
ಬೆಂಗಳೂರು: ಪಾನಿಪುರಿ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು, ಪಾನಿಪುರಿ ಸೇವನೆ ಮಾಡುವುದು ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತಿದೆ ಎಂದು ರಾಜ್ಯ ಆಹಾರ ಇಲಾಖೆ ಕಂಡುಹಿಡಿದಿದೆ.
ಹೌದು.. ಈ ಹಿಂದೆ ಕಾಟನ್ ಕ್ಯಾಂಡಿ, ಮಂಚೂರಿಯನ್ ಮತ್ತು ಇತ್ತೀಚೆಗೆ ಕಬಾಬ್‌ಗಳಲ್ಲಿ ಬಳಸಲಾಗುತ್ತಿದ್ದ ಕೃತಕ ಬಣ್ಣಗಳ ನಿಷೇಧದ ಬಳಿಕ ಇದೀಗ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳ ಕಣ್ಣು ಪಾನಿಪುರಿ ಮೇಲೆ ಬಿದ್ದಿದ್ದು, ಪಾನಿಪುರಿ ತಯಾರಿಕೆಯಲ್ಲಿ ಬಳಸುವ ನೀರಿನಲ್ಲಿ ಕ್ಯಾನ್ಸರ್ ಕಾರಕ ಬಣ್ಣಗಳನ್ನು ಬೆರೆಸಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಇದೇ ಕಾರಣಕ್ಕೆ ರಾಜ್ಯ ಆರೋಗ್ಯ ಇಲಾಖೆ ಪಾನಿಪುರಿ ಮಾರಾಟದ ಮೇಲೆ ನಿಯಂತ್ರಣ ಹೇರಲು ಮುಂದಾಗಿದೆ.
ಪಾನಿಪುರಿ ದೇಹಕ್ಕೆ ಎಷ್ಟು ಸುರಕ್ಷಿತ ಎಂದು ಕಂಡುಹಿಡಿಯಲು ಆಹಾರ ಇಲಾಖೆ ಅದರ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸಿದ್ದು, ಈ ಪರೀಕ್ಷೆಯಲ್ಲಿ ಪಾನಿಪುರಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ವರದಿಗಳು ಬಹಿರಂಗಪಡಿಸಿವೆ.
ಮೂಲಗಳ ಪ್ರಕಾರ ಬೆಂಗಳೂರಿನ ನಾನಾ ಭಾಗಗಳಲ್ಲಿ ಮಾರಾಟವಾಗುವ ಸುಮಾರು 243 ಪಾನಿಪುರಿ ಸ್ಯಾಂಪಲ್ಸ್ ತೆಗೆದುಕೊಂಡು ಅಧಿಕಾರಿಗಳು ಪರೀಕ್ಷೆಗೊಳಪಡಿಸಿದ್ದು, ಈ ಪರೀಕ್ಷೆಯಲ್ಲಿ ಪಾನಿಪುರಿಯಲ್ಲಿ ಅಪಾಯಕಾರಿ ಕೆಮಿಕಲ್ಸ್ ಬಳಕೆ ಮಾಡುತ್ತಿರುವುದು ಬಹಿರಂಗವಾಗಿದೆ.
ಪರೀಕ್ಷೆಗೆ ಒಳಪಡಿಸಿದ 243 ಸ್ಯಾಂಪಲ್ಸ್‌ಗಳ ಪೈಕಿ 43 ಬಳಕೆಗೆ ಅಂದರೆ ತಿನ್ನಲು ಅಸುರಕ್ಷಿತ ಎಂದು ತಿಳಿದು ಬಂದಿದೆ. ಈ ಬಗ್ಗೆ ಅಧಿಕಾರಿಗಳು ಇನ್ನಷ್ಟು ಪರೀಕ್ಷೆಗಳನ್ನು ನಡೆಸಿದ್ದು ಇದರ ವರದಿಗಳು ಇನ್ನಷ್ಟೇ ಬರಬೇಕಿದೆ.
ಈ ಕುರಿತು TNIE ಯೊಂದಿಗೆ ಮಾತನಾಡಿದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ''ರಾಜ್ಯಾದ್ಯಂತ ಪಾನಿ ಪುರಿಯ 200ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ ಮಾದರಿ ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು.
ಮಾಲ್‌ಗಳು, ಉದ್ಯಾನವನಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳ ಹೊರಗೆ ಬೀದಿ ವ್ಯಾಪಾರಿಗಳು ಮಾರಾಟ ಮಾಡುವ ಮಾದರಿಗಳನ್ನು ಹೊರತುಪಡಿಸಿ, ಮದುವೆಗಳು, ಶಾಪಿಂಗ್ ಮಾಲ್‌ಗಳಂತಹ ವಿವಿಧ ಸ್ಥಳಗಳಿಂದ ಇಲಾಖೆಯು ಮಾದರಿಗಳನ್ನು ಸಂಗ್ರಹಿಸಿದೆ ಎಂದು ಹಿರಿಯ ಎಫ್‌ಎಸ್‌ಎಸ್‌ಎಐ ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.
ನಿರಂತರ ಪರೀಕ್ಷಾ ಉಪಕ್ರಮವು ಬೀದಿ ಆಹಾರಕ್ಕೆ ಸಂಬಂಧಿಸಿದ ಅಪಾಯಗಳು ಮತ್ತು ಹಾನಿಕಾರಕ ರಾಸಾಯನಿಕಗಳ ಸಂಭಾವ್ಯ ಉಪಸ್ಥಿತಿಯ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡುವುದು ಮಾತ್ರವಲ್ಲದೆ ಆಹಾರ ಸುರಕ್ಷತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮಾರಾಟಗಾರರಿಗೆ ಎಚ್ಚರಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ತಯಾರಕರು ಮತ್ತು ಮಾರಾಟಗಾರರು ಆಹಾರ ಉತ್ಪನ್ನಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡರೆ, ಅವರಿಗೆ ದಂಡ ವಿಧಿಸಲಾಗುತ್ತದೆ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಪ್ರಕಾರ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Advertisement