ವಯನಾಡು ಭೂಕುಸಿತದಲ್ಲಿ ಮೃತಪಟ್ಟ ಕನ್ನಡಿಗರಿಗೆ 5 ಲಕ್ಷ ರೂ. ಪರಿಹಾರ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಇದೊಂದು ಅತ್ಯಂತ ಘೋರ ದುರಂತ, ಈ ದುರಂತದಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ. ಮೃತಪಟ್ಟ ಕನ್ನಡಿಗರಿಗೆ ತಲಾ ರೂ.5 ಲಕ್ಷ ಪರಿಹಾರ ನೀಡಲಾಗುವುದು. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ. ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ನಮ್ಮ ಸರ್ಕಾರ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.
ಕೇರಳದ ವಯನಾಡಿನಲ್ಲಿ ಮಹಾಮಳೆಗೆ ಸಂಭವಿಸಿರುವ ಭೂಕುಸಿತದಿಂದ ನೂರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 143ಕ್ಕೆ ಏರಿಕೆಯಾಗಿದೆ. ವಯನಾಡಿನ ಮೆಪ್ಪಾಡಿಯಲ್ಲಿ ಸಂಭವಿಸಿದ ಘೋರ ಗುಡ್ಡಕುಸಿತ ದುರಂತದಲ್ಲಿ ನಾಲ್ವರು ಕನ್ನಡಿಗರೂ ಪ್ರಾಣ ತೆತ್ತಿದ್ದಾರೆ. ಅಲ್ಲದೇ ಮಂಡ್ಯದ ಇಬ್ಬರು ಹಾಗೂ ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಇಬ್ಬರು ಕನ್ನಡಿಗರು ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ