
ಬೆಂಗಳೂರು: ಬೆಂಗಳೂರಿನಲ್ಲಿ ಸಂಜೆ 4 ಗಂಟೆ ವೇಳೆಗೆ ಸತತ 1 ಗಂಟೆಗೂ ಅಧಿಕ ಸಮಯ ಸುರಿದ ಧಾರಾಕಾರ ಮಳೆಯ ಪರಿಣಾಮ ಒಟ್ಟು 128 ಮರಗಳು ಧರೆಗೆ ಉರುಳಿವೆ.
ಈ ಪೈಕಿ 118 ಮರಗಳು ಧರೆಗೆ ಬಿದ್ದಿದ್ದರೆ, 128 ಬೃಹತ್ ಕೊಂಬೆಗಳು ತುಂಡಾಗಿವೆ. ಪರಿಣಾಮ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಮಧ್ಯೆ ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ಮರ ತುಂಡಾಗಿ ಟ್ರಾಕ್ ಮೇಲೆ ಬಿದ್ದ ಪರಿಣಾಮ ಎಂಜಿ-ರಸ್ತೆ ಟ್ರಿನಿಟಿ ವರೆಗಿನ ಮೆಟ್ರೋ ಸಂಚಾರ ರದ್ದುಗೊಂಡಿತ್ತು.
ಐಎಂಡಿ ಮಾಹಿತಿಯ ಪ್ರಕಾರ ನಗರದಲ್ಲಿ 103.5 ಎಂಎಂ ಮಳೆ ಸುರಿದಿದ್ದು, ವರುಣ ಮಿತ್ರದಲ್ಲಿನ ಮಾಹಿತಿಯ ಪ್ರಕಾರ, ವಿದ್ಯಾಪೀಠದಲ್ಲಿ ಗರಿಷ್ಠ ಅಂದರೆ 86.50 ಎಂಎಂ ಮಳೆ ಕಾಟನ್ ಪೇಟೆಯಲ್ಲಿ 84.50 ಎಂಎಂ, ಹಂಪಿನಗರ, ಹೊರಮಾವು ಪ್ರದೇಶದಲ್ಲಿ 80 ಎಂಎಂ ಕೊಡಿಗೆಹಳ್ಳಿಯಲ್ಲಿ 78.50 ಎಂಎಂ ಮಳೆಯಾಗಿದೆ. ಐಎಂಡಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಧಾರಾಕಾರ ಸುರಿದ ಮಳೆಯ ಪರಿಣಾಮ ಕೆಲವೇ ನಿಮಿಷಗಳಲ್ಲಿ ರಸ್ತೆಗಳು ಜಲಾವೃತಗೊಂಡು ನದಿಗಳಂತಾಗಿದ್ದವು. ಏರ್‌ಪೋರ್ಟ್ ರಸ್ತೆ, ಹೊಸೂರು ರಸ್ತೆ, ಪೀಣ್ಯ, ಕೋರಮಂಗಲ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ಹೆಬ್ಬಾಳ ಮತ್ತಿತರ ಪ್ರದೇಶಗಳಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯಲ್ಲಿ ಜಲಾವೃತಗೊಂಡಿದ್ದರಿಂದ ತೀವ್ರ ದಟ್ಟಣೆ ಉಂಟಾಗಿತ್ತು.
ಅಂಡರ್‌ಪಾಸ್‌ನಲ್ಲಿ ಬಸ್ ಸಿಲುಕಿದ ಬಸ್
20ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಿಎಂಟಿಸಿ ಬಸ್ ಜಲಾವೃತಗೊಂಡ ಶಿವಾನಂದ ವೃತ್ತದ ಕೆಳಸೇತುವೆಯಲ್ಲಿ ಸಿಲುಕಿಕೊಂಡ ಘಟನೆಯೂ ವರದಿಯಾಗಿದೆ. ಪ್ರಯಾಣಿಕರು, ಚಾಲಕ ಮತ್ತು ಕಂಡಕ್ಟರ್ ಸುರಕ್ಷಿತವಾಗಿ ಬಸ್‌ನಿಂದ ಹೊರಬಂದರು. ಸಾರ್ವಜನಿಕರು ಪ್ಲಾಸ್ಟಿಕ್ ಕವರ್‌ಗಳು, ಮರದ ಕೊಂಬೆಗಳು ಮತ್ತು ಚರಂಡಿಗೆ ಅಡ್ಡಿಪಡಿಸಿದ ಇತರ ಕಸವನ್ನು ತೆರವುಗೊಳಿಸಿ ಬಸ್ ಅನ್ನು ಅಂಡರ್‌ಪಾಸ್‌ನಿಂದ ಹೊರಕ್ಕೆ ತಳ್ಳಿದರು. ಮಂಜುನಾಥ ನಗರಕ್ಕೆ ನೀರು ನುಗ್ಗಿರುವ ಬಗ್ಗೆಯೂ ವರದಿಯಾಗಿದೆ.
ಮಳೆ ಹಾನಿ ತಪ್ಪಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಭಾರಿ ಮಳೆಯಾಗುತ್ತಿದ್ದು ಬಿಬಿಎಂಪಿ ನಿಯಂತ್ರಣ ಕೊಠಡಿಗಳ ಸಿಬ್ಬಂದಿ ಅಲರ್ಟ್ ಆಗಿದ್ದಾರೆ, ಮಳೆನೀರು ಮಳೆನೀರು ಚರಂಡಿಗಳಿಗೆ ಮುಕ್ತವಾಗಿ ಹರಿಯುವಂತೆ ಮತ್ತು ಜಲಾವೃತವಾಗದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಭಾನುವಾರ ರಾತ್ರಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದಾಗಿ ಅವರು ಹೇಳಿದರು.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಳೆ ಸಂಬಂಧಿತ ದೂರುಗಳಿಗೆ ಸ್ಪಂದಿಸುವಂತೆ ಪಾಲಿಕೆಯ ಉನ್ನತಾಧಿಕಾರಿಗಳಿಗೆ ಸೂಚಿಸಿದ್ದಾರೆ.
Advertisement