
ಚಿತ್ರದುರ್ಗ: ನಟ ದರ್ಶನ್ʼನನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು, ಆತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಿ ಎಂದು ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಪುತ್ರನನ್ನು ದರ್ಶನ್ ಹಾಗೂ ಅವರ ಆಪ್ತರು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ರತ್ನಪ್ರಭಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡ ಮನುಷ್ಯನ ಗುಣ ದರ್ಶನ್ ಗಿಲ್ಲ, ಅವನು ಕಳ್ಳ. ಸಿನಿಮಾ ಇಂಡಸ್ಟ್ರಿಯಿಂದಲೇ ಆತನನ್ನು ಬ್ಯಾನ್ ಮಾಡಬೇಕು. ದರ್ಶನ್ ಯಾವುದೇ ಸಿನಿಮಾಗಳನ್ನ ರಿಲೀಸ್ ಮಾಡಬಾರದು. ಡಿ ಬಾಸ್ ಎನ್ನುವ ಅಭಿಮಾನಿಗಳು ಇವನ ಹೇಯ ಕೃತ್ಯವನ್ನು ನೋಡಿ ಕಲಿಯಲಿ. ನನ್ನ ಮಗನಿಗೆ ಆದ ಸ್ಥಿತಿಯೇ ದರ್ಶನ್ ಮಗನಿಗೆ ಆಗಬೇಕು. ಅವರ ಕುಟುಂಬವೇ ಸರ್ವನಾಶ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಎಂದು ತೋರಿಸಿಕೊಂಡಿಲ್ಲ. ಮೆಸೇಜ್ ಮಾಡಿದ ಕಾರಣಕ್ಕೆ ಅಪಹರಣ ಮಾಡಿ ಭೀಕರ ಕೊಲೆ ಮಾಡಿದ್ದಾರೆ. ಮುಖ, ಮರ್ಮಾಂಗಕ್ಕೆ ಭೀಕರ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ಸರ್ಕಾರ ಸೂಕ್ತ ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು. ಸಿಬಿಐ ತನಿಖೆ ಮೂಲಕ ನಟ ದರ್ಶನ್ & ಗ್ಯಾಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಮಗೆ ನ್ಯಾಯ ಬೇಕು: ಪತ್ನಿ ಸಹನಾ ಕಣ್ಣೀರು
ನನ್ನ ಗಂಡ ದರ್ಶನ್ ಅಭಿಮಾನಿಯಾಗಿರಲಿಲ್ಲ. ಅವರು ನನ್ನ ಜೊತೆ ಮೊನ್ನೆ ಕರೆ ಮಾಡಿ ಮಾತನಾಡಿದ್ದೇ ಕೊನೆ. ನಮಗೆ ನ್ಯಾಯ ಕೊಡಿಸಿ ಎಂದು ಮೃತ ರೇಣುಕಾಸ್ವಾಮಿ ಪತ್ನಿ ಸಹನಾ ಹೇಳಿದ್ದಾರೆ.
ನಮ್ಮ ಮನೆಯವರಿಗೆ ಹೀಗೆ ಆಗಿದೆ. ನಮಗೆ ನ್ಯಾಯ ಕೊಡಿಸಿ. ನಮ್ಮ ಮದುವೆಯಾಗಿ ಒಂದು ವರ್ಷ ಕಳೆದಿದೆ. ನಾನು ಗರ್ಭಿಣಿ. ಹೀಗಾಗಬಾರದಿತ್ತು. ತಾಯಿಯಾಗುತ್ತಿರುವ ಈ ವೇಳೆಯಲ್ಲಿ ಹೀಗಾದ್ರೆ ಏನ್ಮಾಡಲಿ ಎಂದು ಕಣ್ಣೀರಿಟ್ಟಿದ್ದಾರೆ.
ದರ್ಶನ್ ಮೇಲೆ ಆರೋಪ ಬಂದಿರುವಾಗ ನ್ಯಾಯ ಕೊಡಿಸಲು ಜನ ಇದ್ದಾರೆ. ನಾನು ಮುಂದೆ ಜೀವನ ಮಾಡೋದು ಹೇಗೆ. ಮುಂದೆ ಈ ಮಗುವಿಗೆ ಯಾರು ಬರ್ತಾರೆ. ನಮಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ.
ಮೃತದೇಹ ಎಸೆಯಲು 30 ಲಕ್ಷ ರೂ. ಹಣ ಕೊಟ್ಟಿದ್ದ ನಟ ದರ್ಶನ್?
ಈ ನಡುವೆ ರೇಣುಕಾಸ್ವಾಮಿಯ ಶವವನ್ನು ಎಸೆದು, ಕೊಲೆ ಆರೋಪವನ್ನು ಹೊತ್ತುಕೊಳ್ಳಲು ಮೂವರಿಗೆ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ನೀಡಿದ್ದರು ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್, ಹಲ್ಲೆಯಿಂದ ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ.
ಈ ವೇಳೆ ದರ್ಶ್ ಅವರು ಬೇರೆ ಗ್ಯಾಂಗ್ ಒಂದನ್ನು ಕರೆಸಿ, ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆಂದು ಹೇಳಲಾಗುತ್ತಿದೆ.
ಅಂತರ ಕಾಯ್ದುಕೊಂಡ್ ದರ್ಶನ್ ಪತ್ನಿ ವಿಜಯಲಕ್ಷ್ಮಿ!
ಏತನ್ಮಧ್ಯೆ ಪತಿ ಬಂಧನವಾಗಿದ್ದೂ, ಈ ವರೆಗು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಯಾವುದೇ ಪೋಸ್ಟ್ ಹಾಕಿಲ್ಲ. ಅಲ್ಲದೆ, ಇನ್ಸ್ಟಾಗ್ರಾಮ್ ಪ್ರಾಫೈಲ್ ಫೋಟೋನ ಡಿಲೀಟ್ ಮಾಡಿರುವುದರ ಜೊತೆಗೆ ದರ್ಶನ್ ಅವರನ್ನು ಅನ್ಫಾಲೋ ಮಾಡಿರುವುದು ಕಂಡು ಬಂದಿದ್ದು, ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಕೆಲ ತಿಂಗಳ ಹಿಂದೆ ಪವಿತ್ರಾ ಗೌಡ ಅವರು ದರ್ಶನ್ ಜೊತೆ ಇರುವ ಫೋಟೋ ಹಂಚಿಕೊಂಡಿದ್ದರು. 10 ವರ್ಷಗಳ ಸಂಬಂಧ ಎಂದು ಟ್ಯಾಗ್ಲೈನ್ ನೀಡಿದ್ದರು. ಇದನ್ನು ವಿಜಯಲಕ್ಷ್ಮಿ ಖಂಡಿಸಿದ್ದರು. ಇಬ್ಬರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ವಾಕ್ಸಮರ ನಡೆದಿತ್ತು. ಆ ಬಳಿಕ ಎಲ್ಲವೂ ಸೈಲೆಂಟ್ ಆಗಿತ್ತು.
ಜೊತೆಗೆ ಇತ್ತೀಚೆಗೆ ದರ್ಶನ್ ವಿಜಯಲಕ್ಷ್ಮಿ ಜೊತೆ ದುಬೈಗೆ ತೆರಳಿದ್ದು ಅಲ್ಲಿ ಆನಿವರ್ಸರಿ ಸೆಲೆಬ್ರೇಟ್ ಮಾಡಿದ್ದರು. ಅದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಈ ವೇಳೆ ಪವಿತ್ರಾ ಗೌಡ ಕರ್ಮ ರಿಟರ್ನ್ಸ್ ಎನ್ನುವ ಪೋಸ್ಟ್ ಹಂಚಿಕೊಂಡಿದ್ದರು. ಎಲ್ಲವು ಸರಿ ಹೋಗಿದೆ ಎಂದು ವಿಜಯಲಕ್ಷ್ಮಿ ಖುಷಿ ಖುಷಿಯಾಗಿ ಇರೋವಾಗಲ ದರ್ಶನ್ ಅವರು ಪವಿತ್ರಾಗಾಗಿ ಕೊಲೆ ಮಾಡಿದ್ದಾರೆನ್ನುವ ಆರೋಪ ಎಲ್ಲರಿಗೂ ಶಾಕ್ ನೀಡಿದೆ.
Advertisement