ಪ್ರಜ್ವಲ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ; ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಥಳಿತ; ಶಿವಾನಂದ ಸ್ವಾಮೀಜಿ ಬರ್ಬರ ಹತ್ಯೆ! ಇಂದಿನ ಪ್ರಮುಖ ಸುದ್ದಿಗಳು 10-06-24

ಪ್ರಜ್ವಲ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ; ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಥಳಿತ; ಶಿವಾನಂದ ಸ್ವಾಮೀಜಿ ಬರ್ಬರ ಹತ್ಯೆ! ಇಂದಿನ ಪ್ರಮುಖ ಸುದ್ದಿಗಳು 10-06-24

1. ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಎಸ್‌ಐಟಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು 42ನೇ ಎಸಿಎಂಎಂ ಕೋರ್ಟ್‌ ಮುಂದೆ ಹಾಜರು ಪಡಿಸಲಾಗಿದ್ದು ಕೋರ್ಟ್ ಜೂನ್ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಇದೇ ವೇಳೆ ಎಸ್‌ಐಟಿ ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ತನಿಖಾ ವರದಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಮೇ 31ರಂದು ಪ್ರಜ್ವಲ್ ರನ್ನು ಐಸ್ಐಟಿ ಅಧಿಕಾರಿಗಳು ಬಂಧಿಸಿದ್ದರು. ಮತ್ತೊಂಡೆದೆ ಎಸ್ಐಟಿ ಅಧಿಕಾರಿಗಳು ಇಂದು ಮತ್ತೊಮ್ಮೆ ಪ್ರಜ್ವಲ್ ರೇವಣ್ಣ ಅವರ ಬಸವನಗುಡಿಯ ಮನೆಯಲ್ಲಿ ಸ್ಥಳ ಮಹಜರು ನಡೆಸಿದರು. ಈ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಮನೆಯಲ್ಲೇ ಇದ್ದೂ ಸ್ಥಳ ಮಹಜರಿಗೆ ಸಹಕರಿಸಿದರು.

2. ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೈಸೂರಿನ ಸಿದ್ದಾರ್ಥನಗರದಲ್ಲಿ 90 ವರ್ಷದ ಶಿವಾನಂದ ಸ್ವಾಮೀಜಿಯನ್ನು ಆಪ್ತ ಸಹಾಯಕ 60 ವರ್ಷದ ರವಿ ಎಂಬಾತನೇ ಹತ್ಯೆ ಮಾಡಿದ್ದು ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ನಜರ್‌ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿ ಸ್ವಾಮೀಜಿ ಅವರನ್ನು ರವಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಹುಲ್ಲು ಕತ್ತರಿಸುವ ಆಯುಧದಲ್ಲಿ ಸ್ವಾಮೀಜಿ ಕೊಲೆ ಮಾಡಲಾಗಿದೆ. ಅನ್ನದಾನೇಶ್ವರ ಮಠವು ಸುಮಾರು 9 ಎಕರೆ ವಿಸ್ತೀರ್ಣದಲ್ಲಿದೆ. ಮೈಸೂರು ರಾಜರು ದಾನವಾಗಿ ನೀಡಿದ್ದ ಈ ಮಠದ ಜಾಗದ ವಿಚಾರವಾಗಿ ಹಲವು ವಿವಾದಗಳು ಇವೆ.

3. ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ

ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಗೆಲುವಿನ ವಿಜಯೋತ್ಸವದ ಬಳಿಕ ಮಸೀದಿ ಬಳಿ ಘೋಷಣೆ ಕೂಗಿದ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚೂರಿಯಿಂದ ಇರಿದು ಓರ್ವನಿಗೆ ಥಳಿಸಿರುವ ಘಟನೆ ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಸಮೀಪ ಭಾನುವಾರ ರಾತ್ರಿ ನಡೆದಿದೆ. ಸಂಸದರಾಗಿ ಆಯ್ಕೆಯಾದ ಬ್ರಿಜೇಶ್ ಚೌಟ ಅವರ ವಿಜಯೋತ್ಸವವನ್ನು ಗ್ರಾಮ ಸಮಿತಿ ವತಿಯಿಂದ ಬೋಳಿಯಾರಿನಿಂದ ಧರ್ಮನಗರದವರೆಗೆ ಆಯೋಜಿಸಲಾಗಿತ್ತು. ಈ ವೇಳೆ ಬೋಳಿಯಾರು ಮಸೀದಿ ಸಮೀಪ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಘೋಷಣೆಗಳನ್ನು ಕೂಗಿದ್ದಾರೆ. ವಿಜಯೋತ್ಸವ ಮುಗಿಸಿ ಅಲ್ಲಿಂದ ಮೂವರು ಬೈಕ್ ನಲ್ಲಿ ಮುಡಿಪು ಕಡೆಗೆ ತೆರಳುತ್ತಿದ್ದಾಗ 20-24 ಮುಸ್ಲಿಂ ಯುವಕರ ಗುಂಪು ಹಿಂಬಾಲಿಕೊಂಡು ಬಂದು ಚೂರಿ ಇರಿದಿದ್ದಾರೆ. ಈ ಪೈಕಿ ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತೋರ್ವ ಯುವಕನಿಗೆ ಕೆಎಸ್ ಹೆಗಡೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

4. ಮಕ್ಕಳ ಮಾರಾಟ ಜಾಲ ಬೇಧಿಸಿದ ಮಾಳಮಾರುತಿ ಪೊಲೀಸರು

ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲವನ್ನು ಬೇಧಿಸಿರುವ ಮಾಳಮಾರುತಿ ಪೊಲೀಸರು ಆರ್‌ಎಂಪಿ ವೈದ್ಯ ಸೇರಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಾಲದ ಕಿಂಗ್ ಪಿನ್ ಕಿತ್ತೂರಿನ ಡಾ.ಅಬ್ದುಲ್ ಗಫಾರ್ ಲಾಡಖಾನ್, ನೇಗಿನಹಾಳದ ಮಹಾದೇವಿ ಜೈನ್, ಚಂದನ ಸುಬೇದಾರ್, ಪವಿತ್ರಾ ಹಾಗೂ ಪ್ರವೀಣ್ ಬಂಧಿತ ಆರೋಪಿಗಳಾಗಿದ್ದಾರೆ. ಮದುವೆಗೂ ಮುನ್ನ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಳ್ಳಬೇಕು ಎನ್ನುವ ಯುವತಿಯರನ್ನು ಇವರು ಟಾರ್ಗೆಟ್ ಮಾಡುತ್ತಿದ್ದರು. ಅವಿವಾಹಿತ ಗರ್ಭಿಣಿಯರಿಗೆ ಆಪರೇಷನ್ ಮಾಡಿ ಮಗು ರಕ್ಷಣೆ ಮಾಡಿ ತಾವೇ ಸಾಕುವುದಾಗಿ ಹೇಳಿ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ಮಾರಾಟ ಮಾಡಿ ಹಣ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಲಾಗಿದೆ.

5. ಆಂಬುಲೆನ್ಸ್ ನ್ನು ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ

ಕುಡಿದ ಮತ್ತಿನಲ್ಲಿ ಯುವಕರು ಆಂಬುಲೆನ್ಸ್ ನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಮಾಡಿ ಪುಂಡಾಟ ನಡೆಸಿದ ಘಟನೆ ಬೆಂಗಳೂರಿನ ನೆಲಮಂಗಲ ಟೋಲ್ ಬಳಿ ನಡೆದಿದೆ. ತುಮಕೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಆಂಬುಲೆನ್ಸ್ ಅನ್ನು ಕುಡಿದ ನಶೆಯಲ್ಲಿದ್ದ ನಾಲ್ವರು ಕಾರಿನಲ್ಲಿ ಚೇಸ್ ಮಾಡಿ ಅಡ್ಡಗಟ್ಟಿ ಚಾಲಕನಿಗೆ ಥಳಿಸಿದ್ದಾರೆ. ಹಲ್ಲೆ ಮಾಡಿದವರು ಕುಡಿದ ನಶೆಯಲ್ಲಿದ್ದರು ಎಂದು ಹಲ್ಲೆಗೊಳಗಾದ ಆಂಬುಲೆನ್ಸ್ ಚಾಲಕ ಜಾನ್ ಆರೋಪ ಮಾಡಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು ಯುವರಾಜ್ ಸಿಂಗ್, ಮಂಜುನಾಥ್ ಹಾಗೂ ಲತೀಶ್ ಎಂಬಾತನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com