
ಬೆಂಗಳೂರು: ವಸಂತಕಾಲದ ಆಗಮನದೊಂದಿಗೆ ಪ್ರೀತಿ ಮತ್ತು ಕೆಟ್ಟದ್ದರ ವಿರುದ್ಧ ಒಳ್ಳೆಯದ್ದಕ್ಕೆ ಗೆಲುವಿನ ಸಂಕೇತವಾಗಿ ಆಚರಿಸುವ ರಂಗಿನ ಹಬ್ಬ ಹೋಳಿ ಈ ಬಾರಿ ನಗರದಲ್ಲಿ ನೀರಿನ ಸಮಸ್ಯೆಯಿಂದಾಗಿ ಕಳೆಗುಂದಿದೆ.
ಪ್ರತಿ ವರ್ಷ ಹೋಳಿ ಬಂತೆಂದರೆ ಸಾಕು, ಗುಲಾಲ್, ನೀರು ತುಂಬಿದ ಬಲೂನ್, ಬಿಂದಿಗೆ ಹಿಡಿದು ಬೀದಿಗಿಳಿಯುತ್ತಿದ್ದ ಸ್ನೇಹಿತರು, ಕುಟುಂಬಗಳು ಮತ್ತು ಅಪರಿಚಿತರು ಪರಸ್ಪರ ಬಣ್ಣ ಎರಚಿ ಶುಭಾಶಯ ಕೋರುತ್ತಿದ್ದರು. ಆದರೆ, ಈ ವರ್ಷ, ಬೆಂಗಳೂರಿನ ಕೆಲವು ಭಾಗಗಳು ಎದುರಿಸುತ್ತಿರುವ ತೀವ್ರ ನೀರಿನ ಸಮಸ್ಯೆಯಿಂದಾಗಿ ಹಬ್ಬದ ಉತ್ಸಾಹ ಕಡಿಮೆಯಾಗಿದೆ.
“ಹಿಂದಿನ ವರ್ಷಗಳಲ್ಲಿ, ದಿನವಿಡೀ ಆಚರಣೆ ಮಾಡ್ತಿದ್ದೀವಿ. ಬೆಳಿಗ್ಗೆ ಮತ್ತು ಸಂಜೆಯವರೆಗೆ ಜನರು ಹೋಳಿ ಆಡುತ್ತಿದ್ದರು. ಈ ವರ್ಷ, ಆಚರಣೆಯನ್ನು ಸಂಜೆ ಎರಡು ಗಂಟೆಗೆ ಸೀಮಿತಗೊಳಿಸಲು ನಿರ್ಧರಿಸಿದ್ದೇವೆ ಎಂದು ಹೆಚ್ಎಸ್ಆರ್ ಲೇಔಟ್ ನಲ್ಲಿ ಹೋಳಿ ಆಚರಣೆ ಆಯೋಜಿಸುತ್ತಿರುವ ಪ್ರಿಯಾಂಕಾ ರಾಯ್-ಸಿನ್ಹಾ ಹೇಳಿದರು. ಹೋಳಿಯು ಸಾಮೂದಾಯಿಕ ಹಬ್ಬವಾಗಿದೆ ಮತ್ತು ಆ ಮನೋಭಾವಕ್ಕೆ ಅನುಗುಣವಾಗಿ, ನಾವು ಇತರ ಚಟುವಟಿಕೆಗಳತ್ತ ಗಮನ ಹರಿಸಲು ನಿರ್ಧರಿಸಿದ್ದೇವೆ
ವಿಶೇಷ ಹೋಳಿ ಸಿಹಿತಿಂಡಿಗಳನ್ನು ತಯಾರಿಸಲು ನಿವಾಸಿಗಳನ್ನು ಪ್ರೋತ್ಸಾಹಿಸುತ್ತಿದ್ದೇವೆ, ಇದನ್ನು ನಿವಾಸಿಗಳು ಮತ್ತು ಕೆಲವು ಅನಾಥಾಶ್ರಮಗಳಿಗೆ ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಅದೇ ರೀತಿ, ಜೆಪಿ ನಗರದ ಗೇಟೆಡ್ ಸಮುದಾಯದ ನಿವಾಸಿಗಳು ಕೂಡ 'ನೀರು ಮುಕ್ತ ಹೋಳಿ ಆಚರಣೆಗೆ ಮುಂದಾಗಿದ್ದು, ಸಾವಯವ ಬಣ್ಣದೊಂದಿಗೆ ಮಾತ್ರ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಈ ಬಣ್ಣಗಳನ್ನು ತೊಳೆಯುವುದು ತುಂಬಾ ಸುಲಭ ಮತ್ತು ನೀರಿನ ಅಗತ್ಯವಿರುವುದಿಲ್ಲ ಎಂದು ಸಮುದಾಯದ ಸದಸ್ಯ ಪ್ರಣವ್ ಶಾಸ್ತ್ರಿ ಹಂಚಿಕೊಳ್ಳುತ್ತಾರೆ.
ಈ ಮಧ್ಯೆ ನೀರಿನ ಕೊರತೆಯಿಂದ ಈ ಬಾರಿ ಒಟ್ಟಾಗಿ ಹೋಳಿ ಆಚರಣೆಯನ್ನು ಕೈ ಬಿಡಲು ನಿರ್ಧರಿಸಿರುವುದಾಗಿ ಬಿನ್‌ಬಿ (ಬೆಂಗಳೂರಿನಲ್ಲಿ ಬೆಂಗಾಲಿಗಳು) ಸಂಘದ ಅಧ್ಯಕ್ಷರಾದ ಅನನ್ಯಬ್ರತ ಭಕ್ತ ತಿಳಿಸಿದರು.
Advertisement