
ಬೆಂಗಳೂರು: ರಾಜಕೀಯ ಮತ್ತು ವೈಯುಕ್ತಿಕ ಕಾರಣಗಳಿಂದಾಗಿ ಈ ವರ್ಷ ತಮ್ಮ ಜನ್ಮದಿನಾಚರಣೆ ಆಚರಣೆ ಮಾಡದಿರಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ನಿರ್ಧರಿಸಿದ್ದು, NDA ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಅಭಿಮಾನಿಗಳಿಗೆ ಸೂಚನೆ ನೀಡಿದ್ದಾರೆ.
ಹೌದು.. ಇದೇ ಮೇ 18ರಂದು ಎಚ್ ಡಿ ದೇವೇಗೌಡ ಅವರು 92ನೇ ವಸಂತಕ್ಕೆ ಕಾಲಿಡುತ್ತಿದ್ದು, ಈ ಸಂದರ್ಭದಲ್ಲಿ ಅಭಿಮಾನಿಗಳು ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಯಾರೂ ಶುಭಾಶಯ ಕೋರಲು ಮನೆಗೆ ಆಗಮಿಸದಂತೆ ಸೂಚಿಸಿದ್ದು, ತಾವುಗಳು ಇರುವ ಸ್ಥಳದಿಂದಲೇ ನನ್ನನ್ನು ಹರಸಿ ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ದೇವೇಗೌಡ ಅವರು, 'ಅಭಿಮಾನಿಗಳು ಹಾಗೂ ಜಾತೃತೀತ ಜನತಾದಳ ಪಕ್ಷದ ಕಾರ್ಯಕರ್ತರಲ್ಲಿ ನನ್ನ ವಿನಂತಿ. ಇದೇ ತಿಂಗಳ 18 ರಂದು ನಾನು 91 ವರ್ಷ ಪೂರೈಸಿ 92ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದು, ಕಾರಣಾಂತರಗಳಿಂದ ನಾನು ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ತಾವೆಲ್ಲರೂ ಇದ್ದಲ್ಲಿಯೇ ಹಾರೈಸಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಅಂತೆಯೇ ಪ್ರಸಕ್ತ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ. (ಎನ್.ಡಿ.ಎ) ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಹಾಗೂ ಪಕ್ಷದ ಸಂಘಟನೆಗೆ ಪ್ರತಿಯೊಬ್ಬರೂ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕೋರುತ್ತೇನೆ. ನಿಮ್ಮೆಲ್ಲರ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ದೇವೇಗೌಡರು ಮಾಧ್ಯಮ ಪ್ರಕಟಣೆ ನೀಡಿದ್ದಾರೆ.
ಮೊಮ್ಮಗ ಪ್ರಜ್ವಲ್ ರೇವಣ್ಣರ ಸೆಕ್ಸ್ ಹಗರಣ ಪ್ರಕರಣದಿಂದ ದೇವೇಗೌಡರ ಕುಟುಂಬ ಸಾಕಷ್ಟು ಮುಜುಗರಕ್ಕೊಳಗಾಗಿದ್ದು, ಈ ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ವ್ಯಾಪಕ ಚರ್ಚೆಗೆ ಒಳಗಾಗಿದ್ದು, ಈ ವರೆಗೂ ದೇವೇಗೌಡರು ಈ ಪ್ರಕರಣ ಸಂಬಂಧ ಬಹಿರಂಗ ಹೇಳಿಕೆ ನೀಡಿಲ್ಲ.
Advertisement