
ಬೆಂಗಳೂರು: ಮೀಸಲಾತಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿರುವ ಎಡಿಟ್ ಮಾಡಿರುವ ವಿಡಿಯೋ ತುಣುಕನ್ನು ಶೇರ್ ಮಾಡಿದ್ದ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರನ್ನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯು ನಿರ್ದಿಷ್ಟವಾಗಿ ಮುಸ್ಲಿಮರನ್ನು ಉಲ್ಲೇಖಿಸುವುದಿಲ್ಲ ಮತ್ತು ಇದು ಎಸ್‌ಸಿ/ಎಸ್‌ಟಿಗಳನ್ನೂ ಒಳಗೊಂಡಿರುತ್ತದೆ ಎಂದು ಪ್ರತಿಪಾದಿಸುತ್ತಿದ್ದ ಪ್ರತಿಯೊಬ್ಬ ಉದಾರವಾದಿ ಮುಖಕ್ಕೆ ಇದನ್ನು ಎಸೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡು ಬಳಕೆದಾರರಾದ BhikuMhatre (@MumbaichaDon) ಎಂಬುವವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗಾಗಿ ಅವರನ್ನು ಶನಿವಾರ ಗೋವಾದಲ್ಲಿ ಬಂಧಿಸಿ ಕರೆತರಲಾಗಿದೆ.
ಬೆಂಗಳೂರು ನಿವಾಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತ ಜೆ ಸರವಣನ್ ಅವರು ಏಪ್ರಿಲ್ 29 ರಂದು ಈ ಸಂಬಂಧ ಸೈಬರ್ ಕ್ರೈಮ್ ಪೊಲೀಸರಿಗೆ ನೀಡಿದ ದೂರಿನ ಅನ್ವಯ ಬಂಧಿಸಲಾಗಿದೆ. ಸೈಬರ್ ಕ್ರೈಂ ಪೊಲೀಸರು ಎಕ್ಸ್ ಬಳಕೆದಾರರ ವಿರುದ್ಧ ಐಪಿಸಿ ಸೆಕ್ಷನ್ 153 (ಎ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಳಕೆದಾರರ ಮಗ ನಾಗೇಶ್ ನಾಯ್ಕ್ ಕೂಡ ಟ್ವೀಟ್ ಮಾಡಿದ್ದು, 'ನನ್ನ ತಂದೆ @MumbaichaDon ಅವರನ್ನು ಪೊಲೀಸರು ಬಂಧಿಸಿದ್ದಾರೆ. ಟ್ವಿಟರ್‌ನಿಂದ ಮೇಲ್ ಕಳುಹಿಸಲಾಗಿದೆ ಮತ್ತು ಸಂಜೆ ಇದ್ದಕ್ಕಿದ್ದಂತೆ ಪೊಲೀಸರು ಮನೆ ಬಾಗಿಲಿಗೆ ಬಂದು ನನ್ನ ತಂದೆಯನ್ನು ಕರೆದೊಯ್ದರು! ಎಫ್ಐಆರ್ ಸಂಪೂರ್ಣವಾಗಿ ಸಂಬಂಧಿಸಿಲ್ಲ! #BhikuMhatre ಯನ್ನು ಬಿಡುಗಡೆ ಮಾಡಿ ಎಂದಿದ್ದಾರೆ.
ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ ಕರ್ನಾಟಕ ಬಿಜೆಪಿ ಘಟಕ ರಾಜ್ಯ ಸರ್ಕಾರವನ್ನು ಟೀಕಿಸಿದೆ.
ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 'ಕರ್ನಾಟಕ ಪೊಲೀಸರು ಗೋವಾದಿಂದ @MumbaichaDon ಅವರನ್ನು ಬಂಧಿಸಿದ್ದಾರೆ. ನಾವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅವರಿಗೆ ಅಗ್ಯವಿರುವ ಎಲ್ಲ ರೀತಿಯ ಕಾನೂನು ಬೆಂಬಲ ನೀಡುತ್ತೇವೆ. ಕಾಂಗ್ರೆಸ್ ಆಡಳಿತ ಅರಾಜಕತೆಯಿಂದ ಕೂಡಿದೆ ಮತ್ತು ಭಿನ್ನಾಭಿಪ್ರಾಯವನ್ನು ಸಹಿಸುವುದಿಲ್ಲ. ಆದರೆ ಈ ದೇಶದಲ್ಲಿ ಮತ್ತೊಂದು ತುರ್ತು ಪರಿಸ್ಥಿತಿ ಹೇರಿಕೆಯಾಗದಿರಲಿ' ಎಂದಿದ್ದಾರೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪೋಸ್ಟ್‌ನಲ್ಲಿ, ಇದು ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಅಧಿಕಾರದ ದುರ್ಬಳಕೆಯಾಗಿದೆ. ನಾವು ನ್ಯಾಯಾಲಯದ ಒಳಗೆ ಮತ್ತು ಹೊರಗೆ ಇದರ ವಿರುದ್ಧ ಹೋರಾಡುತ್ತೇವೆ ಎಂದು ತಿಳಿಸಿದ್ದಾರೆ.
Advertisement