
ನವದೆಹಲಿ: ಚುನಾವಣಾ ಆಯೋಗದ ನಿರ್ದೇಶನದ ನಂತರ ಮುಸ್ಲಿಂ ಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಘಟಕ ಹಂಚಿಕೊಂಡಿದ್ದ ವಿವಾದಾತ್ಮಕ ಅನಿಮೇಟೆಡ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ತೆಗೆದುಹಾಕಿದೆ.
ಈ ಸಂಬಂಧ 'X' ನ ನೋಡಲ್ ಅಧಿಕಾರಿಗೆ ಬರೆದ ಪತ್ರದಲ್ಲಿ, ಕರ್ನಾಟಕ ಬಿಜೆಪಿ ಘಟಕ ಮಾಡಿರುವ ಪೋಸ್ಟ್ ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಈ ಪೋಸ್ಟ್ ಅನ್ನು ತಕ್ಷಣ ತೆಗೆದುಹಾಕುವಂತೆ ಚುನಾವಣಾ ಆಯೋಗ, ಎಕ್ಸ್‌ಗೆ ನಿರ್ದೇಶನ ನೀಡಿತ್ತು.
ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಐಟಿ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ಪ್ರಕಾರ ಆಕ್ಷೇಪಾರ್ಹ ಪೋಸ್ಟ್ ಅನ್ನು ತೆಗೆದುಹಾಕಲು ಮೇ 5 ರಂದು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳು 'ಎಕ್ಸ್' ಗೆ ನಿರ್ದೇಶನ ನೀಡಿದ್ದಾರೆ. ಆದಾಗ್ಯೂ ಆ ಪೋಸ್ಟ್ ಅನ್ನು ಇನ್ನೂ ತೆಗೆದು ಹಾಕಿಲ್ಲ ಎಂದು ಎಕ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಚುನಾವಣಾ ಆಯೋಗ, ಆ ಪೋಸ್ಟ್ ಅನ್ನು ತಕ್ಷಣವೇ ತೆಗೆದುಹಾಕಲು ನಿರ್ದೇಶಿಸಿತ್ತು.
ಚುನಾವಣಾ ಆಯೋಗದಿಂದ ಬಂದ ಹೊಸ ನಿರ್ದೇಶನದ ನಂತರ 'X' ತನ್ನ ಸೈಟ್‌ನಿಂದ ವಿವಾದಾತ್ಮಕ ವಿಡಿಯೋವನ್ನು ತೆಗೆದುಹಾಕಿದೆ ಎಂದು ಚುನಾವಣಾ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಬಿಜೆಪಿಯು ಮುಸ್ಲಿಂ ಮತ್ತು ಎಸ್‌ಸಿ/ಎಸ್‌ಟಿ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವ್ಯಂಗ್ಯಚಿತ್ರಗಳನ್ನು ಹೊಂದಿರುವ ಅನಿಮೇಟೆಡ್ ವಿಡಿಯೋದಲ್ಲಿ ಬುಟ್ಟಿಯಲ್ಲಿದ್ದ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಎಂಬ ಮೊಟ್ಟೆಗಳ ಜೊತೆಗೆ 'ಮುಸ್ಲಿಂ' ಎಂದು ಗುರುತಿಸಲಾದ ಮೊಟ್ಟೆಯನ್ನು ಹಾಕುವುದನ್ನು ತೋರಿಸುತ್ತದೆ. ಮೊಟ್ಟೆಯೊಡೆದು ಮರಿಯಾದ ನಂತರ, ರಾಹುಲ್ ಗಾಂಧಿ 'ಮುಸ್ಲಿಂ'ರಿಗೆ 'ಅನುದಾನ'ವನ್ನು ನೀಡುವುದನ್ನು ತೋರಿಸಲಾಗಿತ್ತು.
ಬಳಿಕ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರು ಮುಸ್ಲಿಂರನ್ನು ಬುಟ್ಟಿಯಲ್ಲೇ ಉಳಿಸಿಕೊಂಡು, SC, ST ಮತ್ತು OBC ಗಳನ್ನು ಅದರಿಂದ ಹೊರಹಾಕುವುದನ್ನು ತೋರಿಸಲಾಗಿತ್ತು.
Advertisement