
ಬೆಂಗಳೂರು: ಮುದ್ರಾಂಕ ಶುಲ್ಕವಾಯ್ತು, ಮದ್ಯದ ದರವಾಯ್ತು, ತೈಲ ಬೆಲೆಯಾಯ್ತು ಶೀಘ್ರವೇ ಬಸ್ ದರ ಹೆಚ್ಚಳವಾಗಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದ ವರ್ಷದೊಳಗೇ ತೆರಿಗೆ ಪರ್ವ, ಬೆಲೆ ಏರಿಕೆ ಪರ್ವಗಳೇ ಶುರುವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಬೆಲೆ ಏರಿಕೆ ವಿರುದ್ಧ ಕಲಬುರಗಿಯಲ್ಲಿ ಬಿಜೆಪಿ ಗುರುವಾರ ಪ್ರತಿಭಟನೆ ನಡೆಸಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಹಾಗೂ ಇತರ ಮುಖಂಡರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡು, ನಂತರ ಬಿಡುಗಡೆ ಮಾಡಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಅಶೋಕ್ ಅವರು, ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿದ್ದಾಗ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಬಿಜೆಪಿಯನ್ನು ಟೀಕಿಸುತ್ತಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ರೀತಿ ಮಾಡುವುದಿಲ್ಲ ಎನ್ನುತ್ತಿದ್ದರು. ಆದರೀಗ ಮಾತಿಗೆ ತಪ್ಪಿದೆ.
15 ಬಾರಿ ಹಣಕಾಸು ಸಚಿವರಾಗಿ ಬಜೆಟ್ ಮಂಡಿದ್ದಾಗ ಹೇಳಿಕೊಳ್ಳುವ ಸಿದ್ದರಾಮಯ್ಯನವರಿಗೆ ಯಾವಾಗ ಅದೆಷ್ಟು ಹಣ ಹೊಂದಿಸಬೇಕು ಎಂಬುದು ಗೊತ್ತಿಲ್ಲವೇ? ಬಜೆಟ್ ಮಾರನೇ ದಿನವೇ ತೈಲಬೆಲೆ ಹೆಚ್ಚಿಸಬೇಕಿತ್ತು. ಸಮರ್ಥ ಹಣಕಾಸು ಸಚಿವನೆಂದು ಹೇಳಿಕೊಳ್ಳುವ ಸಿಎಂ ಸಮರ್ಥರಲ್ಲ. ತೆರಿಗೆ ಹೆಚ್ಚಿಸಿ ರಾಜ್ಯಭಾರ ಮಾಡುತ್ತಿದ್ದಾರೆಂದು ಕಿಡಿಕಾರಿದರು.
Advertisement