ಖಾನ್‌, ಶಾಸಕರಾದ ಡಾ. ಸಿ.ಎನ್‌.ಅಶ್ವತ್ಥನಾರಾಯಣ್‌, ಕೆ.ಗೋಪಾಲಯ್ಯ, ಹ್ಯಾರಿಸ್‌, ಎಂ.ಕೃಷ್ಣಪ್ಪ, ಎಸ್‌.ಆರ್‌.ವಿಶ್ವನಾಥ್‌, ರವಿ ಸುಬ್ರಮಣ್ಯ, ಮುನಿರಾಜು, ಮುನಿರತ್ನ, ರಾಮಮೂರ್ತಿ, ಮಂಜುಳಾ ಅರವಿಂದ ಲಿಂಬಾವಳಿ, ಎಂ.ಸಿ.ಶ್ರೀನಿವಾಸ್‌, ಸತೀಶ್‌ ರೆಡ್ಡಿ, ಶಿವಣ್ಣ, ಬೈರತಿ ಬಸವರಾಜ್‌, ವಿಧಾನಪರಿಷತ್‌ ಸದಸ್ಯರಾದ ಪುಟ್ಟಣ್ಣ, ಶರವಣ, ಸುಧಾಮದಾಸ್‌ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com