
ಬೆಂಗಳೂರು: ಬೆಂಗಳೂರಿನ ಜೆ.ಪಿ.ನಗರ 6ನೇ ಹಂತದಲ್ಲಿ ವಾಸವಾಗಿರುವ, ಅಮೆರಿಕದಿಂದ ವಾಪಸಾಗಿದ್ದ 75 ವರ್ಷದ ಮಹಿಳೆಯೊಬ್ಬರ ಒಡೆತನದ ಮನೆಯ ದಾಖಲೆಗಳನ್ನು ನಕಲು ಮಾಡಿ, ಮೂರು ಬ್ಯಾಂಕ್‌ಗಳಲ್ಲಿ ಬರೋಬ್ಬರಿ 3.85 ಕೋಟಿ ರೂ ಸಾಲ ಪಡೆದಿದ್ದ ಆರೋಪಿಗಳನ್ನು ಸದ್ಯ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ ಪೊಲೀಸರು) ಬಂಧಿಸಿದ್ದಾರೆ.
ಮೋಸ ಹೋದ ಮಹಿಳೆ ಅಂಬುಜಾಕ್ಷಿ ನಾಗರಕಟ್ಟಿ ಅವರು ತಮ್ಮ 1,350 ಚದರ ಅಡಿಯ ಮನೆಯನ್ನು ಮಾರಾಟ ಮಾಡಿ ತಮ್ಮ ಮಗನ ಜತೆಗೆ ವಿದೇಶದಲ್ಲಿ ವಾಸ ಮಾಡಲು ನಿರ್ಧಾರ ಮಾಡಿದ್ದರು ಮತ್ತು ಈ ಬಗ್ಗೆ ತಮ್ಮ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದರು.
ಅಂಬುಜಾಕ್ಷಿ ಅವರ ಮನೆ ಖರೀದಿ ಮಾಡುವ ಉದ್ದೇಶದಿಂದ ಆಕೆಯ ಸಂಪರ್ಕಕ್ಕೆ ಬಂದು ಮಹಿಳೆಯನ್ನು ವಂಚಿಸಿದ್ದಾರೆ. ಏಳು ಆರೋಪಿಗಳ ಪೈಕಿ ಮೂವರ ನಿರೀಕ್ಷಣಾ ಜಾಮೀನನ್ನು ನಗರದ ನ್ಯಾಯಾಲಯ ತಿರಸ್ಕರಿಸುವುದರೊಂದಿಗೆ ಆರೋಪಿಗಳ ಕೃತ್ಯ ಈಗ ಬೆಳಕಿಗೆ ಬಂದಿದೆ.
ಕೆನರಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅಂಬುಜಾಕ್ಷಿ ಅವರು ಮಧುರೈಗೆ ವರ್ಗಾವಣೆಯಾದಾಗ ಸ್ವಯಂ ನಿವೃತ್ತಿ ಪಡೆದು, ಓದು ಮುಗಿಸಿ 2017ರಲ್ಲಿ ಬೆಂಗಳೂರಿಗೆ ವಾಪಸಾಗುವವರೆಗೂ ಅಮೆರಿಕಾದಲ್ಲಿಯೇ ನೆಲೆಸಿದ್ದರು. ಜೆ.ಪಿ.ನಗರ 6ನೇ ಹಂತದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಜೂರು ಮಾಡಿದ ನಿವೇಶನದಲ್ಲಿ ಮನೆ ನಿರ್ಮಿಸಲಾಗಿದೆ.
ಅವರ ನೆರೆಹೊರೆಯವರ ಪೈಕಿ ಮಂಜುನಾಥ್ ಎಂಬುವವರು ತಮ್ಮ ಸ್ನೇಹಿತ್ ಭಾಸ್ಕರ್ ಕೃಷ್ಣ ಎಂಬುವವರು ಮನೆ ಖರೀದಿ ಮಾಡುತ್ತಾರೆ ಎಂದು ಪರಿಚಯ ಮಾಡಿಕೊಟ್ಟಿದ್ದಾರೆ.
ಮನೆ ಖರೀದಿ ವಿಚಾರವಾಗಿ ಭಾಸ್ಕರ್ ಕೃಷ್ಣ ಅವರು ಅಂಬುಜಾಕ್ಷಿ ಅವರನ್ನು ಭೇಟಿ ಮಾಡಿ ಮನೆ ಖರಿದೀಸುತ್ತೇನೆ ಎಂದು ತಿಳಿಸಿ, ಮುಂಗಡವಾಗಿ 10 ಸಾವಿರ ಹಣ ನೀಡಿದ್ದರು. ಬಳಿಕ, ಕಾನೂನು ಅನುಮತಿ ಪಡೆಯಬೇಕು ಎಂದು ಮಹಿಳೆಯಿಂದ ಆಸ್ತಿ ದಾಖಲೆ ಪತ್ರಗಳ ನಕಲು ಪ್ರತಿಗಳನ್ನು ತೆಗೆದುಕೊಂಡಿದ್ದಾರೆ.
ಮತ್ತೆ ಕೆಲವು ದಿನಗಳ ಬಳಿಕ, ಕೃಷ್ಣ ತನ್ನ ಸ್ನೇಹಿತ್ ಮಹೇಶ ಹಾಗೂ ಇತರ ಸ್ನೇಹಿತರೊಂದಿಗೆ ಬ್ಯಾಂಕ್ ಅಧಿಕಾರಿಗಳಂತೆ ಅಂಬುಜಾಕ್ಷಿಯವರ ಮನೆಗೆ ತೆರಳಿದ್ದಾರೆ.
ಈ ವೇಳೆ, ಕೃಷ್ಣ ತನಗೆ ಸಾಲ ಬೇಕಿದ್ದು, ಹಾಗಾಗಿ ಅಂಬುಜಾಕ್ಷಿ ಅವರ ಸಹಿ ಬೇಕು ಎಂದು ತಿಳಿಸಿದ್ದಾನೆ. ಈ ಹಿಂದೆ ಬ್ಯಾಂಕ್ ಉದ್ಯೋಗಿಯಾಗಿದ್ದ ಅಂಬುಜಾಕ್ಷಿ ಆತನ ಉದ್ದೇಶವನ್ನು ಅರಿತು ಪ್ರಶ್ನೆ ಮಾಡಿದ್ದಾಳೆ. ಬಳಿಕ, ತನ್ನ ಆಸ್ತಿಯನ್ನು ಆತನಿಗೆ ಮಾರಲು ನಿರಾಕರಿಸಿದ್ದಾಳೆ.
ನಂತರ ಅಂಬುಜಾಕ್ಷಿ ಅವರ ಹೆಸರಿನಲ್ಲಿ ಈಗಾಗಲೇ ಮೂರು ಬ್ಯಾಂಕ್‌ಗಳಲ್ಲಿ 3.85 ಕೋಟಿ ಸಾಲ ಪಡೆದಿರುವ ಬಗ್ಗೆ ತಿಳಿದುಬಂದಿದೆ. ಆರೋಪಿಗಳು ಬ್ಯಾಂಕ್‌ಗಳಿಂದಲೂ ಹಣ ಡ್ರಾ ಮಾಡಿಕೊಂಡಿದ್ದರು.
ಅಂಬುಜಾಕ್ಷಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಮತ್ತಿಬ್ಬರು ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement