
ಬೆಂಗಳೂರು: ಶಕ್ತಿ ಯೋಜನೆ ಪರಿಣಾಮ ಸೂಕ್ತ ಸಮಯಕ್ಕೆ ಬಸ್ ಗಳು ಸಿಗದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಈ ಕುರಿತ ಸಮಸ್ಯೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸ್ಪಂದನೆ ನೀಡಿದ್ದು, ಪೀಕ್ ಅವರ್ ನಲ್ಲಿ ಹೆಚ್ಚುವರಿ ಬಸ್ ಗಳ ನಿಯೋಜಿಸಲು ಮುಂದಾಗಿದೆ.
ಶಾಲಾ-ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವ ಒತ್ತಡದಲ್ಲಿರುವ ಮಕ್ಕಳು ತಮ್ಮ ಪ್ರಾಣ ಪಣಕ್ಕಿಟ್ಟು ಕಿಕ್ಕಿರಿದ ಬಸ್‌ಗಳ ಹಿಂದೆ ಓಡುವ ಹಾಗೂ ಫುಟ್‌ಬೋರ್ಡಿಂಗ್ ನಲ್ಲಿ ನಿಂತು ಪ್ರಯಾಣಿಸುತ್ತಿರುವ ವೀಡಿಯೋಗಳು ವೈರಲ ಆಗಿವೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆ ಟೀಕೆಗಳಿಗೆ ಗುರಿಯಾಗುತ್ತಿದೆ.
ಇದೇ ವೇಳೆ ರಾಮನಗರ ಹಾಗೂ ಮಂಡ್ಯದಲ್ಲ ಕೆಲ ವಿದ್ಯಾರ್ಥಿಗಳು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸದ ಬೆಳವಣಿಗೆ ಕೂಡ ಕಂಡು ಬಂದಿದೆ.
ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಪ್ರತಿಕರಿಯೆ ನೀಡಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಂಸ್ಥೆ ಕ್ರಮ ಕೈಗೊಂಡಿದೆ. ಕಳೆದ ವರ್ಷ ತುಮಕೂರು, ರಾಮನಗರ ಮತ್ತು ಚಿಕ್ಕಬಳ್ಳಾಪುರದಂತಹ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಬಸ್‌ಗಳ ಸಮಸ್ಯೆ ಎದುರಿಸಿದ್ದರು. ಈ ಬಗ್ಗೆ ದೂರುಗಳು ಕೂಡ ದಾಖಲಾಗಿದ್ದು. ಈ ಸಮಸ್ಯೆಗಳನ್ನು ಒಂದೊಂದಾಗಿ ಪರಿಹರಿಸಲಾಗುತ್ತಿದೆ. ಸಮಸ್ಯೆ ಇರುವ ಕಡೆ ಬಸ್ ಸಂಖ್ಯೆ ಹೆಚ್ಚಿಸಲಾಗಿದೆ. ಪೀಕ್ ಅವರ್ ನಲ್ಲಿ ಹೆಚ್ಚುವರಿ ಬಸ್ ನಿಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದೂರು ಬಂದಾಗಲೆಲ್ಲಾ ನಾವು ಬಸ್ ಕೊರತೆ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಮುಂಬರುವ ತಿಂಗಳುಗಳಲ್ಲಿ, 500 ಕ್ಕೂ ಹೆಚ್ಚು ಬಸ್‌ಗಳ ಸೇರ್ಪಡೆಯಾಗಲಿದೆ. ಅಲ್ಲದೆ, 2,000 ಹೆಚ್ಚಿನ ಸಿಬ್ಬಂದಿ ಕೂಡ ಸೇರ್ಪಡೆಗೊಳ್ಳಲಿದ್ದಾರೆ. ಈ ವರ್ಷದಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಏಕೆಂದರೆ, ಸಂಸ್ಥೆಗೆ ಹೆಚ್ಚವರಿ ಬಸ್ ಹಾಗೂ ಸಿಬ್ಬಂದಿ ಸಿಗಲಿದ್ದಾರೆಂದು ತಿಳಿಸಿದರು.
ವಿದ್ಯಾರ್ಥಿಗಳು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಬಸ್ ನಿಗಮವು ಪರಿಹರಿಸಿದೆ ಎಂದು ನಾನು ಹೇಳುತ್ತಿಲ್ಲ. ಹೊಸ ಹೊಸ ಪ್ರದೇಶಗಳಲ್ಲಿ ಹೊಸ ಕಾಲೇಜುಗಳು, ಶಾಲೆಗಳು, ಕೋಚಿಂಗ್ ಕೇಂದ್ರ, ತರಬೇತಿ ಸಂಸ್ಥೆ, ಹಾಸ್ಟೆಲ್, ವಸತಿ ಬಡಾವಣೆ ಮತ್ತು ಇತರೆ ಮೂಲಸೌಕರ್ಯ ಸೇರ್ಪಡೆಯಾಗಾದ ಅಲ್ಲಿ ಬೇಡಿಕೆಗಳು ಶುರುವಾಗುತ್ತವೆ. ಅಂತಹ ಮಾರ್ಗಗಳಿಗೆ ಹೊಸ ಬಸ್ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಬೇಡಿಕೆ ಆಧಾರದ ಮೇಲೆ ನಾವು ಸಮಸ್ಯೆ ಪರಿಹರಿಸುತ್ತೇವೆಂದು ಹೇಳಿದರು.
Advertisement