ಸೂರಜ್ ರೇವಣ್ಣ ಬಂಧನ: ಮಾಧ್ಯಮಗಳ ಪ್ರಶ್ನೆಗೆ HDK ಸಿಡಿಮಿಡಿ; ಮನೆ ಮಕ್ಕಳಿಗೆ ತಪ್ಪು ಮಾಡಿ ಎಂದು ಹೇಳ್ತೇವಾ? ಎಂದ ಕೇಂದ್ರ ಸಚಿವ

ಮನೆ ಮಕ್ಕಳಿಗೆ ತಪ್ಪು ಮಾಡಿ ಎಂದು ಯಾರಾದರೂ ಹೇಳುತ್ತಾರಾ? ಯಾರೇ ತಪ್ಪು ಮಾಡಿದರೂ ತಪ್ಪೇ. ಕಾನೂನಿನ ಮುಂದೆ ಎಲ್ಲರೂ ತಲೆ ಬಾಗಲೇಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಭಾನುವಾರ ಹೇಳಿದರು.
ಕುಮಾರಸ್ವಾಮಿ
ಕುಮಾರಸ್ವಾಮಿ
Updated on

ಬೆಂಗಳೂರು: ಮನೆ ಮಕ್ಕಳಿಗೆ ತಪ್ಪು ಮಾಡಿ ಎಂದು ಯಾರಾದರೂ ಹೇಳುತ್ತಾರಾ? ಯಾರೇ ತಪ್ಪು ಮಾಡಿದರೂ ತಪ್ಪೇ. ಕಾನೂನಿನ ಮುಂದೆ ಎಲ್ಲರೂ ತಲೆ ಬಾಗಲೇಬೇಕು ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಭಾನುವಾರ ಹೇಳಿದರು.

ಯುವಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಲ್ಲಿ ಸೂರಜ್ ರೇವಣ್ಣ ಬಂಧನಕ್ಕೊಳಗಾಗಿದ್ದು, ಈ ಕುರಿತು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಆರಂಭದಲ್ಲಿ ಕುಮಾರಸ್ವಾಮಿಯವರು ಸಿಡಿಮಿಡಿಕೊಂಡರು.

ಈ ಪ್ರಶ್ನೆಯನ್ನು ನಂಗ್ಯಾಕೆ ಕೇಳ್ತೀರಿ? ನಂಗೂ ಅದಕ್ಕೂ ಏನು ಸಂಬಂಧ? ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ನಂಗಿಲ್ಲ ಎಂದು ಕೆಂಡಾಮಂಡಲವಾದರು. ಬಳಿಕ ದಯವಿಟ್ಟು ಇಂತಹ ವಿಷಯಗಳನ್ನ ನನ್ನ ಹತ್ರ ಚರ್ಚೆ ಮಾಡಬಾರದು. ರಾಜ್ಯಕ್ಕೆ ಸಂಬಂಧಪಟ್ಟ ವಿಷ್ಯಗಳಿದ್ರೆ ಚರ್ಚೆ ಮಾಡಿ ಎಂದರು.

ಆ ವಿಷ್ಯಗಳನ್ನು ನನ್ನ ಹತ್ತಿರ ಯಾಕೆ ಚರ್ಚೆ ಮಾಡ್ತೀರಾ. ಅದರ ಅವಶ್ಯಕತೆ ಏನಿದೆ. ಅದಕ್ಕೆ ಕಾನೂನು ಇರುತ್ತದೆ. ಅದನ್ನು ಕಾನೂನು ನೋಡಿಕೊಳ್ಳುತ್ತದೆ. ಅದು ಯಾತಕ್ಕೆ ಬರುತ್ತದೆ ಎಂದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಆ ತರಹದ ಪ್ರಶ್ನೆಗಳನ್ನ ಕೇಳಬೇಡಿ ಎಂದು ತಿಳಿಸಿದರು.

ಕುಮಾರಸ್ವಾಮಿ
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: JDS MLC ಸೂರಜ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ

ಗೌಡರ ಕುಟುಂಬವನ್ನು ಮುಗಿಸಲು ಕೆಲವರು ಯತ್ನಿಸುತ್ತಿದ್ದು, ಈ ರೀತಿಯ ಆರೋಪಗಳು ದೇವೇಗೌಡರನ್ನು ಕಾಡುತ್ತಿವೆ. ಕುಟುಂಬದ ಯುವಕರು ತಪ್ಪು ಮಾಡಿದಾಗ ಹಿರಿಯರು ಏನು ಮಾಡಲು ಸಾಧ್ಯ, ದೇವೇಗೌಡರಿಗೆ ಯಾಕೆ ಇಂತಹ ಪ್ರಶ್ನೆಗಳನ್ನು ಕೇಳುತ್ತೀರಿ?... ಏನೇ ಆದರೂ ಅವರು ಚೈತನ್ಯ ಕಳೆದುಕೊಳ್ಳುವುದಿಲ್ಲ. ನಾವು ರಾಜಕೀಯದಿಂದ ನಿವೃತ್ತಿ ಹೊಂದುವುದಿಲ್ಲ. ನಾನು ಎರಡು ಬಾರಿ ಸಿಎಂ ಆಗಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಇದೇ ವೇಳೆ ಅಧಿಕಾರಿಗಳು ಸಿಎಂ ಮತ್ತು ಉಪಮುಖ್ಯಮಂತ್ರಿಗಳ ಗುಲಾಮರಂತೆ ವರ್ತಿಸದೆ ಕಾನೂನು ಪ್ರಕಾರ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಈ ಹಿಂದೆ ಜೆಡಿಎಸ್ ಅಂತ್ಯವಾಗಲಿದೆ ಎಂದು ಹೇಳುತ್ತಿದ್ದವರು ಈಗ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಜನರ ನಂಬಿಕೆ ಇರುವವರೆಗೂ ದೇವೇಗೌಡರ ಕುಟುಂಬವನ್ನು ನಾಶ ಮಾಡಲು ಸಾಧ್ಯವಿಲ್ಲ. ಒಬ್ಬ ನಟನನ್ನು ಬಂಧಿಸಿದರೂ ಮಾಧ್ಯಮಗಳು ನನ್ನತ್ತ ಬೊಟ್ಟು ಮಾಡುತ್ತವೆ. ಆ ಸಹೋದರರ (ಡಿಕೆ.ಶಿವಕುಮಾರ್-ಡಿಕೆ.ಸುರೇಶ್) ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡಿದ್ದರೆ, ಅವರು ಸ್ಟುಡಿಯೊಗೆ ಬೆಂಕಿ ಹಚ್ಚುತ್ತಿದ್ದರು ಎಂದು ಕಿಡಿಕಾರಿದರು.

ಯುವಕನೋರ್ವನಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಹಾಸನದ ಸೆನ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕುಮಾರಸ್ವಾಮಿ
ಸೂರಜ್ ರೇವಣ್ಣ ಪ್ರಕರಣದಲ್ಲೂ ನ್ಯಾಯಯುತ ತನಿಖೆ ಆಗಲಿ: ಆರ್ ಅಶೋಕ್

ಸಂತ್ರಸ್ತ ಯುವಕ ನೀಡಿದ ದೂರನ್ನು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಾಯ್ದೆ ಸಂಖ್ಯೆ 1860ರ ಅಡಿಯಲ್ಲಿರುವ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ) ಹಾಗೂ 506 (ಬೆದರಿಕೆ) ಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಸಂತ್ರಸ್ತ ಯುವಕ ಶುಕ್ರವಾರ ಡಿಜಿ ಕಛೇರಿಯಲ್ಲಿ ದೂರು ನೀಡಿದ್ದ. ಅಲ್ಲದೇ, ಹಾಸನ ಎಸ್ಪಿಗೂ ದೂರಿನ ಪ್ರತಿ ಇ-ಮೇಲ್ ಮೂಲಕ ಕಳಿಸಿದ್ದ. ಈ ದೂರನ್ನು ಆಧರಿಸಿ ಸಂತ್ರಸ್ತನನ್ನ ಕರೆಸಿ ಮಾಹಿತಿ ಪಡೆದಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದರು.

ನಿನ್ನೆ ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ನೀಡಿದ ದೂರು ಆಧರಿಸಿ, ಹೊಳೆನರಸೀಪುರ ನಗರ ಠಾಣೆಯಲ್ಲಿ ಸಂತ್ರಸ್ತ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com