ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ನಾಲ್ವರು ವಶಕ್ಕೆ. ಮಂಗಳೂರಿನಲ್ಲಿ ವೃದ್ಧ ದಂಪತಿ ಮೇಲೆ ಹಲ್ಲೆ; ಪಾದ್ರಿ ವಜಾ! -ಈ ದಿನದ ಸುದ್ದಿ ಮುಖ್ಯಾಂಶಗಳು: 02-03-24

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ನಾಲ್ವರು ವಶಕ್ಕೆ

ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನಾಲ್ವರನ್ನು ಧಾರವಾಡ, ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಪೊಲೀಸರು ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ IED ಸ್ಫೋಟದಲ್ಲಿ ಹತ್ತು ಮಂದಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣದ ತನಿಖೆಗೆ ಸಿಸಿಬಿಗೆ ವರ್ಗ

ಈಮಧ್ಯೆ, ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಆದೇಶ ಹೊರಡಿಸಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಬಾಂಬ್ ಸ್ಫೋಟದ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದರ ತನಿಖೆಯನ್ನು ರಾಜ್ಯ ಸರ್ಕಾರವು ಸಿಸಿಬಿ ಹೆಗಲಿಗೆ ಒಪ್ಪಿಸಿದ್ದು, ತನಿಖಾಧಿಕಾರಿಯಾಗಿ ಎಸಿಪಿ ನವೀನ್ ಕುಲಕರ್ಣಿ ಅವರನ್ನು ನೇಮಿಸಲಾಗಿದೆ. ಘಟನಾ ಸ್ಥಳದಲ್ಲಿ ದೊರೆತ ಕುರುಹುಗಳ ಆಧಾರದ ಮೇಲೆ ಅನೇಕ ಪೊಲೀಸ್ ತಂಡಗಳು ಬೇರೆ ಬೇರೆ ಆಯಾಮಗಳಿಂದ ತನಿಖೆ ಕೈಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.

ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟದಲ್ಲಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ, ಸ್ವರ್ಣಾಂಬ ಎಂಬುವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು. ಸ್ಫೋಟದ ಕುರಿತಂತೆ ಪ್ರತಿಕ್ರಿಯಿಸಿರುವ ಸಿಎಂ, ವ್ಯಕ್ತಿಯೋರ್ವನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುತ್ತೇವೆ. ಆರೋಪಿ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ. ಮಂಗಳೂರಿನ ಕುಕ್ಕರ್ ಸ್ಫೋಟ ಪ್ರಕರಣ, ಹಾಗೂ ಈ ಸ್ಫೋಟಕ್ಕೂ ಸಾಮ್ಯತೆ ಇದೆಯಾ ಎಂದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಖಾಸಗಿ ನೀರಿನ ಟ್ಯಾಂಕರ್ ವಶಕ್ಕೆ ಸರ್ಕಾರ ಚಿಂತನೆ

ತೀವ್ರ ನೀರಿನ ಕೊರತೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶನಿವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನೀರಿನ ಕೊರತೆ ಉಂಟಾಗಿದೆ. ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಬಿಬಿಎಂಪಿ ಅಧಿಕಾರಿಗಳು ಈ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಸಭೆಗಳನ್ನು ನಡೆಸುತ್ತಿದ್ದಾರೆ. ನೀರು ಪೂರೈಕೆದಾರರು ಗ್ರಾಹಕರ ಸುಲಿಗೆ ಮಾಡುತ್ತಿರುವುದರಿಂದ, ಇದನ್ನು ತಡೆಯಲು ಮಾರ್ಚ್ 7 ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಬೆಂಗಳೂರಿನ ಎಲ್ಲಾ ನೀರಿನ ಟ್ಯಾಂಕರ್‌ಗಳಿಗೆ ಸೂಚನೆ ನೀಡಿದ್ದೇವೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಚರ್ಚಿಸಲು ನಾವು ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಭೆ ಕರೆದಿದ್ದೇವೆ ಎಂದರು.

ವೃದ್ದ ದಂಪತಿ ಮೇಲೆ ಹಲ್ಲೆ: ಪಾದ್ರಿ ವಜಾ

ದಕ್ಷಿಣ ಕನ್ನಡದ ಪರಿಯಲ್ತಡ್ಕ ಗ್ರಾಮದಲ್ಲಿ ಚರ್ಚ್ ಪಾದ್ರಿಯೊಬ್ಬರು ವೃದ್ಧ ದಂಪತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪರಿಯಲ್ತಡ್ಕದ ಮಣೆಲದಲ್ಲಿರುವ ಕ್ರೈಸ್ಟ್ ದಿ ಕಿಂಗ್ ಪ್ಯಾರಿಷ್‌ನ ಪಾದ್ರಿ ಫಾದರ್ ನೆಲ್ಸನ್ ಒಲಿವೆರಾ ಫೆಬ್ರವರಿ 29ರಂದು ಆಶೀರ್ವಾದಕ್ಕಾಗಿ ವೃದ್ಧ ದಂಪತಿ ತಮ್ಮ ಮನೆಗೆ ಬಂದಾಗ ಹಲ್ಲೆ ನಡೆಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಂಪತಿ ಗ್ರೆಗೊರಿ ಮತ್ತು ಫಿಲೋಮಿನಾ ಮತ್ತು ಪಾದ್ರಿಯ ನಡುವೆ ಭಿನ್ನಾಭಿಪ್ರಾಯಗಳಿತ್ತು. ಭೇಟಿ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪಾದ್ರಿ ದಂಪತಿಗಳ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವರದಿಯಾಗಿದೆ.

ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಗೆ ನೋಟೀಸ್

ಕರ್ನಾಟಕ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಯಶವಂತಪುರದ ಶಾಸಕ ಎಸ್.ಟಿ. ಸೋಮಶೇಖರ್ ಹಾಗೂ ಮತದಾನದಿಂದ ದೂರ ಉಳಿದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ಮುಖ್ಯ ಸಚೇತಕ ಶೋಕಾಸ್ ನೋಟಿಸ್ ನೀಡಿದ್ದಾರೆ. ಫೆಬ್ರವರಿ 27ರಂದು ನಡೆದ ಚುನಾವಣೆಯಲ್ಲಿ ಎಸ್ ಟಿ ಸೋಮಶೇಖರ್ ಬಿಜೆಪಿ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ಮಾಕೇನ್ ಗೆ ಅಡ್ಡ ಮತದಾನ ಮಾಡಿದ್ದರು. ಇದು ಕೇಸರಿ ಪಕ್ಷಕ್ಕೆ ದೊಡ್ಡ ಹಿನ್ನೆಡೆಯುಂಟು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com