ಬೋರ್ಡ್ ಪರೀಕ್ಷೆ ಗೊಂದಲ; ಶಿಕ್ಷಣ ತಜ್ಞರ ಸಭೆ ಕರೆಯುವಂತೆ ಬಿಜೆಪಿ ಆಗ್ರಹ
ಬೆಂಗಳೂರು: ಗರಿಷ್ಠ ಸಂಖ್ಯೆಯ ಪರೀಕ್ಷೆಗಳು, ಸ್ಪಷ್ಟ ನೀತಿ ಇಲ್ಲದೆ ಇರುವುದನ್ನು ಚರ್ಚೆ ಮಾಡಲು ಶಿಕ್ಷಣ ತಜ್ಞರ ಸಭೆ ಕರೆಯಬೇಕೆಂದು ಬಿಜೆಪಿ ಆಗ್ರಹಿಸಿದೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು, ಪರೀಕ್ಷೆಗೆ ಉತ್ತರಪತ್ರಿಕೆ ಕೊಡಲಾಗದಷ್ಟು ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗಿದೆಯೇ ಎಂದು ರಾಜ್ಯ ಶಿಕ್ಷಣ ಸಚಿವರಿಗೆ ಪ್ರಶ್ನಿಸಿದರು.
8ರಿಂದ 8.5 ಲಕ್ಷ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ನೀವು ಪ್ರಿಪರೇಟರಿ ಪರೀಕ್ಷೆ ನಡೆಸಲು 50 ರೂ. ಸಂಗ್ರಹಿಸಿ ಪ್ರಶ್ನೆಪತ್ರಿಕೆ ನೀಡುವುದಾದರೆ, ಉತ್ತರ ಪತ್ರಿಕೆ ನೀವೇ ತರಬೇಕು ಎನ್ನುವುದಾದರೆ ಸರ್ಕಾರ ಯಾವ ಅಧೋಗತಿಗೆ ತಲುಪಿದೆ? ಇದು ಬಹಳ ನೋವಿನ ವಿಚಾರ. ಶಿಕ್ಷಣದ ಕುರಿತ ಕಳಕಳಿಯಿಂದ ಇದನ್ನು ಬಿಜೆಪಿ ಪ್ರಶ್ನಿಸುತ್ತಿದೆ ಎಂದು ಹೇಳಿದರು.
11 ಮತ್ತು 12ನೇ ತರಗತಿಗೆ ಎರಡೆರಡು ಸಪ್ಲಿಮೆಂಟರಿ ಪರೀಕ್ಷೆ ನಡೆಸಲು ಸರ್ಕಾರ ಅಸ್ತು ಎಂದಿದೆ. ಎಸ್‍ಎಸ್‍ಎಲ್‍ಸಿ ಪ್ರಿಪರೇಟರಿ ಪರೀಕ್ಷೆ ನಡೆಸಲು ಸರ್ಕಾರ ಹಣ ಕೊಡುತ್ತಿಲ್ಲ. ವಿದ್ಯಾರ್ಥಿಗಳ ಬಳಿ ಹಣ ಸಂಗ್ರಹಿಸಿ, ಕೇವಲ ಪ್ರಶ್ನೆಪತ್ರಿಕೆ ಕೊಡುವುದಾಗಿ ಹೇಳುತ್ತಾರೆ. ಉತ್ತರ ಪತ್ರಿಕೆ ನೀಡುವುದಿಲ್ಲ ಎಂದಿದ್ದಾರೆ.
ಹಳ್ಳಿಯಿಂದ ಸಣ್ಣಪುಟ್ಟ ಪಟ್ಟಣಕ್ಕೆ ಬರಲು ಶೇ.90 ಶಿಕ್ಷಕವರ್ಗ ಬಸ್ಸನ್ನೇ ಆಶ್ರಯಿಸಿದೆ. ಉಚಿತ ಬಸ್‍ಗಳಿಂದಾಗಿ ಬಸ್‍ಗಳು ಲಭ್ಯವಿಲ್ಲ. ಬಸ್ಸುಗಳು ಕಡಿಮೆಯಾಗಿವೆ. ಇದರಿಂದ ಶಿಕ್ಷಕರು, ವಿದ್ಯಾರ್ಥಿಗಳೂ ತಡವಾಗಿ ಬರುವಂತಾಗಿದೆ. ಉಚಿತ ಪ್ರಯಾಣದ ನಂತರ ಅರ್ಧಕ್ಕರ್ಧ ಬಸ್ ಕಡಿಮೆಯಾಗಿದೆ. ಬೆಳಿಗ್ಗೆ 10ಕ್ಕೆ ಶಾಲೆ ತೆರೆದರೆ 11, 12 ಗಂಟೆಗೆ ವಿದ್ಯಾರ್ಥಿಗಳು ಬರುವಂತಾಗಿದೆ. ಶಿಕ್ಷಕರೂ ಶಾಲೆಗೆ ಸಕಾಲದಲ್ಲಿ ಬರಲಾಗುತ್ತಿಲ್ಲ ಎಂದು ತಿಳಿಸಿದರು.
ಶಾಲೆಗಳಲ್ಲಿ ಮೂಲಸೌಕರ್ಯವಿಲ್ಲ, ಕುಡಿಯುವ ನೀರಿನ ಸೌಲಭ್ಯ ಇಲ್ಲ. ಶೌಚಾಲಯ ಸೌಕರ್ಯ ಇಲ್ಲ. ಬಿಜೆಪಿ ಸರ್ಕಾರ ಇದ್ದಾಗ ಮಂಜೂರಾದ ವಿವೇಕ ಕೊಠಡಿಗಳನ್ನು ರದ್ದು ಮಾಡಿದ್ದಾರೆ. 13- 14 ಸಾವಿರ ಕೊಠಡಿ ನಿರ್ಮಾಣಕ್ಕೆ ಬೊಮ್ಮಾಯಿಯವರ ಕಾಲದಲ್ಲಿ ಬಿಜೆಪಿ ಸರ್ಕಾರ ನಿರ್ಣಯಿಸಿತ್ತು. ಅದನ್ನು ರದ್ದು ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜಕಾರಣದ ಕಾಳಜಿ ವಹಿಸುವ ಮಧು ಬಂಗಾರಪ್ಪ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣದ ಬಗ್ಗೆ ಕಾಳಜಿ ವಹಿಸದೆ ರಾಜಕಾರಣದಲ್ಲಿ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಆದ್ದರಿಂದ ಶಿಕ್ಷಣ ಸಚಿವರು, ಬೋರ್ಡ್ ಪರೀಕ್ಷೆ, ಗರಿಷ್ಠ ಸಂಖ್ಯೆ ಪರೀಕ್ಷೆ ಬೇಡವೆನ್ನುವ ಸರಕಾರವೇ ಅತಿ ಹೆಚ್ಚು ಪರೀಕ್ಷೆ ನಡೆಸುತ್ತಿರುವುದು, ರಾಜ್ಯ ಪಠ್ಯಕ್ರಮ, ಕೇಂದ್ರೀಯ ಪಠ್ಯಕ್ರಮದ ಸಂಬಂಧ ಅನೇಕ ಶಿಕ್ಷಣ ಸಂಸ್ಥೆಗಳಿಂದ ಗೊಂದಲಮಯ ನಿರ್ಧಾರ ಕುರಿತಂತೆ ಪೋಷಕರು, ಶಿಕ್ಷಣ ತಜ್ಞರ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು. ಸಂಘಟನೆಗಳು, ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ಶಾಸಕರನ್ನೂ ಈ ಸಭೆಗೆ ಆಹ್ವಾನಿಸಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ 5ನೇ ತರಗತಿಯಿಂದ 11ನೇ ತರಗತಿ ವರೆಗೆ ನಡೆಯುತ್ತಿರುವ ಪರೀಕ್ಷೆ ವಿಚಾರದಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದೆ. ಈ ಗೊಂದಲಕ್ಕೆ ಹೈಕೋರ್ಟ್ ತೆರೆ ಎಳೆದಿದೆ. ಏಕಸದಸ್ಯ ಪೀಠವು ಬೋರ್ಡ್ ಪರೀಕ್ಷೆ ಬೇಡ ಎಂದಿದ್ದರೆ, ದ್ವಿಸದಸ್ಯ ಪೀಠವು ಬೋರ್ಡ್ ಪರೀಕ್ಷೆ ನಡೆಸಿ ಎಂದು ತೀರ್ಪು ನೀಡಿದೆ ಎಂದು ವಿವರಿಸಿದರು.
ಇಂಥ ಸಂದರ್ಭದಲ್ಲಿ ಪೋಷಕರು, ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ರಾಜ್ಯ ಸರಕಾರ ನಡೆಸುವ ಬೋರ್ಡ್ ಪರೀಕ್ಷೆ ಕಾರಣಕ್ಕೆ ವಿದ್ಯಾರ್ಥಿಗಳಲ್ಲಿ ಫೇಲ್ ಆಗುವ ಭಯ ಇದೆ. ಈ ಗೊಂದಲ, ಭಯ ನಿವಾರಿಸುವ ದೃಷ್ಟಿಯಿಂದ ರಾಜ್ಯದ ಶಿಕ್ಷಣ ತಜ್ಞರ ಸಭೆಯನ್ನು ಕೂಡಲೇ ಕರೆಯಬೇಕೆಂದು ಅವರು ಬಿಜೆಪಿ ಪರವಾಗಿ ಆಗ್ರಹಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ