
ಬೆಳಗಾವಿ: ಖಾನಾಪುರ ಕಾಡಂಚಿನ ಅಮಗಾಂವ ಗ್ರಾಮದಲ್ಲಿ ಕಟ್ಟಿಗೆ ಸ್ಟ್ರೇಚರ್ನಲ್ಲಿ 10 ಕಿ.ಮೀ. ಹೊತ್ತೊಯ್ದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಹರ್ಷದಾ ಘಾಡಿ (38) ಮೃತಪಟ್ಟಿದ್ದಾರೆ. ತೀವ್ರ ಜ್ವರದ ಹಿನ್ನೆಲೆಯಲ್ಲಿ ಜುಲೈ 18ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದರು.
ಕಟ್ಟಿಗೆಯಲ್ಲಿ ಸ್ಟ್ರೇಚರ್ ಮಾಡಿ 10 ಕಿಮೀ ಚಿಕಲೆವರೆಗೂ ಸುರಿಯುತ್ತಿದ್ದ ಭಾರಿ ಮಳೆಯಲ್ಲಿಯೇ ಹೊತ್ತುಕೊಂಡು ಬಂದಿದ್ದರು. ಈ ಮೂಲಕ ಮಹಿಳೆಯ ಪ್ರಾಣ ಉಳಿಸಲು ಕಸರತ್ತು ನಡೆಸಿದ್ದರು. ಆದರೆ, ಗ್ರಾಮಸ್ಥರ ಹೋರಾಟ ಕೊನೆಗೂ ಫಲಿಸಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ಮಹಿಳೆ ಸಾವನ್ನಪ್ಪಿದ್ದಾರೆ.
ಮಹಿಳೆಯ ಕುಟುಂಬವನ್ನು ಭೇಟಿ ಮಾಡಿದ ಸರ್ಕಾರಿ ಅಧಿಕಾರಿಗಳು ಮತ್ತು ಹಲವಾರು ಎನ್‌ಜಿಒಗಳು ಆಕೆಯ ಕುಟುಂಬಕ್ಕೆ ಸಹಾಯ ಮಾಡುವ ಭರವಸೆ ನೀಡಿದ್ದರು.
ಮಹಿಳೆ ಆಸ್ಪತ್ರೆಗೆ ದಾಖಲಾದ ಬಳಿಕ ಖಾನಾಪುರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದ ಅಂಜಲಿತಾಯಿ ಟ್ರಸ್ಟ್ ಕೂಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಭರವಸೆ ನೀಡಿತ್ತು.
ಎದೆನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಬ್ರೈನ್ ಟ್ಯೂಮರ್ ಕೂಡ ಇತ್ತು ಎಂದು ಹೇಳಲಾಗಿತ್ತು. ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ವೈದ್ಯರು ಕಳೆದ ಕೆಲವು ದಿನಗಳಿಂದ ಆಕೆಗೆ ಚಿಕಿತ್ಸೆ ನೀಡಲು ಸಾಕಷ್ಟು ಯತ್ನ ನಡೆಸಿದ್ದರೂ ಆರೋಗ್ಯ ಸ್ಥಿತಿ ಮಾತ್ರ ಕ್ಷೀಣಿಸುತ್ತಲೇ ಬಂದಿತ್ತು. ಇದರಂತೆ ಗುರುವಾರ ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಖಾನಾಪುರಕ್ಕೆ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸಬೇಕೆಂಬ ಅಮಗಾಂವ ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಸರಕಾರ ನಿರ್ಲಕ್ಷಿಸಿದೆ.
ಅಮಗಾಂವದಿಂದ ಖಾನಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದ್ದಿದ್ದರೆ ಹರ್ಷದಾ ಅವರ ಜೀವ ಉಳಿಸಬಹುದಿತ್ತು. ಆಂಬ್ಯುಲೆನ್ಸ್ ಗ್ರಾಮಕ್ಕೆ ಸೂಕ್ತ ಸಮಯಕ್ಕೆ ಬಂದಿದ್ದರೆ, 10 ಕಿಮೀ ವರೆಗೆ ಮರದ ಕಟ್ಟಿಗೆ ಸ್ಟ್ರೆಚರ್ ಮೂಲಕ ಆಕೆಯನ್ನು ಸಾಗಿಸುವ ಸಮಯ ತಪ್ಪುತ್ತಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
Advertisement