
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ್ದು, ಬರ ಪರಿಹಾರ, ಪೂರ್ವ ಮುಂಗಾರು ಮಳೆಯ ಬಿತ್ತನೆ ಚಟುವಟಿಕೆಗಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ 10 ದಿನಗಳ ಬಳಿಕ ಚುನಾವಣ ಆಯೋಗವು ನೀತಿ ಸಂಹಿತೆಯ ಕೆಲ ನಿಯಮಗಳನ್ನು ಸಡಿಲಗೊಳಿಸಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಶುಕ್ರವಾರ ಎರಡೂವರೆ ತಾಸು ಸುದೀರ್ಘ ಸಭೆ ನಡೆಸಿದರು.
ಸಭೆಯಲ್ಲಿ ಬೆಳೆ ಹಾನಿ ಪರಿಹಾರ ಹಾಗೂ ಬಿತ್ತನೆ ಚಟುವಟಿಕೆ ಬಗ್ಗೆ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಜನಸ್ಪಂದನ ಅರ್ಜಿ ವಿಲೇವಾರಿಗೆ ಸಕಾಲದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಸಿಎಂ, ನಾನಾ ಇಲಾಖೆಗಳಲ್ಲಿ ವಿಲೇವಾರಿ ಆಗಿರುವ ಅರ್ಜಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಾಕಿಯಿರುವ ಅರ್ಜಿಗಳನ್ನು ತಿಂಗಳಾಂತ್ಯದಲ್ಲಿ ಇತ್ಯರ್ಥ ಪಡಿಸುವಂತೆ ಗಡುವು ವಿಧಿಸಿದರು.
ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಅನುದಾನ ಬಿಡುಗಡೆಗೆ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದರು.
ಗ್ಯಾರಂಟಿ'ಗಳ ಹೆಸರಿನಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಸಿಗುತ್ತಿಲ್ಲ ಎಂಬ ಅಸಮಾಧಾನ ಶಾಸಕರಲ್ಲಿದೆ. ಪಕ್ಷದ ಶಾಸಕರೂ ನೇರವಾಗಿ ಈ ಕುರಿತು ಅಸಮಾಧಾನ ಹೊರಹಾಕುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಪಕ್ಷದ ಶಾಸಕರಲ್ಲಿ ಅತೃಪ್ತಿಗೆ ಆಸ್ಪದ ಕೊಡಬಾರದು ಎಂದು ಎಐಸಿಸಿ ವರಿಷ್ಠರು ನಿರ್ದೇಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕರ ಅನುದಾನದ ಕೆಲಸಗಳು ಒಳಗೊಂಡು ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಜೂನ್ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ನಡೆಯಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಜೊತೆಗೆ ಬಜೆಟ್ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆದೇಶಗಳು ಹೊರಬೀಳಬೇಕು, ಎಂದು ಇದೇ ವೇಳೆ ಅಧಿಕಾರಿಗಳಿಗೆ ಸೂಕ್ಷ್ಮವಾಗಿ ಎಚ್ಚರಿಕೆಯನ್ನೂ ನೀಡಿದರು.
ಯೋಜನಾ ಇಲಾಖೆಯಲ್ಲಿ ಶೇ. 44 ಮಾತ್ರ ವೆಚ್ಚವಾಗಿದ್ದು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಯ ವೆಚ್ಚದಲ್ಲಿ ಪ್ರಗತಿ ಕುಂಠಿತವಾಗಿದೆ. ಶಾಸಕರ ಅನುದಾನ ಬಹಳ ವರ್ಷಗಳ ಕಾಲ ವೆಚ್ಚವಾಗದಿದ್ದರೆ ವಾಪಸ್ ಪಡೆಯಬೇಕಾಗುತ್ತದೆ. ಅದಕ್ಕೆ ಅವಕಾಶ ಕೊಡದಂತೆ ಕ್ರಿಯಾಯೋಜನೆಗಳನ್ನು ಅನುಮೋದಿಸಿ ಅಭಿವೃದ್ಧಿ ಕೆಲಸಗಳಿಗೆ ಅನುವು ಮಾಡಿಕೊಡಬೇಕು ಎಂದು ಸೂಚಿಸಿದರು.
ಕೇಂದ್ರದ ನೆರವಿನ ಯೋಜನೆಗಳಿಗೆ ಸಂಬಂಧಿಸಿದಂತೆ ಬಳಕೆ ಪ್ರಮಾಣ ಪತ್ರವನ್ನು ಸಕಾಲಕ್ಕೆ ಕಳಿಸದಿದ್ದರೆ ಕೇಂದ್ರದಿಂದ ಮುಂದಿನ ಕಂತು ಬಿಡುಗಡೆಯಾಗುವುದಿಲ್ಲ. ಹಾಗಾಗಿ ಚುನಾವಣಾ ಆಯೋಗದಿಂದ ಟೆಂಡರ್ ಕರೆಯಲು ಅನುಮತಿ ನೀಡಲಾಗಿದ್ದು, ಮುಂದಿನ ಸಭೆ ನಡೆಯುವುದರೊಳಗೆ ಪ್ರಕ್ರಿಯೆ ಶುರುವಾಗಬೇಕು. ಈ ಬಗ್ಗೆ ಆದ್ಯತೆ ಮೇಲೆ ಕ್ರಮ ವಹಿಸಿ. ಜೂನ್ ಅಂತ್ಯದೊಳಗೆ ಕೇಂದ್ರದ ಯೋಜನೆಗಳಿಗೆ ಸಂಬಂಧಿಸಿದ ಅನುದಾನದ ಮೊದಲ ಕಂತು ಬಿಡುಗಡೆ ಮಾಡಿಸಿಕೊಳ್ಳಲು ಕ್ರಮ ವಹಿಸಬೇಕು ಎಂದು ಸಿಎಂ ನಿರ್ದೇಶನ ನೀಡಿದರು.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರು ಮಾತನಾಡಿ, ಟೆಂಡರ್‌ಗಳನ್ನು ಕರೆಯುವುದು, ಅಂತಿಮಗೊಳಿಸುವುದು ಮತ್ತು ಸಿಎಂ-ಮಂತ್ರಿಗಳಿಂದ ಸಭೆಗಳನ್ನು ಕರೆಯುವುದು ಮುಂತಾದವುಗಳಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿತ್ತು. ಹೀಗಾಗಿ ಇಸಿಐ ಅನುಮತಿ ನೀಡಿದೆ ಎಂದು ಹೇಳಿದ್ದಾರೆ.
Advertisement