ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ: ಕೃಷ್ಣಾ ನದಿಯಲ್ಲಿ ಪ್ರವಾಹದ ಭೀತಿ, ನದಿ ತೀರದ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ
ಅಥಣಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ನೀರಿನ ಒಳಹರಿವು 2.5 ಲಕ್ಷ ಕ್ಯೂಸೆಕ್‌ಗೆ ಏರಿಕೆಯಾಗಿದ್ದು, ಪ್ರವಾಹ ಭೀತಿಯಿಂದಾಗಿ ಅಥಣಿ ಹುಲಗಬಾಳ ಗ್ರಾಮದ ಪಕಾಲಿ ತೋಟ ಸೇರಿದಂತೆ ಮಾಂಗ ತೋಟದ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಗಂಟುಮೂಟೆ ಹೊತ್ತು ಹೊರಟಿರುವ ನದಿತೀರದ ಗ್ರಾಮಸ್ಥರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಲಗಬಾಳ ಗ್ರಾಮದ ಮಾಂಗ ಕುಗ್ರಾಮದಲ್ಲಿ ನದಿ ನೀರು ತುಂಬಿದ್ದು, ಗ್ರಾಮ ದ್ವೀಪವಾಗಿ ಮಾರ್ಪಟ್ಟಿದೆ. ಪ್ಲಾಸ್ಟಿಕ್ ಬ್ಯಾರೆಲ್‌ಗಳ ಸಹಾಯದಿಂದ ಗ್ರಾಮದ ಜನರು ಮತ್ತು ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ.
ಈ ಸಂದರ್ಭದಲ್ಲಿ ಮಾಂಗ ವಸತಿ ಶಂಕರ್ ಮಾಂಗ್ ಎಂಬ ಪಾರ್ಶ್ವವಾಯು ಪೀಡಿತ ಬ್ಯಾರೆಲ್ ಮೂಲಕ ನಡುಗಡ್ಡೆಯಿಂದ ಹೊರಬರಲು ಹರಸಾಹಸ ಪಟ್ಟರು. ಸ್ವಾಧೀನ ಕಳೆದುಕೊಂಡ ಕೈ ಕಾಲುಗಳಿಂದ ನಡೆಯಲು ಬಾರದ ಈತನನ್ನು ವಾಹನ ಏರಿಸಲು ಪರದಾಟ ನಡೆಸಿದ ಪ್ರಸಂಗ ಕರುಳು ಕಿತ್ತುಬರುವಂತಿತ್ತು.
ಹುಲಗಬಾಳ ಗ್ರಾಮದ ಬಹುತೇಕ ತೋಟಪ್ರದೇಶಗಳಲ್ಲಿ ಕೃಷ್ಣಾ ನದಿಯ ನೀರು ನುಗ್ಗಿದ್ದು, ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಲವು ದಶಕಗಳಿಂದಲೂ ನಮಗೆ ಪುನರ್ವಸತಿ ಕಲ್ಪಿಸಿ ಶಾಶ್ವತ ನೆಲೆಗೆ ಅವಕಾಶ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಸಹ ನಮಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ