
ಬೆಂಗಳೂರು: ವಿಪಕ್ಷಗಳ ಸುದ್ದಿಗೋಷ್ಠಿ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೂಗಿನಿಂದ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಮುಡಾ ಹಗರಣ ವಿರೋಧಿಸಿ ಆಗಸ್ಟ್ 3ರಿಂದ ಪಾದಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಸಮನ್ವಯ ಸಭೆ ಜೆಡಿಎಸ್ ಕಚೇರಿಯಲ್ಲಿ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮೂಗಿನಿಂದ ರಕ್ತಸ್ರಾವವಾಗಿದೆ. ಈ ವೇಳೆ ಬಟ್ಟೆಯಿಂದ ಮೂಗನ್ನು ಒರೆಸಿಕೊಂಡರೂ ರಕ್ತಸ್ರಾವ ನಿಲ್ಲಲಿಲ್ಲ. ಹೀಗಾಗಿ ಜೊತೆಯಲ್ಲಿದ್ದ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ತಂದೆಯನ್ನು ಜಯನಗರ ಅಪೋಲೋ ಆಸ್ಪತ್ರೆಗೆ ಕರೆದೊಯ್ದರು.
ಅಪೋಲೊ ಆಸ್ಪತ್ರೆಯ ಇಎನ್ಟಿ ವಿಭಾಗದ ಮುಖ್ಯಸ್ಥ ಡಾ. ಯತೀಶ್ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರಕ್ತ ಸೋರಿಕೆ ನಿಂತಿದ್ದು, ಆತಂಕಪಡುವ ಅಗತ್ಯ ಇಲ್ಲ. ಕುಮಾರಸ್ವಾಮಿ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅಪೋಲೊ ವೈದ್ಯರು ತಿಳಿಸಿದ್ದಾರೆ.
ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ನಿಖಿಲ್ ಕುಮಾರಸ್ವಾಮಿ, ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಕೆಲಸದ ಒತ್ತಡದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಆಗಿಲ್ಲ. ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ. ತಂದೆ-ತಾಯಿ ಆಶೀರ್ವಾದ ಕುಮಾರಣ್ಣ ಮೇಲೆ ಇದೆ. ಅವರಿಗೆ ಏನೂ ಆಗಿಲ್ಲ, ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್ ಮಂಜುನಾಥ್ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಅವರಿಗೆ ಎರಡನೇ ಬಾರಿ ಈ ರೀತಿ ಆಗುತ್ತಿದೆ. ರಕ್ತ ಹೆಪ್ಪುಗಟ್ಟಬಾರದು ಎಂದು ಥಿನ್ನರ್ ತೆಗೆದುಕೊಳ್ಳುತ್ತಿದ್ದರು. ಕುಮಾರಸ್ವಾಮಿಗೆ ಬಿಪಿ ನಾರ್ಮಲ್ ಇದೆ. ನಿತ್ಯ ಶುಗರ್ ಲೆವೆಲ್ ಚೆಕ್ ಮಾಡಿಕೊಳ್ಳುತ್ತಿದ್ದರು. ಪ್ರವಾಸ ಹೆಚ್ಚಾಗಿ ಓವರ್ ಹೀಟ್‌ನಿಂದ ರಕ್ತಸ್ರಾವ ಆಗಿರಬಹುದು ಎಂದು ತಿಳಿಸಿದ್ದಾರೆ.
Advertisement