ಚಿತ್ರದುರ್ಗ: ದುಷ್ಟಶಕ್ತಿಗಳಿಂದ ಮುಕ್ತಿ ನೀಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೆ ಅತ್ಯಾಚಾರವೆಸಗಿದ ಮತ್ತು ಸಂತ್ರಸ್ತೆಯ ಸಹೋದರ ಕೂಡ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತೆ ಮಾಡಿದ ಆರೋಪದ ಮೇಲೆ ಪೊಲೀಸರು ಸೋಮವಾರ ಚಿತ್ರದುರ್ಗದಲ್ಲಿ ಮಂತ್ರವಾದಿಯನ್ನು ಬಂಧಿಸಿದ್ದಾರೆ.
ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದ್ದು, ಪೊಲೀಸರು ಆರೋಪಿ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಅಪ್ರಾಪ್ತ ಸಂತ್ರಸ್ತೆ ಮೂರು ವರ್ಷ ಕುರಾನ್ ಓದಲೆಂದು ಮಸೀದಿಗೆ ತೆರಳುತ್ತಿದ್ದರು. ಈ ವೇಳೆ ಆಕೆಯನ್ನು ದುಷ್ಟಶಕ್ತಿಗಳು ಆವರಿಸಿದ್ದು, ಆಕೆಯ ಮನೆಯಲ್ಲಿ ವಿಶೇಷ ಪೂಜೆ ನಡೆಸಬೇಕು ಎಂದು ಆರೋಪಿಯು ಆಕೆಯ ಪೋಷಕರಿಗೆ ತಿಳಿಸಿದ್ದಾನೆ.
ಅದರಂತೆ ಆರರಿಂದ ಏಳು ತಿಂಗಳ ಕಾಲ ವಾರಕ್ಕೊಮ್ಮೆಯಂತೆ ಬಾಲಕಿಯ ಮನೆಗೆ ಮಂತ್ರವಾದಿ ಭೇಟಿ ನೀಡಿದ್ದಾನೆ. ಆತ ಭೇಟಿ ನೀಡಿದ ಪ್ರತಿ ಬಾರಿಯು, ಸಂತ್ರಸ್ತೆ ಮತ್ತು ಆಕೆಯ ಸಹೋದರನನ್ನು ಕೊಠಡಿಗೆ ಕರೆದೊಯ್ದು, ಪೋಷಕರನ್ನು ಕೊಠಡಿಯಿಂದ ಹೊರಗಿರುವಂತೆ ಸೂಚಿಸಿದ್ದಾನೆ.
ಸಂತ್ರಸ್ತೆಯಿಂದ ದುಷ್ಟಶಕ್ತಿಗಳನ್ನು ದೂರ ಮಾಡಬೇಕಾದರೆ ಆಕೆಯೊಂದಿಗೆ ಲೈಂಗಿಕವಾಗಿ ವ್ಯವಹರಿಸಬೇಕು ಎಂದು ಸಂತ್ರಸ್ತೆಯ ಸಹೋದರನಿಗೆ ಬ್ರೈನ್ ವಾಶ್ ಮಾಡಿದ್ದಾನೆ. ಅದರಂತೆ, ಆಕೆಯನ್ನು ಗುಣಪಡಿಸುವ ಹೆಸರಿನಲ್ಲಿ ಆತನೂ ಆಕೆಗೆ ಲೈಂಗಿಕ ಕಿರುಕುಳ ನೀಡುವಂತೆ ಮಾಡಿದ್ದಾನೆ.
ಆರೋಪಿ ಈ ಕೃತ್ಯವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಆಕೆಯ ಮೇಲೆ ತಾನೂ ಅತ್ಯಾಚಾರ ಎಸಗಿದ್ದಾನೆ. ಇದೇ ರೀತಿ ಆರು ತಿಂಗಳ ಕಾಲ ಆರೋಪಿ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗಳು ಹೊಟ್ಟೆನೋವು ಎಂದು ದೂರಿದ ನಂತರ ಪೋಷಕರು ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಸಂತ್ರಸ್ತೆಯ ಸಹೋದರನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement