ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ: ನಾಗಸಂದ್ರ-ಮಾದಾವರ ಮಾರ್ಗ ಜುಲೈ ಅಂತ್ಯದ ವೇಳೆಗೆ ಆರಂಭ!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಸಿಹಿ ಸುದ್ದಿಯೊಂದನ್ನು ನೀಡಿದೆ. ಜುಲೈ ಅಂತ್ಯದ ವೇಳೆಗೆ ಹಸಿರು ಮಾರ್ಗದ ಮೆಟ್ರೋ ರೈಲು ಸೇವೆ ಮಾದಾವರದವರೆಗೂ ಆರಂಭವಾಗಲಿದೆ.
ಮಾದಾವರ ಮೆಟ್ರೋ ಸ್ಟೇಷನ್
ಮಾದಾವರ ಮೆಟ್ರೋ ಸ್ಟೇಷನ್
Updated on

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಸಿಹಿ ಸುದ್ದಿಯೊಂದನ್ನು ನೀಡಿದೆ. ಜುಲೈ ಅಂತ್ಯದ ವೇಳೆಗೆ ಹಸಿರು ಮಾರ್ಗದ ಮೆಟ್ರೋ ರೈಲು ಸೇವೆ ಮಾದಾವರದವರೆಗೂ ಆರಂಭವಾಗಲಿದೆ.

ನಾಗಸಂದ್ರ ಹಾಗೂ ಮಾದಾವರದ ನಡುವಿನ 3.7 ಕಿಮೀ ಅಂತರದ ಮೆಟ್ರೋ ಮಾರ್ಗ ಪೂರ್ಣಗೊಂಡಿದ್ದು, ಜುಲೈ ಅಂತ್ಯದ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಈ ಮೂಲಕ ಐದು ವರ್ಷಗಳಿಂದ ಮೆಟ್ರೋಗಾಗಿ ಕಾಯುತ್ತಿದ್ದ ಈ ಭಾಗದ ಜನರ ಕಾಯುವಿಕೆ ಅಂತ್ಯವಾಗಲಿದೆ.

ವಿಸ್ತರಿತ ಮಾರ್ಗದಲ್ಲಿ ಮಂಜುನಾಥ್ ನಗರ, ಚಿಕ್ಕಬಿದರಕಲ್ಲು (ಹಿಂದಿನ ಜಿಂದಾಲ್ ನಗರ) ಮತ್ತು ಮಾದಾವರ (ಬಿಐಇಸಿ) ಮೆಟ್ರೋ ನಿಲ್ದಾಣಗಳಿದ್ದು, 298 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆಗಸ್ಟ್ 2019ರಲ್ಲಿಯೇ ಇದು ಜನರ ಬಳಕೆಗೆ ಲಭ್ಯವಿರಬೇಕಿತ್ತು. ಆದರೆ, ಹಲವಾರು ಸಮಸ್ಯೆಗಳಿಂದ ಐದು ವರ್ಷ ತಡವಾಗಿ ಈ ಮಾರ್ಗ ಮೆಟ್ರೋ ಸಂಚಾರಕ್ಕೆ ಲಭ್ಯವಾಗುತ್ತಿದೆ.

ಈ ವಿಸ್ತರಿತ ಮಾರ್ಗದಲ್ಲಿ ಅಂಚೆಪಾಳ್ಯ ಗ್ರಾಮ ಮತ್ತು ಇತರೆ ಹಳ್ಳಿಗಳಿಗೆ ಪ್ರವೇಶವನ್ನು ಒದಗಿಸಲು ಬಿಎಂಆರ್‌ಸಿಎಲ್‌ ಒಟ್ಟು 3 ಕಿಮೀ ರಸ್ತೆಗಳನ್ನು ನಿರ್ಮಿಸಿದೆ. ವಿಸ್ತರಿತ ಮಾರ್ಗ ಜನರ ಬಳಕೆಗೆ ಮುಕ್ತವಾದರೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಅದಲ್ಲದೇ, ಮಾದನಾಯಕನಹಳ್ಳಿ ಮತ್ತು ಮಾಕಳಿ ಗ್ರಾಮಗಳ ನಿವಾಸಿಗಳಿಗೆ ಈ ಮೆಟ್ರೋ ಹತ್ತಿರವಾಗಲಿದ್ದು, ನೆಲಮಂಗಲದ ನಿವಾಸಿಗಳಿಗೆ ಕೊನೆಯ ಮೆಟ್ರೋ ನಿಲ್ದಾಣ ಕೇವಲ 6 ಕಿಮೀ ದೂರದಲ್ಲಿದೆ.

ಮಾದಾವರ ಮೆಟ್ರೋ ಸ್ಟೇಷನ್
ನಮ್ಮ ಮೆಟ್ರೋ: ನೇರಳೆ ಮಾರ್ಗದ ಎರಡು ನಿಲ್ದಾಣಗಳಲ್ಲಿ QR ಟಿಕೆಟ್ ವ್ಯವಸ್ಥೆ: ಜನರಿಂದ ಉತ್ತಮ ಸ್ಪಂದನೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್‌ ಎಂಡಿ ಎಂ ಮಹೇಶ್ವರ್ ರಾವ್ ಅವರು, ನಮ್ಮ ಮೆಟ್ರೋದ ಟ್ರ್ಯಾಕ್ ಕಾಮಗಾರಿಗಳು ಈಗಷ್ಟೇ ಪೂರ್ಣಗೊಂಡಿವೆ. ಮುಂದಿನ ಒಂದೆರಡು ತಿಂಗಳುಗಳಲ್ಲಿ ನಾವು ಮಾರ್ಗವನ್ನು ಪರೀಕ್ಷಿಸಬೇಕಾಗಿದೆ. ಇದು ಜುಲೈ ಅಂತ್ಯದ ವೇಳೆಗೆ ಕಾರ್ಯಾಚರಣೆಗೆ ತೆರೆಯಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ಮೆಟ್ರೋ ನಿಲ್ದಾಣಗಳ ಒಳಗೆ ಪೇಂಟಿಂಗ್ ಕೆಲಸ, ಗ್ರಾನೈಟ್ ಕಲ್ಲುಗಳನ್ನು ಹಾಕುವುದು ಮತ್ತು ಸಿಸ್ಟಮ್ ಕೆಲಸಗಳು (ಎಲೆಕ್ಟ್ರಿಕಲ್ ಮತ್ತು ಸಿಗ್ನಲಿಂಗ್) ಇನ್ನೂ ಪೂರ್ಣಗೊಳ್ಳಬೇಕಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜೂನ್ ವೇಳೆಗೆ ಎಲ್ಲವನ್ನೂ ಪೂರ್ಣಗೊಳಿಸಲು ನಾವು ಯೋಜಿಸಿದ್ದೇವೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಪ್ರಾಯೋಗಿಕ ರನ್ ಮತ್ತು ಪರಿಶೀಲನೆಯ ನಂತರ, ಜುಲೈ ಅಂತ್ಯದ ವೇಳೆಗೆ ಈ ಮಾರ್ಗ ಸಾರ್ವಜನಿಕ ಬಳಕೆಗೆ ಮುಕ್ತವಾಗುವ ಸಾಧ್ಯತೆ ಇದೆ, ಈಗಿನ ಗ್ರೀನ್ ಲೈನ್ ರೈಲುಗಳು ಇನ್ನೂ ಮೂರು ನಿಲ್ದಾಣಗಳಿಗೆ ಓಡಬೇಕಾಗಿರುವುದರಿಂದ ಹೊಸ ಕೋಚ್‌ಗಳನ್ನು ಹೊಂದಲು ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಿದ್ದಾರೆ.

ಈ ಸಣ್ಣ ಮಾರ್ಗದ ವಿಸ್ತರಣೆ ಆರಂಭದಿಂದಲೂ ಅನೇಕ ಸಮಸ್ಯೆಗಳನ್ನು ಎದುರಿಸಿದೆ. ಹಬ್ಬಗಳು, ಚುನಾವಣೆ ಕಾರಣಕ್ಕೆ ಮಾರ್ಚ್‌ನಿಂದ ಕಾರ್ಮಿಕರ ಕೊರತೆ ಎದುರಾಗಿದೆ. ಇಲ್ಲದಿದ್ದರೆ ಇಷ್ಟೊತ್ತಿಗೆ ಕಾಮಗಾರಿ ಮುಗಿಯುತ್ತಿತ್ತು. ಅದಕ್ಕೂ ಮುನ್ನ ಕಚ್ಛಾ ವಸ್ತುಗಳನ್ನು ಪೂರೈಸಲು ಗುತ್ತಿಗೆ ಪಡೆದಿದ್ದ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್‌ ಕಂಪನಿ ಉತ್ಪನ್ನಗಳನ್ನು ಪೂರೈಸದಿರುವುದು ಒಪ್ಪಂದದ ರದ್ಧತಿಗೆ ಕಾರಣವಾಗಿತ್ತು. ಅದಾದ ಬಳಿಕ ನೈಸ್‌ ರಸ್ತೆಯ ಮೇಲೆ ಮೆಟ್ರೋ ಮಾರ್ಗ ನಿರ್ಮಿಸಲು 67.65 ಲಕ್ಷ ರೂ. ಅನ್ನು ಪಾವತಿಸಿ ಅನುಮತಿ ಪಡೆಯಲಾಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com