
ಮಂಗಳೂರು: ಪ್ರಕೃತಿ ವಿಕೋಪದಿಂದ ಆಗುವ ಪ್ರಾಣಹಾನಿ ತಡೆಗಟ್ಟಲು ಜಿಲ್ಲಾಡಳಿತ ಗಮನಹರಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಉಂಟಾಗಿರುವ ಮಳೆಹಾನಿ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹ, ಹೊಳೆಗಳಲ್ಲಿ ಮುಳುಗಡೆ, ಅಪಘಾತ, ಭೂಕುಸಿತ ಮತ್ತಿತರ ಅನಾಹುತಗಳಿಂದ ಉಂಟಾಗುವ ಜೀವಹಾನಿಗಳ ಬಗ್ಗೆ ಎಚ್ಚರದಿಂದಿರಿ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ ಯಾವ ರೀತಿಯ ಪ್ರಾಕೃತಿಕ ದುರ್ಬಲತೆ ಇದೆ ಎಂಬುದನ್ನು ಪರಿಶೀಲಿಸಬೇಕು. ಎಲ್ಲ ಅಧಿಕಾರಿಗಳು ಕ್ಷೇತ್ರದಲ್ಲಿ ಇರಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆಯನ್ನು ರಚಿಸಿ. ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಿ. ಜಿಲ್ಲೆಯಲ್ಲಿ ಗುರುತಿಸಲಾಗಿರುವ ದುರ್ಬಲ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಬೇಕೆಂದು ಸೂಚನೆ ನೀಡಿದರು.
ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾಗದಂತೆ ಗಮನಹರಿಸಬೇಕು. ದುರ್ಘಟನೆ ನಡೆದ ಮೇಲೆ ಸ್ಥಳಕ್ಕೆ ಹೋಗುವುದಲ್ಲ. ದುರ್ಘಟನೆ ನಡೆಯುವ ಮೊದಲೇ ಅಂತಹ ಸ್ಥಳಗಳ ಮೇಲೆ ನಿಗಾವಹಿಸಬೇಕು. ಅಪಾಯದಲ್ಲಿರುವ ಮನೆಮಂದಿಯನ್ನು ಬಲವಂತವಾಗಿ ಆದರೂ ಸ್ಥಳಾಂತರಿಸಬೇಕು. ಯಾರಿಗೂ ಪ್ರಾಣಾಪಾಯ ಆಗಬಾರದು. ಒಂದು ವೇಳೆ ಇಂತಹ ದುರ್ಘಟನೆ ಮರುಕಳಿಸಿದರೆ ಲೋಪ ತೋರುವ ಅಧಿಕಾರಿಗಳು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಿಮಗೆ ಜೀವಹಾನಿಯನ್ನು ತಡೆಯಲು ಸಾಧ್ಯವಾಗುತ್ತಿಲ್ಲವೇಕೆ? ನಮ್ಮಲ್ಲಿ ಗ್ರಾಮ ಪಂಚಾಯಿತಿಗಳು, ಕಂದಾಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಮತ್ತು ಇತರ ಎಲ್ಲಾ ಇಲಾಖೆಗಳಿವೆ. ಆದರೂ ಪ್ರಾಣಹಾನಿಯನ್ನು ತಡೆಯುವಲ್ಲಿ ನಾವೇಕೆ ವಿಫಲರಾಗುತ್ತಿದ್ದೇವೆ? ಜನರ ಜೀವ ರಕ್ಷಣೆ ಅಧಿಕಾರಿಗಳ ಆದ್ಯ ಜವಾಬ್ದಾರಿಯಾಗಿದೆ. ಆದರೆ, ಇದರಲ್ಲಿ ವಿಫಲವಾಗುತ್ತಿರುವ ನಾವು ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿದೆ. ಎಲ್ಲಾ ಸಂಪನ್ಮೂಲಗಳು ಮತ್ತು ತಂತ್ರಜ್ಞಾನವನ್ನು ಹೊಂದಿದ್ದರೂ ಜೀವಹಾನಿ ಮುಂದುವರಿದರೆ ಸರ್ಕಾರವೇಕೆ ಸಹಿಸಿಕೊಳ್ಳಬೇಕು? ಹಾನಿತಪ್ಪಿಸಲು ಇತರೆ ಎಲ್ಲಾ ಇಲಾಖೆಗಳು ನೋಡಲ್ ಇಲಾಖೆಯಾಗಿರುವ ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಬೇಕು.
ಭೂಕುಸಿತ, ಕಡಲ ಕೊರೆತ ಉಂಟಾಗುವ ಸ್ಥಳಗಳ ಅರಿವು ಸ್ಥಳೀಯ ಅಧಿಕಾರಿಗೆ ಇದ್ದೇ ಇರುತ್ತದೆ. ಜೋರು ಮಳೆ ಬಂದಾಗ ಅಂತಹ ಸ್ಥಳಗಳಿಗೆ ತೆರಳಿ ಅಲ್ಲಿಯ ಜನರನ್ನು ಎಚ್ಚರಿಸಿ. ಮನೆಗಳು ಅಪಾಯದಲ್ಲಿ ಇರುವುದು ಕಂಡು ಬಂದರೆ ಪೊಲೀಸ್ ಬಲ ಪ್ರಯೋಗಿಸಿಯಾದರೂ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಇನ್ನು ಮುಂದೆ ಸಾವುನೋವು ಸಂಭವಿಸಿದರೆ ಅದನ್ನು ಸಹಿಸಲಾಗದು. ಮಳೆಗಾಲ ಆರಂಭದಲ್ಲೇ ಇಂತಹ ಅನಾಹುತ ಸಂಭವಿಸಿದರೆ ಇನ್ನು ಮಳೆಗಾಲದುದ್ದಕ್ಕೂ ಪರಿಸ್ಥಿತಿ ಹೇಗಿರಬೇಡ? ಅಧಿಕಾರಿಗಳು ಒಳ್ಳೆ ಮಾತಿಗೆ ಕೇಳಲ್ಲ ಅಂತಾದರೆ ಅದಕ್ಕೆ ತಕ್ಕ ಬೆಲೆಯನ್ನು ತೆರುತ್ತೀರಿ. ಇಂಥದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಮನೆಗಳನ್ನು ಕಟ್ಟುವಾಗಿ ಕನಿಷ್ಠ ಸೇಫ್ಟಿ ಕ್ರಮಗಳನ್ನು ಅನುಸರಿಸಬೇಕು. ನದಿ ನೀರಿನ ಅಪಾಯದ ಮಟ್ಟಕ್ಕಿಂತ ಕೆಳಭಾಗದಲ್ಲಿ ಮನೆಕಟ್ಟಬಾರದು ಎಂಬಿತ್ಯಾದಿ ನಿಯಮಗಳನ್ನು ಕಡ್ಡಾಯಗೊಳಿಸಿ ಜಾರಿಗೊಳಿಸಿ ಎಂದು ಡಿಸಿಗ ಸೂಚನೆ ನೀಡಿದರು.
Advertisement