ಬೆಂಗಳೂರು: 20 ಕೋಟಿ ರೂ. ವೆಚ್ಚದಲ್ಲಿ ಹಲಸೂರು ಕೆರೆ ಅಭಿವೃದ್ಧಿಗೆ ಸರ್ಕಾರ ಮುಂದು!
ಬೆಂಗಳೂರು: ಕೊಳಚೆ ನೀರಿನ ಒಳಹರಿವಿನಿಂದ ನಿರಂತರವಾಗಿ ಕಲುಷಿತಗೊಳ್ಳುತ್ತಿರುವ ಹಲಸೂರು ಕೆರೆಯನ್ನು 20 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.
ಹಲಸೂರು ಕೆರೆಯಲ್ಲಿ ನೂತನ ಬೇಲಿ ನಿರ್ಮಾಣಕ್ಕೆ ಸೋಮವಾರ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಶಂಕುಸ್ಥಾಪನೆ ನೆರವೇರಿಸಿದರು,
ಈ ವೇಳೆ ಮಾತನಾಡಿದ ಅವರು, 16ನೇ ಶತಮಾನದಲ್ಲಿ 2ನೇ ಕೆಂಪೇಗೌಡ ನಿರ್ಮಿಸಿದ ಈ ಜಲಮೂಲ ಬ್ರಿಟಿಷರ ಕಾಲದಲ್ಲಿ ಜೀರ್ಣೋದ್ಧಾರಗೊಂಡಿದ್ದರಿಂದ ಐತಿಹಾಸಿಕ ಮಹತ್ವ ಪಡೆದಿದೆ. ಕೆರೆ ಅಭಿವೃದ್ಧಿ ಬಗ್ಗೆ ಗಮನ ಹರಿಸಲಾಗುತ್ತಿದ್ದು, ಶೀಘ್ರದಲ್ಲೇ ಹೂಳು ತೆಗೆಸಲಾಗುವುದು. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ದೊಡ್ಡ ಜಲಮೂಲಗಳಲ್ಲಿ ಇದೂ ಒಂದಾಗಿದ್ದು, ಇದನ್ನು ಅಭಿವೃದ್ಧಿಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಕೆರೆಯಲ್ಲಿ ಈಗಾಗಲೇ ಕಲ್ಯಾಣಿ ಇದ್ದು, ಹಿಂದೂ ಸಮುದಾಯದವರಿಗೆ ತೊಂದರೆಯಾಗದಂತೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿರುವ ಕೆರೆಗಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನಿತ್ಯಾ ಜೆ ಮಾತನಾಡಿ, ಪಾಲಿಕೆ ಮತ್ತು ಕರೆ ಅಭಿವೃದ್ಧಿಯಲ್ಲಿ ತೊಡಗಿರುವ ಸಂಸ್ಥೆಗಳು ಜೌಗು ಪ್ರದೇಶವನ್ನು ನಿರ್ಮೂಲನೆ ಮಾಡಿದೆ, ಆಮ್ಲಜನಕದ ಮಟ್ಟವನ್ನು ಸುಧಾರಿಸಲು ನಾಲ್ಕು ಏರೇಟರ್‌ಗಳನ್ನು ಅಳವಡಿಸಿದೆ ಎಂದು ಮಾಹಿತಿ ನೀಡಿದರು.
ಶೇಕಡಾ 80 ರಷ್ಟು ನಿಖರತೆಯೊಂದಿಗೆ ಬ್ಯಾಟಿಮೆಟ್ರಿಕ್ ಸಮೀಕ್ಷೆಯನ್ನು ನಡೆಸಿದ್ದೇವೆ. 88 ಎಕರೆ ಪ್ರದೇಶದಲ್ಲಿ ಹೂಳು ತೆಗೆಯುವ ಮುನ್ನ ನೀರಿನ ಮಟ್ಟವನ್ನು ಸುಮಾರು 2 ಮೀಟರ್‌ಗೆ ಇಳಿಸಲಾಗುವುದು. ಅಗತ್ಯವಿರುವ ಕಡೆ ಮಾತ್ರ ಹೂಳು ತೆಗೆಯಲಾಗುವುದು. ಈ ಪ್ರಕ್ರಿಯೆಯು ಒಂದು ವರ್ಷದವರೆಗೆ ಸಮಯ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.
ಕೆರೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಬಾಕಿಯಿದ್ದು, ಏಜೆನ್ಸಿ ನಿಗದಿ ಪಡಿಸಿದರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಕೆರೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ