ಪ್ರಜ್ವಲ್‌ ರೇವಣ್ಣ ಪೆನ್ ಡ್ರೈವ್ ಕೇಸ್: ಕಾರ್ತಿಕ್‌ ಸೇರಿ ನಾಲ್ವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ನ್ಯಾಯಾಲಯ

ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಆಡಿಯೊ, ವಿಡಿಯೊ ಮತ್ತು ಚಿತ್ರಗಳ ಪೆನ್‌ಡ್ರೈವ್‌ ಮತ್ತು ಸಿ ಡಿ ಹಂಚಿಕೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಹಾಸನದ ನ್ಯಾಯಾಲಯವು ಬುಧವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಆಡಿಯೊ, ವಿಡಿಯೊ ಮತ್ತು ಚಿತ್ರಗಳ ಪೆನ್‌ಡ್ರೈವ್‌ ಮತ್ತು ಸಿ ಡಿ ಹಂಚಿಕೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಹಾಸನದ ನ್ಯಾಯಾಲಯವು ಬುಧವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಬೇಲೂರಿನ ಕಾಂಗ್ರೆಸ್‌ ಕಾರ್ಯಕರ್ತ ಚೇತನ್‌, ನವೀನ್‌ ಗೌಡ ಅಲಿಯಾಸ್‌ ನವೀನ್‌ ಕುಮಾರ್‌ ಎನ್‌ ಆರ್‌, ಹೊಳೆನರಸೀಪುರ ತಾಲ್ಲೂಕಿನ ಕಾರ್ತಿಕ್‌ ಮತ್ತು ಪುಟ್ಟರಾಜು ಅಲಿಯಾಸ್‌ ಪುಟ್ಟಿ ಪ್ರತ್ಯೇಕವಾಗಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆನಂದ ತಿರಸ್ಕರಿಸಿದ್ದಾರೆ.

ಮಹಿಳೆಯರ ಘನತೆ ರಕ್ಷಣೆ ಮತ್ತು ಮಹಿಳೆಯರಿಗೆ ಮುಂದೆ ಆಗುವ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡದಿರುವುದು ಅಗತ್ಯ. ಇಂಥವರಿಗೆ ಜಾಮೀನು ನೀಡುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಮುರಿದು ಬೀಳಲಿದ್ದು, ಮಹಿಳೆಯರ ಘನತೆಗೆ ಹಾನಿಯಾಗಲಿದೆ. ಇಂಥ ನಡೆಯು ಅಸಹಾಯಕ, ಧ್ವನಿ ಇಲ್ಲದ, ಮುಗ್ಧ ಮಹಿಳೆಯರನ್ನು ಗುರಿಯಾಗಿಸಲಿದ್ದು, ಅವರಿಗೆ ಮುಜುಗರ ಉಂಟು ಮಾಡಲಿದೆ. ಈ ಮೂಲಕ ಸ್ಥಾಪಿತ ಹಿತಾಸಕ್ತಿಗಳಿಂದ ತಾವು ಮಾಡದ ತಪ್ಪಿಗೆ ಸಂತ್ರಸ್ತ ಮಹಿಳೆಯರನ್ನು ಶಾಶ್ವತವಾಗಿ ಸಮಾಜದಲ್ಲಿ ಅಂಚಿಗೆ ನೂಕುವ ಸಾಧ್ಯತೆ ಇದೆ. ಸಮಾಜದಲ್ಲಿ ಇಂಥ ಸ್ಥಿತಿ ನಿರ್ಮಾಣ ಮಾಡುವುದು ಮಹಿಳೆಯರ ಉಳಿವಿಗೆ ಅಪಾಯ ತಂದೊಡ್ಡಲಿದೆ” ಎಂದು ನ್ಯಾಯಾಲಯ ಹೇಳಿದೆ.

ಸಂಗ್ರಹ ಚಿತ್ರ
ಪ್ರಜ್ವಲ್ ಕೇಸ್ 'ವಿಶ್ವದ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ', ನೂರಾರು ಹಿಂದು ಮಹಿಳೆಯರ ಮಾಂಗಲ್ಯ ಹರಣ: ಸಚಿವ ಕೃಷ್ಣಬೈರೇಗೌಡ

ಮುಂದುವರಿದು, ಆರೋಪಿಗಳ ವೈಯಕ್ತಿಕ ಸ್ವಾತಂತ್ರ್ಯ ಪರಿಗಣಿಸುವಾಗ ಅಷ್ಟೇ ಪರಿಗಣನೆಯನ್ನು ಸಂತ್ರಸ್ತರು ಅದರಲ್ಲೂ ಮಹಿಳೆಯರಿಗೂ ನೀಡಬೇಕಿದೆ. ಸ್ಥಾಪಿತ ಹಿತಾಸಕ್ತಿಗಳ ಇಂಥ ಅನಿರೀಕ್ಷಿತ ಕೃತ್ಯವು ಮಹಿಳೆಯರ ಚಾರಿತ್ರ್ಯಹರಣಕ್ಕೆ ಸಮನಾಗಲಿದೆ. ವಾಸ್ತವಿಕ ಅಂಶಗಳ ಆಧಾರದಲ್ಲಿ ನೋಡುವುದಾದರೆ ಆರೋಪಿಗಳ ಕಸ್ಟಡಿಯ ವಿಚಾರಣೆ ಅಗತ್ಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಕೀಲರಾದ ಎಂ ಎ ಮುರಳೀಧರ, ಸುಜಿತ್‌ ನಾರಾಯಣ, ಟಿ ಎಸ್‌ ಸುರೇಶ್‌ಕುಮಾರ್‌ ಅವರು ಚೇತನ್‌ ಈ ಹಿಂದೆ ಬೇಲೂರಿನ ಜೆಡಿಎಸ್‌ ಯುವ ಘಟಕದ ಅಧ್ಯಕ್ಷರಾಗಿದ್ದರು. ಈ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ದುರುದ್ದೇಶದಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಎಲ್ಲಿಯೂ ಚೇತನ್‌ ಹೆಸರು ಇಲ್ಲ. ಇನ್ನು ನವೀನ್‌, ಕಾರ್ತಿಕ್‌ ಮತ್ತು ಪುಟ್ಟರಾಜು ಅನ್ಯ ಪಕ್ಷದ ಕಾರ್ಯಕರ್ತನಾಗಿರುವುದರಿಂದ ದ್ವೇಷದಿಂದ ಪ್ರಕರಣ ದಾಖಲಿಸಲಾಗಿದೆ. ಅವರು ಅಮಾಯಕರು” ಎಂದು ವಾದಿಸಿದ್ದರು.

ಸರ್ಕಾರಿ ಅಭಿಯೋಜಕರು ಅರ್ಜಿದಾರರ ವಿರುದ್ಧದ ಪ್ರಕರಣ ಪ್ರಾಥಮಿಕ ಹಂತದಲ್ಲಿದೆ. ಲಭ್ಯ ಮಾಹಿತಿಯ ಪ್ರಕಾರ ಅರ್ಜಿದಾರರು ಮೇಲ್ನೋಟಕ್ಕೆ ಅಪರಾಧ ಎಸಗಿದ್ದಾರೆ. ತನಿಖೆಯ ಸಂದರ್ಭದಲ್ಲಿ ದೂರುದಾರ ತೇಜಸ್ವಿ ಅವರು ನೀಡಿದ 8 ಜಿಬಿ ಸ್ಯಾನ್‌ ಡಿಸ್ಕ್‌ ಪೆನ್‌ಡ್ರೈವ್‌ ಮತ್ತು ಏಳು ಪ್ರಿಂಟ್‌ಔಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅರ್ಜಿದಾರರ ಹೇಳಿಕೆ ದಾಖಲಿಸಿಕೊಳ್ಳುವುದು ಅಗತ್ಯವಾಗಿದ್ದು, ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ. ಇಂಥದ್ದೇ ಅಪರಾಧದಲ್ಲಿ ಅರ್ಜಿದಾರರು ಅಡಗಿಕೊಳ್ಳುವ ಸಾಧ್ಯತೆ ಇದೆ. ಸಿ ಡಿ ಮತ್ತು ವಿಡಿಯೊಗಳನ್ನು ದೇಶಾದ್ಯಂತ ಪ್ರಸಾರ ಮಾಡಲಾಗಿದ್ದು, ಅವುಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಬೇಕಿದೆ. ಅವರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ಅವರು ತನಿಖೆ ಸಹಕರಿಸದೇ ಇರುವ ಸಾಧ್ಯತೆ ಇದೆ. ಇದು ತುರ್ತಾಗಿ ಪ್ರಕರಣ ಇತ್ಯರ್ಥಕ್ಕೆ ಅಡ್ಡಿಯಾಗಲಿದೆ ಎಂದು ಹೇಳಿದ್ದಾರೆ.

ಸಂಗ್ರಹ ಚಿತ್ರ
ಪ್ರಜ್ವಲ್ ಪ್ರಕರಣ: ರೇವಣ್ಣ, ಬಾಬಣ್ಣ ಸೇರಿ ಮೂವರ ಬಂಧನ; 3ನೇ ಆರೋಪಿ ಬಗ್ಗೆ ಮಾಹಿತಿ ನೀಡಿದರೆ ತನಿಖೆ ಮೇಲೆ ಪರಿಣಾಮ- ಪರಮೇಶ್ವರ

ಅಲ್ಲದೇ, ತನಿಖಾಧಿಕಾರಿಯು ಅಡ್ವೊಕೇಟ್‌ ಜನರಲ್‌ಗೆ ಮನವಿ ಪತ್ರ ನೀಡಿದ್ದಾರೆ ಹಾಗೂ ನವೀನ್‌ ಗೌಡ ನಕಲಿ ಫೇಸ್‌ಬುಕ್‌ ಖಾತೆಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಮೆಟಾ ಪ್ರಧಾನ ಕಚೇರಿಗೆ ಪತ್ರ ಬರೆದಿದ್ದಾರೆ. ಅರ್ಜಿದಾರರು ತಲೆಮರೆಸಿಕೊಂಡಿದ್ದು, ಈ ಸಂಬಂಧ ದಾಖಲೆಗಳನ್ನು ಪಡೆಯಬೇಕಿದೆ. ಅರ್ಜಿದಾರರು ಹಾಜರಾತಿ ತನಿಖೆಗೆ ಅಗತ್ಯವಿದೆ. ಅರ್ಜಿದಾರರು ಆರ್ಥಿಕವಾಗಿ ಬಲಾಢ್ಯರಾಗಿದ್ದು, ರಾಜಕೀಯ ಸಂಪರ್ಕವೂ ಇದೆ. ಹೀಗಾಗಿ, ಅವರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ಅವರು ಇಂಥದ್ದೇ ಕೃತ್ಯ ಎಸಗುವ ಸಾಧ್ಯತೆ ಇದೆ” ಎಂದು ಆಕ್ಷೇಪಿಸಿದ್ದರು.

ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ನವೀನ್‌ ಗೌಡ ಮತ್ತು ಇತರರು ಪ್ರಜ್ವಲ್‌ ರೇವಣ್ಣ ಚಿತ್ರ ಮತ್ತು ವಿಡಿಯೊಗಳನ್ನು ತಿರುಚಿ ಅವುಗಳನ್ನು ಪೆನ್‌ಡ್ರೈವ್‌, ಸಿ ಡಿ, ವಾಟ್ಸಾಪ್‌ ಮತ್ತು ಮೊಬೈಲ್‌ಗಳ ಮೂಲಕ ಹಾಸನ ಲೋಕಸಭಾ ವ್ಯಾಪ್ತಿಯ ಜನರಿಗೆ ಹಂಚಿದ್ದಾರೆ ಎನ್ನಲಾಗಿದೆ. ಏಪ್ರಿಲ್‌ 21ರ ಸಂಜೆ 6.30 ಕ್ಕೆ ಘಟನೆ ಗುಸುಗುಸು ಆರಂಭವಾಗಿದ್ದು, ಏಪ್ರಿಲ್‌ 26ರಂದು ಪ್ರಜ್ವಲ್‌ಗೆ ಮತದಾನ ಮಾಡದಂತೆ ತಡೆಯುವ ಯತ್ನ ಮಾಡಲಾಗಿದೆ ಎಂದು ಏಪ್ರಿಲ್‌ 23ರಂದು ಜೆಡಿಎಸ್‌-ಬಿಜೆಪಿ ಚುನಾವಣಾ ಏಜೆಂಟ್‌ ಎಂ ಜಿ ಪೂರ್ಣಚಂದ್ರ ತೇಜಸ್ವಿ ಅವರು ಹಾಸನದ ಸೆನ್‌ ಠಾಣೆಯಲ್ಲಿ ದೂರು ನೀಡಿದ್ದರು.

ಈ ದೂರು ಆಧರಿಸಿ ಪ್ರತಿವಾದಿಗಳಾದ ನವೀನ್‌ ಗೌಡ ಅಲಿಯಾಸ್‌ ನವೀನ್‌ ಕುಮಾರ್‌ ಎನ್‌ ಆರ್‌ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್‌ 171­ಜಿ, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 67ಎ ಅಡಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com