
ಬೆಂಗಳೂರು: ಅತಿ ಹೆಚ್ಚು ದ್ವೇಷ ಭಾಷಣಗಳನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥಾಪಕ ಮತ್ತು ಅಧ್ಯಕ್ಷ ತ್ರಿಲೋಚನ್ ಶಾಸ್ತ್ರಿ ಅವರು ಶನಿವಾರ ಹೇಳಿದರು.
ಶನಿವಾರ ನಡೆದ ಪಿಕೆ ಡೇ ಸ್ಮಾರಕ ಉಪನ್ಯಾಸದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸ್ವತಂತ್ರ ಸಂಸ್ಥೆಗಳಿಗೆ ಬೆದರಿಕೆ ವಿಷಯದ ಕುರಿತು ಮಾತನಾಡಿದ ಅವರು, ದೇಶದಲ್ಲಿ ರಾಜಕೀಯವು ಬೇರೂರಿದ್ದು, ಯಾರೂ ಇತರರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದು ಆಗಾಗ್ಗೆ ಸಂಘರ್ಷಗಳಿಗೆ ಕಾರಣವಾಗುತ್ತಿದೆ. ನಾವು ಪ್ರಜಾಪ್ರಭುತ್ವವಾಗಿ ವಿಕಸನಗೊಂಡಿಲ್ಲ ಎಂದು ಹೇಳಿದರು.
ಭಾರತೀಯ ಚುನಾವಣಾ ಆಯೋಗವು (ಇಸಿಐ) ಸ್ವತಂತ್ರ ಸಂಸ್ಥೆಯಾಗಿದ್ದು, ದ್ವೇಷದ ಭಾಷಣ ಮತ್ತು ಇತರ ಹಲವಾರು ಚುನಾವಣಾ ನೀತಿ ಸಂಹಿತೆ (MCC) ಉಲ್ಲಂಘನೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಮಾಜ ಗುಂಪುಗಳು ಮತ್ತು ಇತರೆ ಸಾಮಾನ್ಯ ವ್ಯಕ್ತಿಗಳಿಂದ 20,000 ಕ್ಕೂ ಹೆಚ್ಚು ದೂರುಗಳು ಆಯೋಗಕ್ಕೆ ಸಲ್ಲಿಕೆಯಾಗಿವೆ. ಆದಾಗ್ಯೂ, ಯಾವುದೇ ಕ್ರಮಗಳಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ ಕೇಂದ್ರ ಚುನಾವಣಾ ಅಯೋಗ, ನ್ಯಾಯಾಂಗ, ಸಿಬಿಐ, ಆದಾಯ ತೆರಿಗೆ ಇಲಾಖೆ ಮತ್ತು ಇತರ ಸ್ವತಂತ್ರ ಸಂಸ್ಥೆಗಳನ್ನು ಹೆಚ್ಚುವರಿ ಕಾರ್ಯಕಾರಿ ಅಧಿಕಾರದಿಂದ ಮುಕ್ತವಾಗಿಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಸಾಮಾನ್ಯ ವ್ಯಕ್ತಿ ಕಾನೂನನ್ನು ಉಲ್ಲಂಘಿಸಿದಾಗ, ಅವನನ್ನು ಬಂಧಿಸಿ ಜೈಲಿಗೆ ಹಾಕಲಾಗುತ್ತದೆ. ಸರ್ಕಾರ ಅಥವಾ ಪೋಲೀಸರು ಕಾನೂನು ಉಲ್ಲಂಘಿಸಿದಾಗ ಏನು ಮಾಡುತ್ತಾರೆ? ಇದಕ್ಕೆ ನಮ್ಮ ಸಂವಿಧಾನದಲ್ಲಿ ಉತ್ತರವಿಲ್ಲ. ಅಮೆರಿಕಾದಲ್ಲಿ ಇದಕ್ಕೆ ಕಾನೂನು ಇದೆ.
2014 ರಿಂದ ಯುಎಪಿಎ ಅಡಿಯಲ್ಲಿ 8,947 ಪ್ರಕರಣಗಳು, ದೇಶದ್ರೋಹದ ಅಡಿಯಲ್ಲಿ 788 ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ 1,797 ಪ್ರಕರಣಗಳು ದಾಖಲಾಗಿವೆ, ಇದು ಹಿಂದಿನ ಆಡಳಿತಗಳಿಗೆ ಹೋಲಿಸಿದರೆ ಅತಿ ಹೆಚ್ಚು. ಸ್ವತಂತ್ರ ಸಂಸ್ಥೆಗಳಲ್ಲಿರುವ ಅಧಿಕಾರಿಗಳು ರಾಜಕೀಯ ಪಕ್ಷಗಳಿಗೆ ಸೇರುತ್ತಿದ್ದಾರೆ, ಕೆಲವರು ಮಂತ್ರಿಗಳು ಅಥವಾ ರಾಜ್ಯಪಾಲರಾಗುತ್ತಿದ್ದಾರೆ, ಇದು ಅವರು ಅಧಿಕಾರದಲ್ಲಿದ್ದ ವರ್ಷಗಳಲ್ಲಿ ನಿಜವಾಗಿ ಸ್ವತಂತ್ರರಾಗಿದ್ದಾರೋ ಇಲ್ಲವೋ" ಎಂಬ ಬಗ್ಗೆ ಅನುಮಾನಗಳನ್ನು ಮೂಡಿಸುತ್ತವೆ.
ಚುನಾವಣೆಗಳಲ್ಲಿ ನಿಲ್ಲುವ ಶೇ.31ರಷ್ಟು ಅಭ್ಯರ್ಥಿಗಳು ಕೋಟ್ಯಾಧಿಪತಿಗಳು ಮತ್ತು ಶೇ.19ರಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುತ್ತವೆ. ಹೀಗಾಗಿ ಕೇಂದ್ರೀಯ ಸಂಸ್ಥೆಗಳನ್ನು ಸ್ವತಂತ್ರವಾಗಿಡಲು ನಾವು ಕಳಂಕಿತ ಹಿನ್ನೆಲೆಯುಳ್ಳವರು, ಕ್ರಿಮಿನಲ್ ಮೊಕದ್ದಮೆ ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಯದಂತೆ ಮಾಡಬೇಕು. ಈ ಬಗ್ಗೆ ಮತದಾರರಿಗೆ ವಿಶೇಷವಾಗಿ ಯುವಕರಿಗೆ ಶಿಕ್ಷಣ ನೀಡಬೇಕು. ಪ್ರಚಾರ ಮಾಡಬೇಕು. ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರಲು ನ್ಯಾಯಾಂಗದ ಕ್ರಿಯಾಶೀಲತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ನಿರ್ಣಾಯಕವಾಗಿದೆ ಎಂದು ತಿಳಿಸಿದರು.
ಎಡಿಆರ್ ಕೂಡ ಚುನಾವಣಾ ಬಾಂಡ್ ವಿರುದ್ಧ ನ್ಯಾಯಾಲಯಕ್ಕೆ ಹಲವಾರು ಅರ್ಜಿಗಳನ್ನು ಸಲ್ಲಿಸಿದ ಸಂಸ್ಥೆಯಾಗಿದೆ, ಚುನಾವಣಾ ಬಾಂಡ್ ಗಳನ್ನು ಸುಪ್ರೀಂ ಕೋರ್ಟ್ ಅಸಾಂವಿಧಾನಿಕೆ ಎಂದು ನಿಷೇಧಿಸಿದೆ.
Advertisement