
ಕಾರವಾರ: ಗಂಡನ ಮೇಲಿದ್ದ ಕೋಪಕ್ಕೆ ಆರು ವರ್ಷದ ಮಗುವನ್ನು ಮೊಸಳೆ ತುಂಬಿದ್ದ ನಾಲೆಗೆ ತಾಯಿಯೇ ಎಸೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ವರದಿಯಾಗಿದೆ.
ರವಿಕುಮಾರ ಹಾಗೂ ಸಾವಿತ್ರಿ ದಂಪತಿಗಳ 6 ವರ್ಷದ ಮಗು ವಿನೋದ್ ಮೊಸಳೆಗೆ ಆಹಾರವಾಗಿದ್ದಾನೆ. ಗಂಡ-ಹೆಂಡತಿ ಜಗಳ ಮಾಡುತ್ತಿರುವಾಗ ಕೋಪದ ಭರದಲ್ಲಿ ತಾಯಿ ಸಾವಿತ್ರಿ ಮಗುವನ್ನು ಮನೆಯ ಹಿಂದಿರುವ ಕಾಗದ ಕಾರ್ಖಾನೆಯಿಂದ ಬರುವ ರಾಸಾಯನಿಕ ನೀರಿನ ನಾಲೆಗೆ ಎಸೆದಿದ್ದಾಳೆ.
ಮಗುವನ್ನು ನಾಲೆಗೆ ಎಸೆದ ವಿಷಯ ಅಕ್ಕಪಕ್ಕದ ಜನರಿಗೆ ತಿಳಿಯುತ್ತಿದ್ದಂತೆ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ದಾಂಡೇಲಿ ಗ್ರಾಮಿಣ ಠಾಣೆಯ ಪಿ.ಎಸ್ ಐ ಕೃಷ್ಣೇಗೌಡ ಅರಿಕೆರಿ,ಪಿ ಎಸ್ ಐ ಜಗದೀಶ ಹಾಗೂ ಸಿಬ್ಬಂದಿಗಳು ಮತ್ತು ಜೋಯಿಡಾದ ಅಗ್ನಿಶಾಮಕ ದಳದವರು ಹಾಗೂ ಸ್ಥಳಿಯರು ಮಗುವಿನ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಭಾನುವಾರ ಮುಂಜಾನೆ ಮುಂದುವರೆದ ಶೋಧ ಕಾರ್ಯಾಚರಣೆಯಲ್ಲಿ ನಾಲೆಗೆ ಎಸೆಯಲಾಗಿದ್ದ ಮಗುವನ್ನು ಮೊಸಳೆಯೊಂದು ಬಾಯಿಯಲ್ಲಿ ಹಿಡಿದು ನದಿಯಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ.
ಸ್ಥಳೀಯ ಮುಳುಗು ತಜ್ಞರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಪೋಲಿಸ್ ಸಿಬ್ಬಂದಿಗಳು ಮೊಸಳೆ ಬಾಯಿಯಿಂದ ಮಗುವಿನ ಮೃತದೇಹವನ್ನು ಹೊರ ತಂದಿದ್ದಾರೆ.
ಇದೀಗ ಮಗುವಿನ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳದಲ್ಲಿ ಡಿ.ವೈ.ಎಸ್‌ಪಿ ಶಿವಾನಂದ, ಸಿಪಿಐ ಭೀಮಣ್ಣ ಸೂರಿ ಹಾಗೂ ಅರಣ್ಯ ಇಲಾಖೆಯವರು ಉಪಸ್ಥಿತರಿದ್ದರು.
Advertisement