
ಮೈಸೂರು: ಹುಬ್ಬಳ್ಳಿಯ ಅಂಜಲಿ ಹತ್ಯೆ ಪ್ರಕರಣ ಆರೋಪಿ ವಿಶ್ವನಾಥ್ ಅಲಿಯಾಸ್ ಗಿರೀಶ್ ಸಾವಂತ್ ಮೈಸೂರಿನ ಮಹಾರಾಜ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ತಂದೆಗೆ ವಯಸ್ಸಾಗಿದ್ದು, ಅವರನ್ನು ನೋಡಿಕೊಳ್ಳುವ ಸಲುವಾಗಿ ವಿನಾಯಕ ನರ್ಸಿಂಗ್ ಕೇರ್ ಸರ್ವೀಸ್ ಮೂಲಕ ವಿಶ್ವನಾಥ್ ಅವರನ್ನು ನೇಮಿಸಿಕೊಳ್ಳಲಾಗಿತ್ತು ಎಂದು ಹೋಟೆಲ್ ಮಾಲೀಕ ಗೋವರ್ಧನ್ ಅವರು ಹೇಳಿದ್ದಾರೆ.
ತಂದೆಯನ್ನು ನೋಡಿಕೊಳ್ಳುವ ಸಲುವಾಗಿ ಆತನನ್ನು ನೇಮಿಸಿಕೊಳ್ಳಲಾಗಿತ್ತು. ಆತ ಒಂದೂವರೆ ತಿಂಗಳು ಕೆಲಸ ಮಾಡಿದ. ನಂತರ ಆತ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ನಮ್ಮ ಹೋಟೆಲ್'ನಲ್ಲಿ ರೂಮ್ ಬಾಯ್ ಹಾಗೂ ಸಪ್ಲೈಯರ್ ಆಗಿ ಕೆಲಸ ಮಾಡಲು ಅವಕಾಶ ನೀಡಲಾಗಿತ್ತು. ತಾಯಿಗೆ ಅನಾರೋಗ್ಯ ಎಂದು ಆಗಾಗ್ಗೆ ಊರಿಗೆ ಹೋಗುತ್ತಿದ್ದ. ಸರಿಯಾಗಿ ಕೆಲಸಕ್ಕೆ ಬರುತ್ತಿರಲಿಲ್ಲ. ಹೋಟೆಲ್ ಫೋನ್ ಹಾಗೂ ಸಿಬ್ಬಂದಿಗಳ ಮೊಬೈಲ್ ಫೋನ್ ತೆಗೆದುಕೊಂಡು ಫೋನ್ ಮಾಡುತ್ತಿದ್ದ. ಕೆಲ ದಿನಗಳ ಹಿಂದೆ 1000 ರೂಪಾಯಿ ತೆಗೆದುಕೊಂಡಿದ್ದ. ನಂತರ ರೂ.5000 ಮುಂಗಡವಾಗಿ ಸಾಲ ಪಡೆದಿದ್ದ. ಹಣವನ್ನು ಹಿಂತಿರುಗಿಸಬೇಕೆಂದು ಮರಳಿ ಕೆಲಸಕ್ಕೆ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಕೆಲ ದಿನಗಳ ಹಿಂದೆ ಅಂಜಲಿ ಅಂಬಿಗೇರ್ ಎಂಬ ಯುವತಿಯನ್ನು ಆರೋಪಿ ತನ್ನ ಪ್ರೇಮ ನಿವೇದನೆಗೆ ಸಹಕರಿಸುತ್ತಿಲ್ಲ ಎಂದು ಸಿಟ್ಟಿನಿಂದ ಆಕೆಯ ಮನೆಯೊಳಗೆ ನುಗ್ಗಿ ಚಾಕುವಿನಿಂದ ಮನಸೋ ಇಚ್ಛೆ ತಿವಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಹುಬ್ಬಳ್ಳಿ ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಇದೀಗ ಆರೋಪಿ ದಾವಣಗೆರೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಅಂಜಲಿಯನ್ನು ಹತ್ಯೆಗೈದ ಬಳಿಕ ಆರೋಪಿ ಬೆಂಗಳೂರು ಮೂಲಕ ರೈಲಿನಲ್ಲಿ ಗೋವಾ, ಮಹಾರಾಷ್ಟ್ರ ಕಡೆ ಹೋಗಿ ತಲೆಮರೆಸಿಕೊಳ್ಳಬೇಕು ಎಂದುಕೊಂಡಿದ್ದಾನೆ. ಆದರೆ, ರೈಲಿನಲ್ಲಿ ಪ್ರಯಾಣಿಸುತ್ತಿರುವ ಮಾಹಿತಿ ಸಿಕ್ಕ ಹುಬ್ಬಳ್ಳಿ ಪೊಲೀಸರು ದಾವಣಗೆರೆಯಲ್ಲಿ ಆತನನ್ನು ಬಂಧಿಸಲು ಸಕಲ ಸಿದ್ಧತೆ ನಡೆಸಿದ್ದರು. ಆತನ ಬಂಧನಕ್ಕೆ ಯತ್ನಿಸುವ ವೇಳೆ ರೈಲಿನಿಂದ ಜಿಗಿದು ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ, ಈ ವೇಳೆ ರೈಲಿನಿಂದ ಬಿದ್ದ ರಭಸಕ್ಕೆ ಆತನ ಮುಖ ಮತ್ತು ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Advertisement