ನಮ್ಮ ಮನೆಯ ಬೋರ್ ಸೇರಿದಂತೆ ಬೆಂಗಳೂರಿನಲ್ಲಿ 3000ಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬತ್ತಿ ಹೋಗಿವೆ: ಡಿಕೆಶಿ

ಬೆಂಗಳೂರಿನಲ್ಲಿ 3000ಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬತ್ತಿ ಹೋಗಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
 ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಬೇಸಿಗೆ ಆರಂಭದಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಂಪುಟ ಸಚಿವರು, ಅಧಿಕಾರಿಗಳು ಹಾಗೂ ಆಯಾ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಮಂಗಳವಾರ ಮಹತ್ವದ ಸಭೆ ನಡೆಸಿದರು.

ರಾಜ್ಯದ ಹಲವು ಗ್ರಾಮಗಳಲ್ಲಿ ನೀರಿನ ಮೂಲಗಳು ಬರಿದಾಗಿವೆ ಎಂದು ವರದಿಯಾಗಿದೆ. ಅಂತರ್ಜಲ ಕುಸಿತದಿಂದಾಗಿ ಹಲವು ಬೋರ್‌ವೆಲ್‌ಗಳು ನಿಧಾನವಾಗಿ ಬತ್ತಿ ಹೋಗುತ್ತಿದ್ದು, ಬೆಂಗಳೂರಿನಲ್ಲಿ 3000ಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬತ್ತಿ ಹೋಗಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಸಭೆ ಬಳಿಕ ಎಎನ್‌ಐ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಕುಡಿಯುವ ನೀರಿನ ಸಮಸ್ಯೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನಾನು ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ನಾವು ನೀರು ಲಭ್ಯವಿರುವ ಪಾಯಿಂಟ್ ಗಳನ್ನು ಗುರುತಿಸುತ್ತಿದ್ದೇವೆ... ಬೆಂಗಳೂರಿನಲ್ಲಿ 3000 ಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬತ್ತಿಹೋಗಿವೆ" ಎಂದು ತಿಳಿಸಿದರು.

 ಡಿಕೆ ಶಿವಕುಮಾರ್
ಖಾಸಗಿ ನೀರಿನ ಟ್ಯಾಂಕರ್‌ಗಳಿಗೆ ಸರ್ಕಾರದಿಂದ ದರ ನಿಗದಿ: ಡಿಸಿಎಂ ಡಿಕೆ. ಶಿವಕುಮಾರ್

ತಮ್ಮ ಮನೆಯಲ್ಲಿದ್ದ ಬೋರ್‌ವೆಲ್‌ ಸಹ ಬತ್ತಿ ಹೋಗಿದೆ ಎಂದ ಡಿಸಿಎಂ, ನಾವು ಎಲ್ಲರಿಗೆ ಅತ್ಯಂತ ಸಮಂಜಸವಾದ ದರದಲ್ಲಿ ನೀರು ಕೊಡುತ್ತೇವೆ. ಎಲ್ಲಾ ಬೋರ್‌ವೆಲ್‌ಗಳು ಬತ್ತಿರುವುದರಿಂದ ನಾವು ಅದರ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಿದ್ದೇವೆ" ಎಂದರು.

ಬೆಂಗಳೂರು ನಗರದ ಎಲ್ಲಾ ನೀರಿನ ಟ್ಯಾಂಕರ್ ಮಾಲೀಕರು ಮಾರ್ಚ್ 7ರ ವೇಳೆಗೆ ನೋಂದಣಿ ಮಾಡಿಸದಿದ್ದರೆ ವಶಕ್ಕೆ ಪಡೆಯಲಾಗುವುದು ಎಂದು ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ 3,500 ಟ್ಯಾಂಕರ್‌ಗಳು ಇವೆ. ಈ ಪೈಕಿ ಕೇವಲ 219 ಟ್ಯಾಂಕರ್‌ಗಳು, ಅಂದರೆ ಶೇ 10ರಷ್ಟು ಮಾತ್ರ ನೋಂದಣಿ ಮಾಡಿಸಿಕೊಂಡಿವೆ. ಚಿಕ್ಕ, ದೊಡ್ಡ, ಹಾಲಿನ ಟ್ಯಾಂಕರ್‌ಗಳನ್ನು ಶೀಘ್ರ ಸರ್ಕಾರದ ವಶಕ್ಕೆ ಪಡೆಯಲಾಗುವುದು. ಬಿಡಬ್ಲ್ಯೂಎಸ್‌ಎಸ್‌ಬಿಯವರು 210 ಟ್ಯಾಂಕರ್‌ಗಳನ್ನು ಈಗಾಗಲೇ ನೀರಿನ ಪೂರೈಕೆಗೆ ಬಳಸುತ್ತಿದ್ದಾರೆ ಎಂದು ತಿಳಿಸಿದರು.

ಈ ವರ್ಷ ಬೇಸಿಗೆ ಹೆಚ್ಚು ತೀವ್ರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಮುಂಬರುವ ತಿಂಗಳುಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಕರ್ನಾಟಕದಾದ್ಯಂತ ಸುಮಾರು 7,082 ಗ್ರಾಮಗಳು ಮತ್ತು 1,193 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com