94 ಮಂದಿ ಕನ್ನಡಿಗರಿಗೆ ವಿದೇಶದಲ್ಲಿ ಉದ್ಯೋಗ: KSDC ಹೊಸ ಯೋಜನೆ ನೆರವು!

ಬಿಇ, ಡಿಪ್ಲೋಮಾ, ಐಟಿಐ ಮತ್ತಿತರ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ 94 ಯುವಕರಿಗೆ ಸ್ಲೋವಾಕಿಯಾ ರಾಷ್ಟ್ರದಲ್ಲಿ ಉದ್ಯೋಗ ಕೊಡಿಸುವಲ್ಲಿ ಕೌಶಲ್ಯಾಭಿವೃದ್ಧಿ ನಿಗಮ ಯಶಸ್ವಿಯಾಗಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ರಾಜ್ಯದ ಯುವಕರಿಗೆ ಹೊರದೇಶಗಳಲ್ಲಿ ಉದ್ಯೋಗ ಒದಗಿಸುವ ಮಹತ್ವದ ಯೋಜನೆಯೊಂದನ್ನು ಅನುಷ್ಠಾನಗೊಳಿಸಿದ್ದು, ಇದರ ಭಾಗವಾಗಿ ಬಿಇ, ಡಿಪ್ಲೋಮಾ, ಐಟಿಐ ಮತ್ತಿತರ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ 94 ಯುವಕರಿಗೆ ಸ್ಲೋವಾಕಿಯಾ ರಾಷ್ಟ್ರದಲ್ಲಿ ಉದ್ಯೋಗ ಕೊಡಿಸುವಲ್ಲಿ ಕೌಶಲ್ಯಾಭಿವೃದ್ಧಿ ನಿಗಮ ಯಶಸ್ವಿಯಾಗಿದೆ.

ಯುವಕರ ಕೌಶಲ್ಯ ಅರ್ಹತೆಗೆ ತಕ್ಕಂತೆ ಉದ್ಯೋಗಗಳನ್ನು ನೀಡಲಾಗುತ್ತಿದೆ. ಅವರಿಗೆ ಇಲ್ಲಿಯೇ ತರಬೇತಿ, ವೀಸಾ ವ್ಯವಸ್ಥೆ, ಗೃಹ ಇಲಾಖೆಯಲ್ಲಿ ದಾಖಲಾತಿಗಳ ಪ್ರಮಾಣಪತ್ರ ಪರಿಶೀಲನೆ ಮಾತ್ರವಲ್ಲದೆ ಹೊರರಾಷ್ಟ್ರಗಳಿಗೆ ತೆರಳುವವರಿಗೆ ಊಟ, ವಸತಿ ವ್ಯವಸ್ಥೆ, ಸಂಬಂಧಪಟ್ಟವರ ಭೇಟಿಗೆ ಬೇಕಾದ ಇನ್ನಿತರ ಸೌಲಭ್ಯಗಳ ಬಗ್ಗೆ ಸಹ ಇಲಾಖೆಯ ಅಧಿಕಾರಿಗಳೇ ನಿಗಾವಹಿಸುತ್ತಾರೆ.

ಐಟಿಬಿಟಿ, ವಿಜ್ಞಾನ, ಕೈಗಾರಿಕೆ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕ ಇತರೆ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಮುಂಚೂಣಿಯಲ್ಲಿದೆ. ಇದನ್ನು ಮನಗಂಡ ಸ್ಲೋವಾಕಿಯಾ ರಾಷ್ಟ್ರ ಎರಡೂವರೆ ಸಾವಿರ ಅಸೆಂಬ್ಲಿ ಲೈನ್ ಆಪರೇಟರ್​​ಗಳನ್ನು ನೇಮಕ ಮಾಡಿಕೊಳ್ಳಲು ಮುಂದೆ ಬಂದಿತ್ತು.

ಸ್ಲೋವಾಕಿಯಾ ರಾಷ್ಟ್ರ 2500 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಇಲಾಖೆ ವತಿಯಿಂದ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಯಿತು. ಇದರ ಮೊದಲ ಭಾಗವಾಗಿ 94 ಅಭ್ಯರ್ಥಿಗಳನ್ನು (54 ಮಂದಿ ಐಟಿಐ, 31 ಮಂದಿ ಡಿಪ್ಲೋಮಾ) ಆ ದೇಶಕ್ಕೆ ಬೀಳ್ಕೊಡಲಾಗಿದೆ.

ಸಾಂಕೇತಿಕ ಚಿತ್ರ
ರಾಜ್ಯ ಸರ್ಕಾರಿ ಕಾಲೇಜುಗಳಲ್ಲಿ ಬಿ.ಎ ಕೋರ್ಸ್ ಗೆ ಕೌಶಲ್ಯಾಭಿವೃದ್ಧಿ ವಿಷಯ ಸೇರ್ಪಡೆ

ಆಯ್ಕೆಯಾದ ಅಭ್ಯರ್ಥಿಗಳಿಗೆ ಬಿಡದಿ ಸಮೀಪ ಇರುವ ಟೊಯೋಟಾ ಕೀರ್ಲೋಸ್ಕರ್‌ನಲ್ಲಿ ತರಬೇತಿ ನೀಡಲಾಯಿತು. ಈ ಮೊದಲು ಇಲ್ಲಿ ತರಬೇತಿ ಪಡೆಯಲು 35,000 ರೂ. ವೆಚ್ಚವಾಗುತ್ತಿತ್ತು. ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳೇ ಇಲ್ಲಿ ತರಬೇತಿ ಪಡೆಯುತ್ತಾರೆ ಎಂಬುದನ್ನು ಮನಗಂಡ ಸಚಿವ ಪಾಟೀಲ್, ಯಾವುದೇ ಒಬ್ಬ ಅಭ್ಯರ್ಥಿಯೂ ಒಂದೇ ಒಂದು ಪೈಸೆಯನ್ನೂ ಕಟ್ಟುವುದು ಬೇಡ. ಎಲ್ಲ ಹಣವನ್ನು ಇಲಾಖೆ ವತಿಯಿಂದಲೇ ಭರಿಸಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.

ತರಬೇತಿ ಪಡೆದ ನಂತರ ಸ್ಲೊವಾಕಿಯಾದಲ್ಲಿ ಇವರಿಗೆ ತಿಂಗಳಿಗೆ 970 ಯೂರೋ (86 ಸಾವಿರ ರೂ.) ವೇತನ ನೀಡಲಾಗುತ್ತದೆ. ಜೂನ್ 5ರಂದು ಮೊದಲ ತಂಡ ಹಾಗೂ ಜೂನ್‌ 20ರಂದು 2ನೇ ತಂಡವನ್ನು ಬೀಳ್ಕೊಡಲಾಗಿದೆ. ಜೂನ್‌ 24 ಮತ್ತು ಜುಲೈ 1ರಂದು ಉಳಿದ ತಂಡಗಳು ಸ್ಲೊವಾಕಿಯಾಕ್ಕೆ ತೆರಳಲಿವೆ ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಕೆಎಸ್‍ಡಿಸಿ ಇದೀಗ 37 ಚಾಲಕರನ್ನು ಹಂಗೇರಿಗೆ ದೇಶಕ್ಕೆ ಕಳುಹಿಸಿಕೊಟ್ಟಿದೆ. ಅಲ್ಲದೆ ಮಾರಿಷಸ್‍ಗೆ ವೆಲ್ಡರ್‌ಗಳು, ಬಾಯ್ಲರ್‌ ತಯಾರಕರು ಮತ್ತು ಇತರ ಬ್ಲೂ ಕಾಲರ್ ಕೆಲಸಗಳಿಗಾಗಿ ಸಿಬ್ಬಂದಿಯನ್ನು ಕಳುಹಿಸಿಕೊಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಆಸ್ಟ್ರೇಲಿಯಾ, ಜಪಾನ್, ಫಿನ್ಲೆಂಡ್‌, ಜರ್ಮನಿ, ನಾರ್ವೆಯಿಂದ ದಾದಿಯರಿಗೆ ಬೇಡಿಕೆ ಬಂದಿದ್ದರು, ಇದನ್ನು ಪೂರೈಸಲೂ ಮುಂದಾಗಿದೆ. ಅಲ್ಲದೆ ಸ್ಲೊವಾಕಿಯಾ ಕೂಡ ಹೆಚ್ಚುವರಿಯಾಗಿ ದೊಡ್ಡ ಸಂಖ್ಯೆಯ ಆಪರೇಟರ್‌ಗಳಿಗೆ ಬೇಡಿಕೆ ಸಲ್ಲಿಸಿದೆ. ಇದಲ್ಲದೆ ಗಲ್ಫ್‌, ಯುರೋಪ್ ರಾಷ್ಟ್ರಗಳಿಂದಲೂ ಬೇಡಿಕೆಗಳು ಬಂದಿದ್ದು, ಇದನ್ನು ಈಡೇರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತಿದ್ದೇವೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ ಕನಗವಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com