ಬೆಂಗಳೂರು: ಬೆಳ್ಳಂದೂರು ಶಾಲೆ ಆವರಣದಲ್ಲಿ ಸ್ಫೋಟಕ ಪತ್ತೆ, ಹೆಚ್ಚಿದ ಆತಂಕ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಘಟನೆ ಮರೆಯುವ ಮುನ್ನವೇ ಬೆಂಗಳೂರಿನ ಶಾಲೆಯೊಂದರ ಮುಂಭಾಗದಲ್ಲಿ ಸ್ಫೋಟಕ ಪತ್ತೆಯಾಗಿದ್ದು, ಇದು ಆತಂಕ ಹೆಚ್ಚಾಗುವಂತೆ ಮಾಡಿದೆ.
ಬೆಂಗಳೂರು ಪೊಲೀಸ್ (ಸಂಗ್ರಹ ಚಿತ್ರ)
ಬೆಂಗಳೂರು ಪೊಲೀಸ್ (ಸಂಗ್ರಹ ಚಿತ್ರ)

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಘಟನೆ ಮರೆಯುವ ಮುನ್ನವೇ ಬೆಂಗಳೂರಿನ ಶಾಲೆಯೊಂದರ ಮುಂಭಾಗದಲ್ಲಿ ಸ್ಫೋಟಕ ಪತ್ತೆಯಾಗಿದ್ದು, ಇದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಬೆಳ್ಳಂದೂರಿನ ಪ್ರಕ್ರಿಯಾ ಶಾಲೆ ಮುಂಭಾಗದ ಖಾಲಿ ಜಮೀನಿನಲ್ಲಿ ಬಾಂಬ್‌ ತಯಾರಿಸಲು ಬಳಸುವ ಜಿಲೆಟಿನ್ ಕಡ್ಡಿ, ಡಿಟೋನೇಟರ್​​ ಹಾಗೂ ಇತರ ಕೆಲವು ವಸ್ತುಗಳು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಸೋಮವಾರ ರಾತ್ರಿ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿಯಲ್ಲಿ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಟ್ರ್ಯಾಕ್ಟರ್'ನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಟ್ರ್ಯಾಕ್ಟರ್ ನಲ್ಲಿ ಸ್ಫೋಟಕ ಇರುವುದು ಪತ್ತೆಯಾಗಿದೆ. ಈ ಸಂಬಂಧ ಸ್ಥಳೀಯ ಕಾರ್ಮಿಕರ ಬಳಿಕ ಮಾಹಿತಿ ಕೇಳಿದ್ದು, ಅವರಿಂದ ಸಮಾಧಾನಕರ ಉತ್ತರ ಸಿಕ್ಕಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೇಲ್ನೋಟಕ್ಕೆ ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ಬಂಡೆಗಳ ಸ್ಫೋಟಿಸಲು ಸ್ಫೋಟಕಗಳನ್ನು ತಂದಿರುವ ಸಾಧ್ಯತೆ ಇದೆ ಎನ್ನಲಾಗಿದ್ದರೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಹಲವು ಶಾಲೆಗಳಿಗೆ ಕೆಲದಿನಗಳ ಹಿಂದೆ ಬಾಂಬ್ ದಾಳಿ ಬೆದರಿಕೆ ಸಂದೇಶ ಬಂದಿತ್ತು. ನಂತರ ಅದು ನಕಲಿ ಬೆದರಿಕೆ ಎಂಬುದು ತಿಳಿದು ಬಂದಿದ್ದರೂ, ಬೆದರಿಕೆ ಸಂದೇಶದ ಹಿಂದೆ ವಿದೇಶಿ ಉಗ್ರ ಸಂಘಟನೆಗಳ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು.

ಅದಾದ ನಂತರ ಕೆಲವು ದಿನಗಳಲ್ಲಿ ತಮಿಳುನಾಡು ಮತ್ತು ಇತರ ಕೆಲವು ರಾಜ್ಯಗಳ ಶಾಲೆಗಳಿಗೂ ಬೆದರಿಕೆ ಸಂದೇಶ ಬಂದಿತ್ತು. ಇದರ ನಡುವಲ್ಲೇ ಬೆಂಗಳೂರಿನ ಶಾಲೆಯ ಆವರಣದಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾಗಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ.

ಬೆಂಗಳೂರು ಪೊಲೀಸ್ (ಸಂಗ್ರಹ ಚಿತ್ರ)
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಎನ್ಐಎಗೆ ಮಹತ್ವದ ಸುಳಿವು, ಶಂಕಿತ ಬಳಸಿದ್ದ ದೂರವಾಣಿ ಕರೆ ಜಾಡು ಹಿಡಿದ ತನಿಖಾ ತಂಡ

ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಘಟನೆ ಬಗ್ಗೆ ಸಿಸಿಬಿ ಪೊಲೀಸರು ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸುತ್ತಿವೆ.

ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ, ಕೆಫೆಯಲ್ಲಿ ಬಾಂಬ್ ಇಟ್ಟು ಹೋಗಿದ್ದ ಉಗ್ರನನ್ನು ಬಂಧಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಫೋಟಕ ಪತ್ತೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸ್ಫೋಟಕ ವಸ್ತುಗಳ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com