ಬೆಂಗಳೂರು: ಸ್ಕೂಟರ್ ನಲ್ಲಿ ಬಂದ ವ್ಯಕ್ತಿಯೋರ್ವ ಕಾರಿನ ಮೇಲೆ ದಾಳಿ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಟ್ರಾಫಿಕ್ ಗೆ ಕುಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಎಷ್ಟೇ ಜಾಗರೂಕರಾಗಿ ವಾಹನ ಚಲಾಯಿಸಿದರೂ ಕಡಿಮೆಯೇ.. ನಗರದಲ್ಲಿ ನಿತ್ಯ ವಾಹನ ಸವಾರರ ಒಂದಿಲ್ಲೊಂದು ರಸ್ತೆ ಕಾಳಗಳು ನಡೆಯುತ್ತಲೇ ಇರುತ್ತವೆ.
ಕೆಲವು ಸ್ವಯಂಕೃತ ಅಪರಾಧಗಳಿಂದಾದರೆ, ಇನ್ನೂ ಕೆಲವು ತಮ್ಮದಲ್ಲದ ತಪ್ಪಿನಿಂದಾಗಿ ಎದುರಿಸುವ ಪರಿಸ್ಥಿತಿಗಳಾಗಿರುತ್ತವೆ.
ಈ ಪಟ್ಟಿಗೆ ಇದೀಗ ಮತ್ತೊಂದು ಪ್ರಕರಣ ಸೇರಿಕೊಂಡಿದ್ದು, ಮಾರ್ಕೆಟಿಂಗ್ ವೃತ್ತಿಪರರ ಕಾರಿಗೆ ಸ್ಕೂಟರ್ ಚಾಲಕನೋರ್ವ ಅಡ್ಡಿ ಬಂದು ನೋಡ ನೋಡುತ್ತಲೇ ಕಲ್ಲಿನಿಂದ ಕಿಟಕಿ ಗಾಜು ಒಡೆದು ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ.
ನಗರದ ವಿಬ್ಗ್ಯೋರ್ ಹೈಸ್ಕೂಲ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ವಾಹನ ಚಲಾಯಿಸುತ್ತಿದ್ದ ಮಾರ್ಕೆಟಿಂಗ್ ವೃತ್ತಿಪರರ ಕಾರಿಗೆ ಸ್ಕೂಟರ್ ಚಾಲಕನೊಬ್ಬ ಹಾನಿ ಮಾಡಿದ್ದಾನೆ. ಈ ಘಟನೆಯ ಸಂಪೂರ್ಣ ವಿಡಿಯೋ ಕಾರಿನಲ್ಲಿ ಅಳವಡಿಸಲಾಗಿದ್ದ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಪ್ರಕರಣ ಸಂಬಂಧ ಇದೀಗ ಪೊಲೀಸ್ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಬೆಂಗಳೂರಿನ ಬ್ಗ್ಯೋರ್ ಹೈಸ್ಕೂಲ್ ರಸ್ತೆಯಲ್ಲಿ ಶನಿವಾರ ಬೆಳಗ್ಗೆ 11.39ಕ್ಕೆ ಮಾರ್ಕೆಟಿಂಗ್ ವೃತ್ತಿಪರರಾಗಿರುವ ದೀಪಕ್ ಜೈನ್ ಎಂಬುವವರು ತಮ್ಮ ಕಾರಿನಲ್ಲಿ ಚಲಿಸುತ್ತಿದ್ದಾಗ ದಿಢೀರನೇ ಕರ್ನಾಟಕ ನೋಂದಣಿ ಸಂಖ್ಯೆಯ ಬೂದು ಬಣ್ಣದ ಓಲಾ ಸ್ಕೂಟರ್ ಸವಾರ ಅವರನ್ನು ಹಿಂಬಾಲಿಸಲು ಆರಂಭಿಸಿದ್ದಾನೆ. ಕೆಲ ದೂರದವರೆಗೂ ಹಿಂಬಾಲಿಸಿದ ಆತ ಬಳಿಕ ಹಾರ್ನ್ ಮಾಡಿ ಕಾರು ನಿಲ್ಲಿಸುವಂತೆ ಹೇಳಿದ್ದಾನೆ.
ಇದಕ್ಕೆ ಸೊಪ್ಪು ಹಾಕದ ದೀಪಕ್ ಜೈನ್ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾರೆ. ಆದರೆ ಇದರಿಂದ ಆಕ್ರೋಶಗೊಂಡ ಸ್ಕೂಟರ್ ಸವಾರ ವೇಗವಾಗಿ ಬಂದು ಎಡಭಾಗದಿಂದ ಅವರ ಕಾರನ್ನು ಅಡಗಟ್ಟಿದ್ದಾನೆ. ಈ ವೇಳೆ ದೀಪಕ್ ಜೈನ್ ಕಾರು ನಿಲ್ಲಿಸಿದ್ದು, ಕೂಡಲೇ ಸ್ಕೂಟರ್ ನಿಂದ ಇಳಿದ ಸವಾರ ನೋಡ ನೋಡುತ್ತಲೇ ಪಕ್ಕದಲ್ಲೇ ಬಿದ್ದಿದ್ದ ಎಳನೀರಿನ ಚಿಪ್ಪನ್ನು ತೆಗೆದುಕೊಂಡು ಬಂದು ಕಾರಿನ ಕಿಟಕಿ ಗಾಜಿಗೆ ಹೊಡೆದಿದ್ದಾನೆ.
ಈ ವೇಳೆ ವಿಚಲಿತರಾದ ದೀಪಕ್ ಜೈನ್ ಸಾವರಿಸಿಕೊಳ್ಳುವಷ್ಟರಲ್ಲೇ ಆತ ಬಲವಂತವಾಗಿ ಕಾರಿನ ಮತ್ತೊಂದು ಕಿಟಕಿಗೆ ಹೊಡೆದು ಕಾರಿನ ಬಾಗಿಲು ತೆಗೆಯಲು ಯತ್ನಿಸಿದ್ದಾನೆ. ಇದರಿಂದ ಭಯಗೊಂಡ ದೀಪಕ್ ಜೈನ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಇದೇ ವೇಳೆ ಟ್ರಿಬರ್ ಕಾರೊಂದು ದೀಪಕ್ ಜೈನ್ ಕಾರಿಗೆ ಅಡ್ಡಬಂದಿದ್ದು, ಅದರಿಂದಲೂ ದೀಪಕ್ ಜೈನ್ ತಪ್ಪಿಸಿಕೊಂಡಿದ್ದಾರೆ. ಇವಿಷ್ಟೂ ಘಟನೆ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೇ ವಿಡಿಯೋಗಳನ್ನು ದೀಪಕ್ ಜೈನ್ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿ ತನ್ನ ಕರಾಳ ಅನುಭವ ಹಂಚಿಕೊಂಡಿದ್ದಾರೆ. ಇದೇ ವಿಡಿಯೋ ಆಧಾರದ ಮೇಲೆ ದೀಪಕ್ ಜೈನ್ ಪೊಲೀಸ್ ದೂರು ನೀಡಿದ್ದಾರೆ.
ದೀಪಕ್ ಜೈನ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡ ನಂತರ ಕೆಲ ನೆಟ್ಟಿಗರೂ ಕೂಡ ತಮಗಾದ ಇದೇ ರೀತಿಯ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.
ಹಲ್ಲೆ ಮಾಡಿದವನಿಗಾಗಿ ಪೊಲೀಸರ ಹುಡುಕಾಟ
ಇನ್ನು ದಾಳಿಯ ಹಿಂದಿನ ಕಾರಣವನ್ನು ಕಂಡುಹಿಡಿಯಲು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಕೂಟರ್ ಸವಾರನನ್ನು ಹುಡುಕುತ್ತಿದ್ದಾರೆ. ಜೈನ್ ಅವರ ದೂರಿನ ಆಧಾರದ ಮೇಲೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನ ಚಾಲಕನನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement